ಕಂದಾವರ : ಕೋರ್ದಬ್ಬು ದೈವಸ್ಥಾನ ಅಪವಿತ್ರ ಪ್ರಕರಣ : ಕಂಡು ಬಂದಿದ್ದು ಮನುಷ್ಯನ ರಕ್ತದ ಕಲೆ

ಮಂಗಳೂರು : ಕಂದಾವರಪದವು ಶ್ರೀ ಕೋರ್ದಬ್ಬು ದೈವಸ್ಥಾನವನ್ನು ರವಿವಾರ ರಾತ್ರಿ ಅಪವಿತ್ರಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುಪುರ ಕೈಕಂಬದ ನಿವಾಸಿ ಸಾಹುಲ್‌ ಹಮೀದ್‌ (27) ನನ್ನು ಬಜಪೆ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

 

ದೈವಸ್ಥಾನದ ಆವರಣದಲ್ಲಿ ರಕ್ತಸಿಕ್ತವಾದ ಬೆಂಕಿಪೆಟ್ಟಿಗೆ, 200 ರೂ. ನೋಟು ಪತ್ತೆಯಾಗಿತ್ತು. ಕುಂಕುಮವನ್ನು ಚೆಲ್ಲಲಾಗಿದೆ. ಸಾಹುಲ್‌ಗೆ ಗುರುಪುರ ಕೈಕಂಬದಲ್ಲಿ ಕೈಗೆ ಗಾಜು ತಾಗಿ ಗಾಯವಾಗಿ ರಕ್ತ ಸುರಿಯುತ್ತಿತ್ತು. ಅದೇ ಸ್ಥಿತಿಯಲ್ಲಿ ದೈವಸ್ಥಾನಕ್ಕೆ ಬಂದಿದ್ದ. ಇದರಿಂದ ದೈವಸ್ಥಾನದ ಅವರಣದಲ್ಲಿ ರಕ್ತಕಲೆಗಳು ಕಾಣಿಸಿಕೊಂಡಿವೆ ಎಂದು ಹೇಳಲಾಗುತ್ತದೆ.

ಮಾ.20ರಂದು ರಾತ್ರಿ 10.45ರ ವೇಳೆಗೆ ಸಾಹುಲ್‌ ಹಮೀದ್‌ ದೈವಸ್ಥಾನಕ್ಕೆ ಬಂದಿರುವುದು ಸಿಸಿ ಕೆಮರಾದಲ್ಲಿ ದಾಖಲಾಗಿದೆ. ದೈವಗಳಿಗೆ ಇಟ್ಟ ದೀಪ ವನ್ನು ನಂದಿಸುವುದು, ಇನ್ನೊಂದೆಡೆ ರಾಹು ಗುಳಿಗ ದೈವಗಳ ದೀಪವನ್ನು ನಂದಿಸುವುದು, ಆವರಣ ಗೋಡೆ ಯಲ್ಲಿ ಸ್ವಲ್ಪ ಹೊತ್ತು ಕುಳಿತು ಬಳಿಕ ದೀಪವನ್ನು ಬೆಳಗಿಸುವುದು, ಬಳಿಕ ಕಟ್ಟೆಗೆ ಅಪ್ರದಕ್ಷಿಣೆ ಬರುವುದು ಕಂಡು ಬಂದಿದೆ. ಆ ಸಮಯದಲ್ಲಿ ಆ ಪ್ರದೇಶ ರಕ್ತಸಿಕ್ತವಾಗಿರುವುದೂ ದೃಶ್ಯದಲ್ಲಿ ಕಾಣಿಸುತ್ತದೆ. ಸುಮಾರು 45 ನಿಮಿಷ ಸಾಹುಲ್‌ ಹಮೀದ್‌ ದೈವಸ್ಥಾನದಲ್ಲಿದ್ದ.

ಈ ಘಟನೆ ಸೋಮವಾರ ಬೆಳಗ್ಗೆ ಗ್ರಾಮದವರಿಗೆ ವಿಷಯ ತಿಳಿದು ಅಲ್ಲಿ ಒಟ್ಟು ಸೇರಿ ಆಕ್ರೋಶ ವ್ಯಕ್ತಪಡಿಸಿದ್ದರು. ಬಜಪೆ ಇನ್‌ಸ್ಪೆಕ್ಟರ್‌ ಸಂದೇಶ್‌ ಪಿ.ಜಿ., ಸಿಬಂದಿ ಆಗಮಿಸಿ, ಸ್ಥಳ ಪರಿಶೀಲನೆ ಹಾಗೂ ಸಿಸಿ ಕೆಮರಾದಲ್ಲಿ ಸೆರೆಯಾದ ದೃಶ್ಯವನ್ನು ವೀಕ್ಷಿಸಿ ಬಳಿಕ ಸಾಹುಲ್‌ನನ್ನು ಬಂಧಿಸಿದ್ದಾರೆ. ದೈವಸ್ಥಾನದ ಆಡಳಿತ ಮಂಡಳಿಯ ದೂರಿನಂತೆ ಆತನ ಮೇಲೆ ಧಾರ್ಮಿಕ ಕ್ಷೇತ್ರವನ್ನು ಅಪವಿತ್ರಗೊಳಿಸಿದ ಪ್ರಕರಣ ದಾಖಲಿಸಲಾಗಿದೆ.

Leave A Reply

Your email address will not be published.