ಒಂದು ತಿಂಗಳೊಳಗೆ 52 ಲಕ್ಷ ರೂ. ಸಾಲ ಮರು ಪಾವತಿ ಮಾಡುವಂತೆ ದ್ವಾರಕೀಶ್ ಗೆ ಚಾಟಿ ಬೀಸಿದ ಕೋರ್ಟ್ | ಕೋರ್ಟ್ ನಲ್ಲಿ “ಕನ್ನಡದ ಕುಳ್ಳ” ನಿಗೆ ಭಾರಿ ಮುಖಭಂಗ

ಸ್ಯಾಂಡಲ್​ವುಡ್ ನ ಹಿರಿಯ ನಟ “ಕನ್ನಡದ ಕುಳ್ಳ” ಎಂದೇ ಖ್ಯಾತರಾಗಿರುವ ದ್ವಾರಕೀಶ್​ ಅವರ ವಿರುದ್ಧ ಇದೀಗ ವಂಚನೆ ಆರೋಪ ಕೇಳಿಬಂದಿದ್ದು, 50 ಲಕ್ಷ ರೂ. ಸಾಲದ ಪಡೆದ ಹಣವನ್ನು ವಾಪಸ್ ಕೊಡದೆ ಸತಾಯಿಸುತ್ತಿರುವ ಆರೋಪ ಅವರ ಮೇಲಿದ್ದು, ಹಣ ಮರುಪಾವತಿಸುವಂತೆ ಕೋರ್ಟ್​ ತೀರ್ಪು ನೀಡಿದೆ.

ಈ ಮೊದಲು ಸಾಲ ಕೊಟ್ಟವರ ವಿರುದ್ಧವೇ ಕೊಲೆ ಯತ್ನ ಕೇಸ್ ಹಾಕಿ ದ್ವಾರಕೀಶ್​ ಸೋತಿದ್ದರು. ಇದೀಗ 52 ಲಕ್ಷ ರೂಪಾಯಿ ಸಾಲದ ಹಣ ವಾಪಸ್ ನೀಡುವಂತೆ ಕೋರ್ಟ್ ತೀರ್ಪು ನೀಡಿದೆ. 2013ರಲ್ಲಿ ಕೆಸಿಎನ್ ಚಂದ್ರಶೇಖರ್​ರಿಂದ ದ್ವಾರಕೀಶ್​ ಅವರು ಸಾಲ ಪಡೆದುಕೊಂಡಿದ್ದರು. ನಟಿ ಪ್ರಿಯಾಮಣಿ ಅಭಿನಯದ ಚಾರುಲತಾ ಸಿನಿಮಾ ಬಿಡುಗಡೆಗಾಗಿ ದ್ವಾರಕೀಶ್ ಸಾಲ ಪಡೆದಿದ್ದರು.

ದ್ವಾರಕೀಶ್ ಸಂಬಂಧಿ ಸಂಜೀವ್ ಎಂಬುವರು ಕೆಸಿಎನ್ ಚಂದ್ರಶೇಖರ್​ರಿಂದ ಹಣ ಕೊಡಿಸಿದ್ದರು. 50 ಲಕ್ಷ ರೂಪಾಯಿ ಸಾಲ ಪಡೆಯುವ ವೇಳೆಯಲ್ಲಿ ದ್ವಾರಕೀಶ್​ ಅವರು ಚೆಕ್ ನೀಡಿದ್ದರು. ಆದರೆ, ನಾನು ಚೆಕ್ ನೀಡಿಯೇ ಇಲ್ಲ ಮತ್ತು ಚೆಕ್​ನಲ್ಲಿರುವ ಸಹಿಯೂ ಕೂಡ ನನ್ನದಲ್ಲ ಎಂದು ಕೋರ್ಟಿನಲ್ಲಿ ದ್ವಾರಕೀಶ್​ ವಾದಿಸಿದ್ದರು. ಆದರೆ, ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಚೆಕ್​ ಮೇಲಿರುವ ಸಹಿ ದ್ವಾರಕೀಶ್ ಅವರದ್ದೇ ಎಂದು ಸಾಬೀತಾಗಿತ್ತು.

