ಮಾರಕಕಾಯಿಲೆ ಕ್ಯಾನ್ಸರ್ ಅನ್ನು ತಡೆಗಟ್ಟುವತ್ತ ಇಡೋಣ ದಿಟ್ಟ ಹೆಜ್ಜೆ | ಈ ರೀತಿಯ ಜೀವನ ಶೈಲಿ ಅನುಸರಿಸಿದರೆ ಉತ್ತಮ ಆರೋಗ್ಯ ನಿಮ್ಮ ಕೈ ಯಲ್ಲಿ !!

ಕ್ಯಾನ್ಸರ್ ಒಂದು ಮಾರಣಾಂತಿಕ ಕಾಯಿಲೆ. ಸದ್ಯ ಭಾರತದಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡಗಳು ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಗಳು. ಇವುಗಳ ಸರಣಿಗೆ ಕ್ಯಾನ್ಸರ್‌ನಂತಹ ಕಾಯಿಲೆಗಳು ಸೇರುತ್ತಿರುವುದು ಆತಂಕಕಾರಿ ವಿಷ‌ಯ. ಬಹುತೇಕ ಕ್ಯಾನ್ಸರ್‌ಗಳು ಅಂತಿಮ ಹಂತದಲ್ಲೇ ಪತ್ತೆಯಾಗುತ್ತಿರುವುದು ಕೂಡ ಶೋಚನೀಯವೇ.

ಕ್ಯಾನ್ಸರ್ ಎನ್ನುವುದು ದೇಹದ ಯಾವುದಾದರೂ ಅಸಹಜ ಜೀವಕೋಶಗಳ ಅನಿಯಂತ್ರಿತ ಬೆಳವಣಿಗೆಯಿಂದ ಸಂಭವಿಸುವ ರೋಗವಾಗಿದೆ. ನಮ್ಮ ಜೀವನಶೈಲಿ ಆಯ್ಕೆಗಳಿಂದ ಕ್ಯಾನ್ಸರ್ ಅನ್ನು ನಾವೇ ಅಭಿವೃದ್ಧಿಪಡಿಸುವ ಸಾಧ್ಯತೆಗಳಿವೆ ಎಂದು ಹಲವು ಸಂಶೋಧನೆಗಳು ಬಹಿರಂಗಪಡಿಸುತ್ತವೆ.

ಇನ್ನೊಂದು ವರದಿಯ ಪ್ರಕಾರ ಧೂಮಪಾನ ಮತ್ತು ಮದ್ಯಪಾನ ಸೇವನೆಯು ಶ್ವಾಸಕೋಶ, ಅನ್ನನಾಳ, ಬಾಯಿ, ಗಂಟಲು, ಮೂತ್ರಪಿಂಡ, ಮೂತ್ರಕೋಶ, ಯಕೃತ್ತು, ಮೇದೋಜ್ಜೀರಕ ಗ್ರಂಥಿ, ಹೊಟ್ಟೆ, ಕೊಲೊನ್ ಮತ್ತು ಗುದನಾಳದ ಕಾನ್ಸರ್‌ಗೆ ಕಾರಣವಾಗುತ್ತದೆ.

ಇವೆಲ್ಲವನ್ನೂ ಬರದಂತೆ ತಡೆಯಲು ಆಹಾರ ಹಾಗೂ ಜೀವನಶೈಲಿಯಿಂದ ನಾವು ಹೇಗೆಲ್ಲ ಜಾಗ್ರತೆ ವಹಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ. ಈ ಮಾರಕ ರೋಗವನ್ನು ತಡೆಯಲು ನಮ್ಮ ಜೀವನ ಶೈಲಿಯನ್ನು ಕಿಂಚಿತ್ತಾದರೂ ಬದಲಾಯಿಸಿಕೊಳ್ಳೋಣ.

