ಬಿಜೆಪಿಗೆ ಮತ ಹಾಕಿದ್ದಕ್ಕಾಗಿ ಮುಸ್ಲಿಂ ಮಹಿಳೆಗೆ ಗಂಡನ ಮನೆಯಿಂದ ಗೇಟ್ ಪಾಸ್ !

ಬಿಜೆಪಿಗೆ ಮತ ಹಾಕಿರುವುದಕ್ಕಾಗಿ ಮುಸ್ಲಿಂ ಮಹಿಳೆಯೋರ್ವಳಿಗೆ ಗಂಡನ ಮನೆಯವರು ಥಳಿಸಿ, ಬೆದರಿಕೆ ಹಾಕಿರುವ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ.

ಉತ್ತರಪ್ರದೇಶದಲ್ಲಿ ತ್ರಿವಳಿ ತಲಾಖ್ ವಿರುದ್ಧದ ಕಾನೂನು ಜಾರಿಯಲ್ಲಿದೆ. ಬಿಜೆಪಿಗೆ ಮತ ಹಾಕಿದ್ದಾಳೆಂಬ ಕಾರಣಕ್ಕಾಗಿ ಆಕ್ರೋಶಗೊಂಡಿರುವ ಗಂಡನ ಮನೆಯವರು ಮಹಿಳೆಯನ್ನ ಥಳಿಸಿ ಹೊರ ಹಾಕಿದ್ದಾಳೆ. ಇದರ ಜೊತೆಗೆ ವಿಚ್ಛೇದನ ನೀಡುವ ಬೆದರಿಕೆ ಹಾಕಿದ್ದಾರೆ.

ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೆ ಕೊಲೆ ಮಾಡುವುದಾಗಿ ಹೆದರಿಸಿದ್ದಾರೆ. ಇದರ ಬೆನ್ನಲ್ಲೇ ಸಂತ್ರಸ್ತೆ, ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖಿ ಅವರ ಸಹೋದರಿ ಫರ್ಹತ್ ನ ಅವರನ್ನ ಭೇಟಿ ಮಾಡಿ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ.

ಬರೇಲಿಯ ಪೊಲೀಸ್ ಠಾಣಾ ವ್ಯಾಪ್ತಿಯ ಎಜಾಜ್ ನಗರದಲ್ಲಿ ಈ ಘಟನೆ ನಡೆದಿದ್ದು, ಉಜ್ಮಾ ಎಂಬ ಮಹಿಳೆ 2021ರ ಜನವರಿ ತಿಂಗಳಲ್ಲಿ ತಸ್ಲಿಮ್ ಅನ್ಸಾರಿ ಜೊತೆ ಮದುವೆ ಮಾಡಿಕೊಂಡಿದ್ದಳು. ಈ ಜೋಡಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಉಜ್ಮಾ ಬಿಜೆಪಿಗೆ ಮತ ಹಾಕಿದ್ದಾಗಿ ಹೇಳಿಕೊಂಡಿದ್ದಳು.

ಆದರೆ ಈ ವಿಷಯ ಗಂಡನ ಮನೆಯವರಿಗೆ ಗೊತ್ತಾಗುತ್ತಿದ್ದಂತೆಯೇ ಸೋದರ ಮಾವ ಆರೀಫ್, ಅತ್ತೆ ಸೇರಿದಂತೆ ಅನೇಕರು ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಮನೆಯಿಂದ ಹೊರ ಹಾಕಿ, ತಲಾಖ್ ನೀಡುವ ಬೆದರಿಕೆ ಹಾಕಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಸಾಮಾಜಿಕ ಕಾರ್ಯಕರ್ತೆ ಫರ್ಹತ್ ನ ದೂರು ದಾಖಲು ಮಾಡಿದ್ದಾರೆ. ಇದರ ಬೆನ್ನಲ್ಲೇ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.

Leave A Reply