ಈ ಗ್ರಾಮದಲ್ಲಿನ ಬೇವಿನ ಮರದಲ್ಲಿ ಹಾಲು ಸುರಿಯುತ್ತಿದೆಯಂತೆ !! | ಇದೊಂದು ಪವಾಡ ಎಂದು ನಂಬಿ ಮರಕ್ಕೆ ಗ್ರಾಮಸ್ಥರಿಂದ ಪೂಜೆ-ಪುನಸ್ಕಾರ

ಪ್ರಪಂಚದಲ್ಲಿ ದಿನಕ್ಕೊಂದು ವಿಚಿತ್ರ ಘಟನೆಗಳು ಸಂಭವಿಸುತ್ತಿರುತ್ತವೆ. ಹಾಗೆಯೇ ತೀರಾ ವಿಚಿತ್ರವೆಂಬಂತಹ ಘಟನೆ ಇಲ್ಲೊಂದು ನಡೆದಿದೆ. ಕೊಪ್ಪಳದ ಗ್ರಾಮವೊಂದರಲ್ಲಿ ಬೇವಿನ ಮರದಲ್ಲಿ ಹಾಲು ಸುರಿಯುತ್ತಿದ್ದು ಅದನ್ನು ನೋಡಲು ಜನಸಾಗರವೇ ಹರಿದು ಬರುತ್ತಿದೆ.

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕು ಬಿಜಕಲ್ ಗ್ರಾಮದಲ್ಲಿ ಬೇವಿನ ಮರದಿಂದ ಬಿಳಿ ದ್ರವ ಸುರಿಯುತ್ತಿದ್ದು, ಇದಕ್ಕೆ ಗ್ರಾಮಸ್ಥರು ಪೂಜೆ ಸಲ್ಲಿಸುತ್ತಿದ್ದಾರೆ. ಬಿಜಕಲ್ ಗ್ರಾಮದ ಗೋಪಾಲರಾವ್ ದೇಸಾಯಿ ಅವರ ಹೊಲದಲ್ಲಿ ಈ ಬೇವಿನ ಮರವಿದೆ. ಇದೊಂದು ಪವಾಡ ಎಂದು ನಂಬಿ, ಜನರು ಪೂಜೆ ಸಲ್ಲಿಸುತ್ತಿದ್ದಾರೆ.

ಮರದ ಬುಡದಲ್ಲಿ ಕಲ್ಲುಗಳನ್ನಿಟ್ಟು ಗದ್ದಿ ದ್ಯಾಮಮ್ಮ ದೇವರನ್ನು ಪ್ರತಿಷ್ಠಾಪಿಸಿ ಅಲ್ಲಿಯೂ ಗ್ರಾಮಸ್ಥರು ಪೂಜೆ ಸಲ್ಲಿಸುತ್ತಿದ್ದಾರೆ. ಮಾತ್ರವಲ್ಲದೇ ಇಂಥದ್ದೊಂದು ಪವಾಡದಿಂದ ತಮಗೆ ಒಳ್ಳೆಯದಿದೆಯೋ, ಕೆಡುಕೋ ಎಂಬ ಕುರಿತು ಜ್ಯೋತಿಷಿ ಮನೆಗೂ ಗ್ರಾಮಸ್ಥರು ಹೋಗುತ್ತಿರುವುದಾಗಿ ವರದಿಯಾಗಿದೆ. ವಿಶೇಷ ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ಜ್ಯೋತಿಷಿಗಳ ಹೇಳುತ್ತಿರುವ ಕಾರಣ, ಜನರು ಇಲ್ಲಿ ಪೂಜೆ ಸಲ್ಲಿಸಲು ಮುಗಿ ಬಿದ್ದಿದ್ದಾರೆ.

ಅಷ್ಟಕ್ಕೂ ವೈಜ್ಞಾನಿಕವಾಗಿ ಹೇಳುವುದಾದರೆ, ಇದೇನೂ ವಿಶೇಷವಲ್ಲ. ಮರದಲ್ಲಿರುವ ಫ್ಲ್ಯುಯಿಡ್ ಅಂಶ, ಕೀಟಗಳಿಂದ ಎದುರಾಗುವ ರೋಗವನ್ನು ಸ್ವಯಂ ನಿಯಂತ್ರಿಸಿಕೊಳ್ಳಲು ಈ ರೀತಿಯ ರಸವನ್ನು ಹೊರಹಾಕುತ್ತವೆ. ಆದರೆ ಇದನ್ನೇ ಪವಾಡವೆಂದು ನಂಬಿರುವ ಜನರು ಪೂಜೆ ಮಾಡಲು ಶುರು ಮಾಡಿದ್ದಾರೆ.

Leave A Reply

Your email address will not be published.