ತಂಬಾಕು ಸೇವನೆ ತ್ಯಜಿಸಿ:

ತಂಬಾಕು ಸೇವನೆ ಬಾಯಿ ಹಾಗೂ ಮೇದೋಜೀರಕ ಗ್ರಂಥಿಯ ಕ್ಯಾನ್ಸರ್ ಗೆ ಮುಖ್ಯ ಕಾರಣವಾಗಿದೆ.‌ನೀವು ತಂಬಾಕು ಬಳಸದಿದ್ದರೂ, ಸೆಕೆಂಡ್ ಹ್ಯಾಂಡ್ ಹೊಗೆಗೆ ಒಡ್ಡಿಕೊಳ್ಳುವುದು ಕೂಡ ಶ್ವಾಸಕೋಶದ ಕ್ಯಾನ್ಸರ್ ಅನ್ನು ಆಹ್ವಾನಿಸುತ್ತದೆ. ಹೀಗಾಗಿ, ಯಾವುದೇ ವೆಚ್ಚದಲ್ಲಿ ತಂಬಾಕು ಸೇವನೆ ತಪ್ಪಿಸಿ. ಹುಕ್ಕಾ, ಸಿಗಾರ್‌ಗಳು, ಮತ್ತು ಸಿಗರೇಟ್‌ಗಳನ್ನು ತಪ್ಪಿಸಿ. ಧೂಮಪಾನವನ್ನು ತೊರೆಯಲು, ನಿಮಗೆ ಸರಿಯಾಗಿ ಮಾರ್ಗದರ್ಶನ ನೀಡಲು ಸಾಧ್ಯವಾಗುವ ವೈದ್ಯರನ್ನು ಸಂಪರ್ಕಿಸಿ. ಇಲ್ಲವೇ ಧೂಮಪಾನ ನಿಲುಗಡೆಗೆ ಸಂಬಂಧಿಸಿದ ಕಾರ್ಯಕ್ರಮ ಆಯ್ದುಕೊಳ್ಳಬಹುದು.

ಆರೋಗ್ಯಕರ ಹಾಗೂ ಪೌಷ್ಟಿಕ ಆಹಾರ:

ಆರೋಗ್ಯ ಹೆಚ್ಚಿಸಲು ಮತ್ತು ಎಲ್ಲಾ ಅಗತ್ಯ ಜೀವಸತ್ವಗಳು ಮತ್ತು ಖನಿಜಗಳನ್ನು ಆಹಾರದಲ್ಲಿ ಸೇರಿಸುವ ಮೂಲಕ ಕ್ಯಾನ್ಸರ್ ಅನ್ನು ದೂರವಿಡಲು ಸಾಧ್ಯ. ತಾಜಾ ಹಣ್ಣುಗಳು, ತರಕಾರಿಗಳು, ಬೀಜಗಳು, ಧಾನ್ಯಗಳು ಮತ್ತು ಬೀನ್ಸ್ ತಿನ್ನಲು ಪ್ರಯತ್ನಿಸಿ. ಟ್ರಾನ್ಸ್ ಮತ್ತು ಸ್ಯಾಚುರೇಟೆಡ್ ಕೊಬ್ಬಿನ ಸೇವನೆಯನ್ನು ತಪ್ಪಿಸಿ. ಕರಿದ ಆಹಾರಗಳನ್ನು ಕಡಿಮೆ ಮಾಡಿ. ಆಲ್ಕೋಹಾಲ್ ಸೇವನೆಯನ್ನು ಮಿತಿಗೊಳಿಸುವುದು ಸಹ ನಿಮಗೆ ಪ್ರಯೋಜನಕಾರಿಯಾಗಿದೆ. ಸಾಧ್ಯವಾದಷ್ಟು ಮನೆ ಊಟಕ್ಕೆ ಪ್ರಾಧಾನ್ಯತೆ ನೀಡಿ.

ಸ್ಥೂಲಕಾಯತೆ ಮತ್ತು ಹೆಚ್ಚಿದ ಆಲ್ಕೋಹಾಲ್ ಸೇವನೆಯಿಂದಾಗಿ ಸ್ತನ ಕ್ಯಾನ್ಸರ್ ಕಂಡುಬರುತ್ತದೆ. ಇದಲ್ಲದೆ, ಸೂರ್ಯನ ನೇರಳಾತೀತ ವಿಕಿರಣಕ್ಕೆ ಚರ್ಮವನ್ನು ಒಡ್ಡಿಕೊಳ್ಳುವುದರಿಂದ ಹೆಚ್ಚಿನ ಚರ್ಮದ ಕ್ಯಾನ್ಸರ್ ಉಂಟಾಗುತ್ತದೆ. ರೋಗಮುಕ್ತ ಜೀವನ ನಡೆಸಲು ಪ್ರಯತ್ನಿಸಲು ಕೆಲವು ಮಾರ್ಗಗಳನ್ನು ಅನುಸರಿಸಬಹುದಾಗಿದೆ.

