ಮಂಗಳೂರು: ಬೆಳ್ಳಂಬೆಳಗ್ಗೆ ಕಾರಿನಲ್ಲಿ ಬಂದ ಮುಸುಕುಧಾರಿಗಳಿಂದ ಮೀನಿನ ಟೆಂಪೋ ಅಡ್ಡಗಟ್ಟಿ 2 ಲಕ್ಷ ರೂ. ದರೋಡೆ !! | ವಿರೋಧ ವ್ಯಕ್ತಪಡಿಸಿದ ವ್ಯಾಪಾರಿಗೆ ತಲವಾರಿನಿಂದ ಹಲ್ಲೆ

ಉಳ್ಳಾಲ: ಕಾರಿನಲ್ಲಿ ಬಂದ ಮುಸುಕುಧಾರಿಗಳು ಮೀನಿನ ಟೆಂಪೋವೊಂದನ್ನು ತಡೆದು ನಿಲ್ಲಿಸಿ, ವ್ಯಾಪಾರಿ ಮೇಲೆ ತಲವಾರಿನಿಂದ ಹಲ್ಲೆಗೈದು ಎರಡು ಲಕ್ಷ ರೂಪಾಯಿ ದರೋಡೆಗೈದ ಘಟನೆ ರಾ.ಹೆ. 66 ರ ಆಡಂಕುದ್ರು ಎಂಬಲ್ಲಿ ನಡೆದಿದೆ.

ಉಳ್ಳಾಲ ಮುಕ್ಕಚ್ಚೇರಿಯ ಮೀನಿನ ವ್ಯಾಪಾರಿ ಮುಸ್ತಾಫ(47) ತಲವಾರಿನ ಏಟಿನಿಂದ ಗಂಭೀರ ಗಾಯಗೊಂಡ ವ್ಯಾಪಾರಿ.

ಇಂದು ಬೆಳಗ್ಗೆ 6.15ರ ವೇಳೆಗೆ ಉಳ್ಳಾಲ ನೇತ್ರಾವತಿ ಸೇತುವೆ ಬಳಿಯ ಆಡಂಕುದ್ರು ಎಂಬಲ್ಲಿ ಘಟನೆ ನಡೆದಿದ್ದು, ಮುಸ್ತಾಫ ಅವರು ಎಂದಿನಂತೆ ಬೆಳಗ್ಗೆ ತನ್ನ ಏಸ್ ಟೆಂಪೋದಲ್ಲಿ ಮಂಗಳೂರಿನ ದಕ್ಕೆಗೆ ಮೀನು ತರಲೆಂದು ಹೊರಟಿದ್ದರು. ಟೆಂಪೋದಲ್ಲಿ ಮಾಸ್ತಿಕಟ್ಟೆಯ ಮೂಸ ಎಂಬವರು ಜೊತೆಗೆ ಪಯಣಿಸುತ್ತಿದ್ದರು. ಟೆಂಪೊ ಆಡಂಕುದ್ರು ತಲುಪುತ್ತಿದ್ದಂತೆಯೇ ಹಿಂದಿನಿಂದ ಧಾವಿಸಿ ಬಂದ ಕೆಂಪು ಬಣ್ಣದ ರಿಟ್ಝ್ ಕಾರು ಮುಸ್ತಾಫ ಅವರನ್ನು ತಡೆದು ನಿಲ್ಲಿಸಿದೆ.

ಕಾರಿನಲ್ಲಿದ್ದ ಇಬ್ಬರು ಮುಸುಕುಧಾರಿಗಳು ಕೆಳಗಿಳಿದು ಮುಸ್ತಾಫ ಅವರಲ್ಲಿದ್ದ ಹಣದ ಬ್ಯಾಗನ್ನು ಕೊಡುವಂತೆ ಹೇಳಿದ್ದಾರೆ. ಟೆಂಪೋದಲ್ಲಿಯೇ ಇದ್ದ ಮುಸ್ತಾಫ ಅವರು ಹಣ ಕೊಡಲು ನಿರಾಕರಿಸಿದ ಕಾರಣ, ತಲವಾರನ್ನು ಮುಸ್ತಾಫ ಅವರ ಕುತ್ತಿಗೆಗೆ ಇಟ್ಟು ಹಣ ಎಗರಿಸಿದ್ದಾರೆ. ಆದರೂ ಇದನ್ನು ವಿರೋಧಿಸಿದ ಮುಸ್ತಾಫ ಅವರು ತಲವಾರಿನ ಅಲಗನ್ನು ಗಟ್ಟಿಯಾಗಿ ಎರಡು ಕೈಗಳಲ್ಲಿ ಹಿಡಿದಿದ್ದು ಆಗಂತುಕರು ತಲವಾರನ್ನು ಎಳೆದಾಗ ಎರಡೂ ಕೈಗಳಿಗೂ ಗಂಭೀರ ಗಾಯಗಳಾಗಿದೆ.

ಮುಸ್ತಾಫ ಅವರಲ್ಲಿದ್ದ 2 ಲಕ್ಷ 5 ಸಾವಿರ ರೂಪಾಯಿ ಹಣವನ್ನು ದರೋಡೆಕೋರರು ದೋಚಿ ಪರಾರಿಯಾಗಿದ್ದಾರೆ. ಗಾಯಾಳು ಮುಸ್ತಾಫ ಅವರು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದರೋಡೆ ನಡೆದ ಸ್ಥಳಕ್ಕೆ ಎಸಿಪಿ ದಿನಕರ ಶೆಟ್ಟಿ ನೇತೃತ್ವದ ಪೊಲೀಸ್ ತಂಡ ಭೇಟಿ ನೀಡಿ ಸಿಸಿ ಕ್ಯಾಮೆರಾ ಫೂಟೇಜನ್ನ ಪರಿಶೀಲನೆ ನಡೆಸಿದೆ. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.