ಹೆಣ್ಣು ಶಿಶುವನ್ನು ಕಚ್ಚಿಕೊಂಡು ಹೋದ ನಾಯಿ ; ಅಷ್ಟಕ್ಕೂ ನಾಯಿ ಬಾಯಿಗೆ ಮಗುವನ್ನು ಬಲಿ ಕೊಟ್ಟವರು ಯಾರು?

Share the Article

ಪ್ರಪಂಚ ಎಷ್ಟು ವಿಚಿತ್ರ ಅಲ್ವಾ?. ಒಬ್ಬೊಬ್ಬರಿದ್ದು ಒಂದೊಂದು ಮನಸ್ಥಿತಿ. ಇಲ್ಲಾ ಅನ್ನೋ ಕೊರಗಿನ ನಡುವೆ ಅಯ್ಯೋ ಯಾರಿಗೆ ಬೇಕಪ್ಪಾ ಅನ್ನೋ ಜನಗಳು. ಅದರಲ್ಲಿ ಹಣ-ಆಸ್ತಿನೂ ಆಗಿರಬಹುದು. ಇಲ್ಲ ಮಕ್ಕಳು ಕೂಡ. ಹೌದು. ಜಗತ್ತು ಎಷ್ಟು ಬದಲಾದರೂ, ಕೆಲವೊಂದು ನಂಬಿಕೆಗಳು ಇನ್ನೂ ಇವೆ. ಅವುಗಳಲ್ಲಿ ಒಂದು ‘ಹೆಣ್ಣು’ ಅನ್ನೋ ತಿರಸ್ಕಾರ. ಇಷ್ಟೆಲ್ಲಾ ಹೇಳೋದ್ರ ಹಿಂದಿದೆ ಒಂದು ಘಟನೆ.

ಮಂಡ್ಯ ನಗರದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್) ಆವರಣದಲ್ಲಿ ಮಂಗಳವಾರ ಮುಂಜಾನೆ ಹೆಣ್ಣು ಶಿಶುವನ್ನು ನಾಯಿಯೊಂದು ಕಚ್ಚಿಕೊಂಡು ಓಡಾಡಿರುವ ದೃಶ್ಯ ಕಂಡು ಬಂದಿದೆ. ಈ ಘಟನೆ ಕೇಳಿದ ಮೇಲಂತೂ ಮೈ ಜುಮ್ ಅನ್ನದೇ ಇರದು. ಆದ್ರೆ, ಹೆಣ್ಣು ಮಗುವನ್ನು ನಾಯಿ ಬಾಯಿಗೆ ಬಲಿ ಕೊಟ್ಟವರು ಯಾರು ಎಂಬುದೇ ಇಲ್ಲಿರುವ ಪ್ರಶ್ನೆ..

ಆದ್ರೆ, ಈ ಮಗು ಮಿಮ್ಸ್‌ಗೆ ಸಂಬಂಧಿಸಿದ್ದಲ್ಲ ಎನ್ನುವುದನ್ನು ಅಧಿಕಾರಿಗಳು ಖಚಿತ ಪಡಿಸಿದ್ದಾರೆ. ಹೀಗಿರುವಾಗ ಹೆತ್ತವರು ಬೇಡೆಂದು ಬೀಸಾಡಿ ಹೋದ್ರಾ ಅನ್ನೋ ಅನುಮಾನ ಹುಟ್ಟಿದೆ.

ಮಿಮ್ಸ್‌ನ 7ನೇ ವಾರ್ಡ್ ಬಳಿ ಹೆಣ್ಣು ಮಗುವನ್ನು ನಾಯಿಯೊಂದು ಕಚ್ಚಿ ತಿನ್ನುತ್ತಿದ್ದನ್ನು ಕಂಡ ಸಾರ್ವಜನಿಕರು ಕೂಡಲೇ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ನಂತರ ಬಂದ ಸಿಬ್ಬಂದಿ ನಾಯಿಗಳನ್ನು ಓಡಿಸಿ ಮಗುವನ್ನು ರಕ್ಷಣೆ ಮಾಡಿದ್ದಾರೆ. ದುರಾದೃಷ್ಟವಶಾತ್ ಮಗು ಬದುಕಿಲ್ಲ. ನಂತರ ಶವಾಗಾರಕ್ಕೆ ರವಾನಿಸಲಾಯಿತು.

ಅಧಿಕಾರಿಗಳಿಗೂ ಕೂಡಲೇ ಹೆರಿಗೆ ವಿಭಾಗದವರಿಂದ ಮಾಹಿತಿ ಕಲೆಹಾಕಿದ್ದು, ಅದರಂತೆ ಆ ಮಗು ಮಿಮ್ಸ್‌ಗೆ ಸಂಬಂಧಿಸಿದಲ್ಲ ಎನ್ನುವುದು ಖಚಿತವಾಗುತ್ತಿದ್ದಂತೆ ನಿಟ್ಟುಸಿರು ಬಿಟ್ಟಿದ್ದಾರೆ. ನಿರ್ದೇಶಕ ಡಾ.ಮಹೇಂದ್ರಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಗು ಎಲ್ಲಿಂದ ಬಂತೆನ್ನುವ ಮಾಹಿತಿ ಕಲೆಹಾಕುವ ಕೆಲಸ ನಡೆಯಿತು.

ಅದರಂತೆ ಸೆ.1ರಿಂದ 5ರವರೆಗೆ ನಾಲ್ಕು ನವಜಾತ ಶಿಶು ಮಿಮ್ಸ್‌ನಲ್ಲಿ ಮೃತಪಟ್ಟಿವೆ. ಈ ಪೈಕಿ ಮೂರು ಗಂಡು, ಒಂದು ಹೆಣ್ಣು. ಈ ಹಿನ್ನೆಲೆಯಲ್ಲಿ ಹೆಣ್ಣು ಮಗುವಿಗೆ ಸಂಬಂಧಿಸಿದಂತೆ ಚನ್ನಪಟ್ಟಣ ಮೂಲದ ದಂಪತಿಯಿಂದ ಮಾಹಿತಿ ಪಡೆದಿದ್ದು, ಅವರು ಅಂತ್ಯಸಂಸ್ಕಾರ ಮಾಡಿರುವುದಾಗಿ ತಿಳಿಸಿದ್ದಾರೆ.

ಇನ್ನು ಪ್ರಕರಣ ಸಂಬಂಧ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಜತೆಗೆ ಕಳೆದ 24 ಗಂಟೆಯ ಸಿಸಿ ಕ್ಯಾಮರಾ ದೃಶ್ಯಾವಳಿಯ ದಾಖಲೆಯನ್ನೂ ನೀಡಲಾಗಿದೆ ಎಂದು ಮೆಡಿಕಲ್ ಸೂಪರಿಡೆಂಟ್ ಡಾ.ಶ್ರೀಧರ್ ತಿಳಿಸಿದರು. ಇಷ್ಟೆಲ್ಲಾ ಘಟನೆ ನಡೆದ ಮೇಲೆ ಅನ್ನಿಸೋದು, ಹೆಣ್ಣು ಅಷ್ಟೊಂದು ಕ್ರೂರಿನ..!?

Leave A Reply

Your email address will not be published.