Madhavi Latha: ಓವೈಸಿ ವಿರುದ್ಧ ಕಣಕ್ಕಿಳಿದಿರೋ ತೆಲಂಗಾಣದ ಶ್ರೀಮಂತ ಮಹಿಳೆ -ಯಾರು ಈ ಮಾಧವಿ ಲತಾ, ಒಟ್ಟು ಆಸ್ತಿ ಎಷ್ಟು?

Madhavi Latha: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೇಶದ ಕುತೂಹಲ ಕೆರಳಿಸಿರುವ ಕ್ಷೇತ್ರಗಳಲ್ಲಿ ಹೈದರಾಬಾದ್(Hyderabad) ಲೋಕಸಭಾ ಕ್ಷೇತ್ರ ಕೂಡ ಒಂದು. ದೇಶದ ಪ್ರಭಾವಿ ಸಂಸದರಲ್ಲಿ ಒಬ್ಬರಾಗಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ(Asaduddin Owaisi) ಪ್ರತಿನಿಧಿಸುವ ಕ್ಷೇತ್ರವಿದು. ಆದರೆ ಈ ಸಲ ಹೇಗಾದರು ಮಾಡಿ ಒವೈಸಿಯನ್ನು ಮಣಿಸಬೇಕೆಂದು ನಿರ್ಧರಿಸಿರುವ ಬಿಜೆಪಿ(BJP) ಎದುರಾಳಿಯಾಗಿ ತೆಲಂಗಾಣದ ಪ್ರಭಾವಿ ಶ್ರೀಮಂತ ಮಹಿಳೆಯನ್ನು ಕಣಕ್ಕಿಳಿಸಿದೆ. ಹಾಗಿದ್ದರೆ ಯಾರು ಈ ಮಾಧವಿ ಲತಾ? ಇವರ ಒಟ್ಟು ಆಸ್ತಿ ಎಷ್ಟು? ಎಂಬ ಹಲವು ಕುತೂಹಲದ ಅಂಶಗಳು ಇಲ್ಲಿವೆ ನೋಡಿ.

ಇದನ್ನೂ ಓದಿ:  Camille Alexander: ತನ್ನ ಕಂಕುಳು, ಖಾಸಗಿ ಭಾಗದ ಕೂದಲು ಮಾರಿ ಲಕ್ಷ ಲಕ್ಷ ಗಳಿಸುತ್ತಾಳೆ ಈಕೆ – ಕೊಳ್ಳೋದು ಯಾರು?

ಹೌದು, ಅಸಾದುದ್ದೀನ್‌ ಓವೈಸಿ ವಿರುದ್ಧ ಬಿಜೆಪಿಯು ಮಹಿಳಾ ಅಭ್ಯರ್ಥಿ ಮಾಧವಿ ಲತಾ (Madhavi Latha) ಎಂಬುವವರುನ್ನು ಕಣಕ್ಕಿಳಿಸಿದೆ. ಇವರು ತೆಲಂಗಾಣದ ಅತ್ಯಂತ ಶ್ರೀಮಂತ ಮಹಿಳೆಯರಲ್ಲಿ ಒಬ್ಬರು. ಅಲ್ಲದೆ ನಾಮಪತ್ರ ಸಲ್ಲಿಕೆ ವೇಳೆ ಇವರು ತಮ್ಮ ಕುಟುಂಬದ ಆಸ್ತಿ ವಿವರ ಘೋಷಿಸಿಕೊಂಡಿದ್ದು, ತೆಲಂಗಾಣದ ಅತ್ಯಂತ ಶ್ರೀಮಂತ ಅಭ್ಯರ್ಥಿಗಳಲ್ಲಿ ಒಬ್ಬರಾಗಿದ್ದಾರೆ. ಅಂದರೆ ಮಾಧವಿ ಲತಾ ಅವರ ಕುಟುಂಬ ಬರೋಬ್ಬರಿ 221.38 ಕೋಟಿ ರೂ. ಆಸ್ತಿ (Assets) ಹೊಂದಿದ್ದಾರೆ.

ಇದನ್ನೂ ಓದಿ: Parliment Election : ಮಂಗಳೂರು ಮತಗಟ್ಟೆ – ಬಿಜೆಪಿ ಕಾರ್ಯಕರ್ತನಿಂದ ಗೂಂಡಾಗಿರಿ !!

ಯಾರು ಈ ಮಾಧವಿ ಲತಾ?

ಆರ್‌ಎಸ್‌ಎಸ್‌ನ ಕಟ್ಟಾ ಕಾರ್ಯಕರ್ತೆ, ಹೋರಾಟಗಾರ್ತಿ, ಭರತನಾಟ್ಯ ಕಲಾವಿದೆ ಮಾಧವಿ ಲತಾ (Madhavi Latha) ಅವರನ್ನು ಭಾರತೀಯ ಜನತಾ ಪಾರ್ಟಿ ಅಖಾಡಕ್ಕೆ ಇಳಿಸಿದೆ. ಈ ಮೂಲಕ ಓವೈಸಿ ವಿರುದ್ಧ ಈ ಬಾರಿ ಗೆಲ್ಲಲೇಬೇಕು ಎಂಬ ಹಠಕ್ಕೆ ಬಿಜೆಪಿ ಬಿದ್ದಂತಿದೆ.