ವ್ಯಾಯಾಮ ಮಾಡಿ:

ಅಧಿಕ ತೂಕ ಅಥವಾ ಬೊಜ್ಜು ಹೊಂದಿದ್ದೀರಾ? ಇದರಿಂದ ಸ್ತನ, ಶ್ವಾಸಕೋಶ, ಕೊಲೊನ್ ಮತ್ತು ಮೂತ್ರಪಿಂಡದ ಕ್ಯಾನ್ಸರ್ ಬರಬಹುದು. ಇದನ್ನು ತಪ್ಪಿಸಲು ವ್ಯಾಯಾಮವನ್ನು ಪ್ರಾರಂಭಿಸಬೇಕು. ವಾರಕ್ಕೆ ಕನಿಷ್ಠ 150 ನಿಮಿಷಗಳ ಕಾಲ ವ್ಯಾಯಾಮ ಮಾಡಲು ಪ್ರಯತ್ನಿಸಿ. ನೀವು ಯೋಗ, ರನ್ನಿಂಗ್, ಈಜು, ಸೈಕ್ಲಿಂಗ್, ವಾಕಿಂಗ್ ಮತ್ತು ಏರೋಬಿಕ್ಸ್‌ ನಂತಹ ವಿವಿಧ ಚಟುವಟಿಕೆಗಳನ್ನು ಮಾಡಬಹುದು. ವಾರದಲ್ಲಿ 5 ದಿನ 30 ನಿಮಿಷಗಳ ಕಾಲ ವ್ಯಾಯಾಮ ಮಾಡಿ. ನಿಯಮಿತ ದೈಹಿಕ ಚಟುವಟಿಕೆಯು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಮತ್ತು ಆರೋಗ್ಯದ ಗುಣಮಟ್ಟವನ್ನು ಸುಧಾರಿಸುತ್ತದೆ.

ಸೂರ್ಯನ ಬೆಳಕಿನಿಂದ ರಕ್ಷಣೆ:

ಸೂರ್ಯನಿಂದ ಬರುವ ನೇರಳಾತೀತ (UV) ಕಿರಣಗಳಿಗೆ ಒಡ್ಡಿಕೊಳ್ಳುವುದರಿಂದ ಚರ್ಮದ ಕ್ಯಾನ್ಸರ್ ಸಾಮಾನ್ಯವಾಗಿ ಕಂಡುಬರುತ್ತದೆ. ಇದನ್ನು ತಪ್ಪಿಸಲು ವೈದ್ಯರು ಶಿಫಾರಸು ಮಾಡಿದ ಸನ್‌ಸ್ಕ್ರೀನ್ ಬಳಸಿ.

ಕ್ಯಾನ್ಸರ್ ಪೀಡಿತರು ಕುಟುಂಬದಲ್ಲಿದ್ದರೆ ಮಾಹಿತಿ ಪಡೆಯಿರಿ:

ನಿಮ್ಮ ಮನೆಯಲ್ಲಿ ಕ್ಯಾನ್ಸರ್ ಪೀಡಿತರು ಇದ್ದರೆ ಕ್ಯಾನ್ಸರ್ ಸ್ಕ್ರೀನಿಂಗ್ ಹೋಗಿ. ಕೆಲವು ಪರೀಕ್ಷೆಗಳು ಕ್ಯಾನ್ಸರ್ ಅನ್ನು ಮೊದಲೇ ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಇದರಿಂದ ಅಪಾಯವನ್ನು ತಪ್ಪಿಸಬಹುದು. ಕ್ಯಾನ್ಸರ್ ಸಾಧ್ಯತೆಯನ್ನು ಕಡಿಮೆ ಮಾಡಲು ನೀವು ಯಾವ ರೀತಿಯ ಪರೀಕ್ಷೆಗಳನ್ನು ಮಾಡಬೇಕೆಂದು ವೈದ್ಯರ ಸಲಹೆ ಪಡೆಯಿರಿ.

Leave A Reply

Your email address will not be published.