2019 ರಲ್ಲಿ ಕೋರ್ಟ್ 52 ಲಕ್ಷ ರೂ. ಹಣ ಹಿಂದಿರುಗಿಸುವಂತೆ ದ್ವಾರಕೀಶ್ ಅವರಿಗೆ ಆದೇಶಿಸಿತ್ತು. ಆದರೆ, ಹಣ ಹಿಂದಿರುಗಿಸದೇ ಸೆಷನ್ಸ್ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು. ಕೆಳ ನ್ಯಾಯಾಲಯದ ಆದೇಶವನ್ನು ಸೆಷನ್ಸ್ ಕೋರ್ಟ್ ಎತ್ತಿಹಿಡಿದಿದ್ದು, ಇದೀಗ ದ್ವಾರಕೀಶ್​ಗೆ ಮುಖಭಂಗವಾಗಿದೆ. ಕೇವಲ ಒಂದು ತಿಂಗಳಲ್ಲಿ 52 ಲಕ್ಷ ರೂಪಾಯಿ ಹಣ ಹಿಂದಿರುಗಿಸುವಂತೆ ಕೋರ್ಟ್ ಆದೇಶ ಹೊರಡಿಸಿದೆ.

ಈ ಬಗ್ಗೆ ಮಾತನಾಡಿರುವ ದ್ವಾರಕೀಶ್ ಸಂಬಂಧಿ ಸಂಜೀವ್ ಕುಮಾರ್, ನಾನು ಮತ್ತು ಚಂದ್ರಶೇಖರ್ ಸ್ನೇಹಿತರು. ಚಾರುಲತಾ ಸಿನಿಮಾ ರಿಲೀಸ್ ವೇಳೆ ದ್ವಾರಕೀಶ್​ ಅವರಿಗೆ ಸಂಕಷ್ಟ ಎದುರಾಗಿತ್ತು. ಈ ವೇಳೆ 2013ರಲ್ಲಿ ನಾನೇ ಚಂದ್ರಶೇಖರ್ ಬಳಿ ಮಾತನಾಡಿ 50 ಲಕ್ಷ ರೂ. ಹಣ ಕೊಡಿಸಿದ್ದೆ. ನಂತರ ಸಾಕಷ್ಟು ಬಾರಿ ಹಣ ಕೊಡದೆ ಸತಾಯಿಸಿದ್ದರು. ಅಲ್ಲದೆ, ಚೆಕ್ ಕೊಟ್ಟು ನಂತರ ಸಹಿನೂ ನನ್ನದಲ್ಲ ಅಂತ ಕೋರ್ಟ್​ನಲ್ಲಿ ಹೇಳಿದ್ದರು. ನನ್ನ ಮೇಲೆ ಹಾಗೂ ಚಂದ್ರಶೇಖರ್ ಮೇಲೆ ಈ ಹಿಂದೆ ಎಚ್ಎಸ್ಆರ್ ಲೇಔಟ್​ನಲ್ಲಿ ಕೊಲೆ ಕೇಸ್ ಸಹ ದಾಖಲಿಸಿದ್ದರು. ನಂತರ ನಾವು ಬೇಲ್ ತೆಗೆದುಕೊಂಡಿದ್ದೆವು. ಕೆಳ ನ್ಯಾಯಾಲಯದಲ್ಲಿ ನಮ್ಮ ಪರ ತೀರ್ಪು ಬಂದಿತ್ತು. ಆದ್ರೆ, ದ್ವಾರಕೀಶ್ ಮತ್ತೆ 5 ಲಕ್ಷ ರೂ. ಕಟ್ಟಿ ಸೆಷನ್ಸ್ ಕೋರ್ಟ್ ಮೆಟ್ಟಿಲೇರಿದ್ರು. ಇದೀಗ ಮತ್ತೆ ಕೇಸ್ ನಮ್ಮ ಪರವಾಗಿದೆ. ದ್ವಾರಕೀಶ್ ಈ ರೀತಿ ಮಾತನಾಡಬಾರದು. ನಮಗೆ ನ್ಯಾಯಕ್ಕೆ ಸಿಕ್ಕಿದೆ ಎಂದಿದ್ದಾರೆ.

Leave A Reply

Your email address will not be published.