ನಿಜಾಮ್ ಕಾಲೇಜಿನಲ್ಲಿ ಸಾರ್ವಜನಿಕ ಆಡಳಿತದಲ್ಲಿ ಪದವಿ ಮತ್ತು ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಮಾಧವಿ ಲತಾ ಅವರು ಪಡೆದಿದ್ದಾರೆ. ಇವರ ಮೂವರು ಮಕ್ಕಳಲ್ಲಿ ಇಬ್ಬರು ಐಐಟಿ ಮದ್ರಾಸ್‌ನಲ್ಲಿ ಓದುತ್ತಿದ್ದಾರೆ. ಹೋಮ್‌ ಸ್ಕೂಲಿಂಗ್‌ ನಡೆಸಿಯೇ ಮಕ್ಕಳನ್ನು ಐಐಟಿಗೆ ಕಳುಹಿಸಿರುವುದು ವಿಶೇಷವಾಗಿದೆ.

ವೃತ್ತಿಪರ ಭರತನಾಟ್ಯಂ ಡಾನ್ಸರ್‌ ಆಗಿರುವ 49 ವರ್ಷದ ಮಾಧವಿ ಲತಾ ಅವರು ಹೆಣ್ಣುಮಕ್ಕಳ ಶಿಕ್ಷಣದ ಪ್ರಾಯೋಜಕರಾಗಿದ್ದಾರೆ ಮತ್ತು ಆರೋಗ್ಯ ಶಿಬಿರಗಳನ್ನು ಆಯೋಜಿಸುವಲ್ಲಿ ಮತ್ತು ಪ್ರವಾಹ ನೆರವು ನೀಡುವಲ್ಲಿನ ಪ್ರಯತ್ನಗಳಿಗೆ ಹೆಸರುವಾಸಿಯಾಗಿದ್ದಾರೆ. ಪ್ರಸ್ತುತ ಹೈದರಾಬಾದ್ ಮೂಲದ ಪ್ರಮುಖ ಆರೋಗ್ಯ ಸಂಸ್ಥೆಯಾದ ವಿರಿಂಚಿ ಹಾಸ್ಪಿಟಲ್ಸ್‌ನ ಅಧ್ಯಕ್ಷರಾಗಿದ್ದಾರೆ. ರೋಗಿಗಳಿಗೆ ಹೆಚ್ಚಿನ ಶುಲ್ಕ ವಿಧಿಸಿದ ಆರೋಪದ ನಂತರ ಆರೋಗ್ಯ ಅಧಿಕಾರಿಗಳು ಕೋವಿಡ್‌-19 ಚಿಕಿತ್ಸೆಗಾಗಿ ಅದರ ಪರವಾನಗಿಯನ್ನು ರದ್ದುಗೊಳಿಸಿದಾಗ ವಿರಿಂಚಿ ಹಾಸ್ಪಿಟಲ್ಸ್‌ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.

ತೆಲಂಗಾಣದ ಅವಳಿ ನಗರವಾದ ಸಿಕಂದರಾಬಾದ್‌ನಲ್ಲಿ ನೆಲೆಸಿರುವ 49 ವರ್ಷದ ಮಾಧವಿ ಲತಾ ಇತ್ತೀಚೆಗಷ್ಟೇ ಬಿಜೆಪಿ ಸೇರ್ಪಡೆಗೊಂಡರು. ಮೊದಲ ಬಾರಿಗೆ ಚುನಾವಣೆಯ ಕಣಕ್ಕೆ ಇಳಿದಿದ್ದಾರೆ.

ತ್ರಿವಳಿ ತಲಾಕ್‌ ವಿರುದ್ಧ ಹೋರಾಟ

ಮುಸ್ಲಿಂ ಮಹಿಳೆಯರಿಗೆ ಕಂಟಕವಾಗಿದ್ದ ತ್ರಿವಳಿ ತಲಾಕ್‌ ವಿರುದ್ಧ ಮಾಧವಿ ಲತಾ ಅವರು ಹೋರಾಟ ನಡೆಸಿದ್ದರು. ಅದರಲ್ಲೂ, ಕೇಂದ್ರ ಸರ್ಕಾರವು ತ್ರಿವಳಿ ತಲಾಕ್‌ಅನ್ನು ಕೇಂದ್ರ ಸರ್ಕಾರವು ರದ್ದುಗೊಳಿಸಿದ ಬಳಿಕ ಅಸಾದುದ್ದೀನ್‌ ಓವೈಸಿ ಅವರು ಇದನ್ನು ಅಸಾಂವಿಧಾನಿಕ ಎಂದು ಕರೆದಿದ್ದರು. ಆಗ, ತ್ರಿವಳಿ ತಲಾಕ್‌ ಕುರಿತು ಜನರಿಗೆ ತಿಳಿವಳಿಕೆ, ಜಾಗೃತಿ ಮೂಡಿಸುವ ಕುರಿತು ಮಾಧವಿ ಲತಾ ಅವರು ಅಭಿಯಾನ ಆರಂಭಿಸಿದ್ದರು. ಆಗಲೇ ಅಸಾದುದ್ದೀನ್‌ ಓವೈಸಿ ಅವರಿಗೆ ಮಾಧವಿ ಲತಾ ಸೆಡ್ಡು ಹೊಡೆದಿದ್ದರು. ಈಗ ಅವರಿಗೆ ಬಿಜೆಪಿ ಟಿಕೆಟ್‌ ನೀಡಿದ್ದು, ಚುನಾವಣೆಯ ಕುತೂಹಲ ಜಾಸ್ತಿಯಾಗಿದೆ.

ಮಾಧವಿ ಲತಾರ ಹೂಡಿಕೆಗಳು :

ಮಾಧವಿ ಲತಾ ಅವರು ಲಿಸ್ಟೆಡ್ ಮತ್ತು ಅನ್ ಲಿಸ್ಟೆಡ್ ಕಂಪನಿಗಳಲ್ಲಿ 25.20 ಕೋಟಿ ಹೂಡಿಕೆ ಸೇರಿದಂತೆ 31.31 ಕೋಟಿ ರೂ.ಗಳ ಚರ ಆಸ್ತಿಯನ್ನು ಹೊಂದಿದ್ದಾರೆ ಎಂದು ಅವರು ಘೋಷಿಸಿದರು.

ವಿರಿಂಚಿ ಲಿಮಿಟೆಡ್‌ನಲ್ಲಿ 7.80 ಕೋಟಿ ರೂಪಾಯಿ ಹೂಡಿಕೆಯನ್ನು ಹೊಂದಿರುವ ಅವರು 3.78 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಹೊಂದಿದ್ದಾರೆ.

ಮಾಧವಿ ಲತಾ ಅವರ ಪತಿ ವಿರಿಂಚಿ ಲಿಮಿಟೆಡ್‌ನಲ್ಲಿ 52.36 ಕೋಟಿ ರೂ. ಮೌಲ್ಯದ ಷೇರುಗಳನ್ನು ಒಳಗೊಂಡಂತೆ 88.31 ಕೋಟಿ ರೂ. ಚರ ಆಸ್ತಿಯನ್ನು ಹೊಂದಿದ್ದಾರೆ. ಅವರ ಮೂವರು ಅವಲಂಬಿತ ಮಕ್ಕಳು ಸಹ 45 ಕೋಟಿ ರೂ. ಗೂ ಹೆಚ್ಚು ಒಟ್ಟು ಚರ ಆಸ್ತಿ ಹೊಂದಿದ್ದಾರೆ. ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಅವರು 6.32 ಕೋಟಿ ಸ್ಥಿರಾಸ್ತಿ ಹೊಂದಿದ್ದು, ಪತಿಯ ಸ್ಥಿರಾಸ್ತಿ ಮೌಲ್ಯ 49.59 ಕೋಟಿ ರೂ. ಗಳಾಗಿದೆ.

ಆಸ್ತಿಗಳಲ್ಲಿ ಕೃಷಿಯೇತರ ಭೂಮಿ, ಹೈದರಾಬಾದ್ ಮತ್ತು ಸುತ್ತಮುತ್ತಲಿನ ವಾಣಿಜ್ಯ ಮತ್ತು ವಸತಿ ಕಟ್ಟಡಗಳು ಸೇರಿವೆ.

ಮಾಧವಿ ಲತಾ ಅವರು 90 ಲಕ್ಷ ರೂ., ಅವರ ಪತಿಯು 26.13 ಕೋಟಿ ರೂ. ಇಕ್ವಿಟಿ ಹೊಂದಿದ್ದಾರೆ. 2022-23ರಲ್ಲಿ ಅವರ ಆದಾಯ 3.76 ಲಕ್ಷ ರೂ.ಗಳಾಗಿದ್ದರೆ, 2021-22ರಲ್ಲಿ 1.22 ಕೋಟಿ ರೂ. ಗಳಾಗಿತ್ತು. 2022-23ರಲ್ಲಿ ವಿಶ್ವನಾಥ್ ಅವರ ಆದಾಯ 2.82 ಕೋಟಿ ರೂ. ಗಳಾಗಿದ್ದರೆ, 2021- 22ರಲ್ಲಿ 6.86 ಕೋಟಿ ರೂ.

ಒಂದು ಕ್ರಿಮಿನಲ್ ಪ್ರಕರಣ ದಾಖಲು:

ಕಳೆದ ವಾರವಷ್ಟೇ ಹೈದರಾಬಾದ್‌ನಲ್ಲಿ ಚುನಾವಣಾ ಪ್ರಚಾರದ ವೇಳೆ ಮಸೀದಿಗೆ ಮಾದವಿ ಅವರು ಬಾಣ ಬಿಡುವಂತೆ ಸನ್ನೆ ಮಾಡಿದ್ದರು. ಹೀಗಾಗಿ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಬೇಗಂ ಬಜಾರ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 295-ಎ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.