ಮಂಗಳೂರು | ಪಿಹೆಚ್‌ಡಿ ವಿದ್ಯಾರ್ಥಿನಿಗೆ ಕಿರುಕುಳ, ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕನ ಬಂಧನ

ಮಂಗಳೂರಿನ ಪಿಹೆಚ್‌ಡಿ ವಿದ್ಯಾರ್ಥಿನಿಗೆ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಪ್ರಾಧ್ಯಾಪಕನನ್ನು ನಗರದ ಸೈಬರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಆಂಧ್ರಪ್ರದೇಶದ ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ. ಕೊಂಡೂರು ಸುಧೀರ್ ಕುಮಾರ್ ಎಂದು ಗುರುತಿಸಲಾಗಿದೆ.

ವಿದ್ಯಾರ್ಥಿನಿ ಮಂಗಳೂರಿನ ಪ್ರಾಧ್ಯಾಪಕಿಯೋರ್ವರ ಮಾರ್ಗದರ್ಶನದಲ್ಲಿ ಪಿಹೆಚ್‌ಡಿ ಮಾಡುತ್ತಿದ್ದರು. ಈ ಸಂದರ್ಭ ಆಕೆಗೆ ಡಾ. ಸುಧೀರ್ ಕುಮಾರ್ ಕೊಂಡೂರು ಅವರ ಪರಿಚಯವಾಯಿತು. ತನ್ನನ್ನು ಮಾರ್ಗದರ್ಶನವಾಗಿ ನೇಮಿಸುವಂತೆ ವಿದ್ಯಾರ್ಥಿನಿಯಲ್ಲಿ ಆತ ಒತ್ತಾಯಿಸಿದ್ದ. ಅದಕ್ಕೆ ಒಪ್ಪಿ ವಿಶ್ವವಿದ್ಯಾನಿಲಯಕ್ಕೆ ಅನುಮತಿಗೆ ಕಳುಹಿಸಿದಾಗ ಆ ವ್ಯಕ್ತಿಗೆ ಅರ್ಹತೆ ಇಲ್ಲ ಎನ್ನುವ ಕಾರಣಕ್ಕೆ ಕೋರಿಕೆ ನಿರಾಕರಿಸಲಾಗಿತ್ತು. ಇದಾದ ನಂತರ ಆತ ವಿದ್ಯಾರ್ಥಿನಿಗೆ ಹಾಗೂ ಆಕೆಯ ಮನೆಯವರಿಗೆ ಕಿರುಕುಳ ನೀಡಲು ಆರಂಭಿಸಿದ್ದ ಎನ್ನಲಾಗಿದೆ.

ವಿದ್ಯಾರ್ಥಿನಿಗೆ ತಿಳಿಯದಂತೆ ಆಕೆಯ ಭಾವಚಿತ್ರವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ ಎಂದು ಆರೋಪಿಸಿ ವಿದ್ಯಾರ್ಥಿನಿಯ ಮನೆಯವರು ನಗರದ ಸೈಬರ್ ಠಾಣೆಗೆ 2021ರ ಮಾರ್ಚ್ 10ರಂದು ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ಆರೋಪಿಯನ್ನು ಇದೀಗ ಆಂಧ್ರಪ್ರದೇಶದಲ್ಲಿ ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯದ ಷರತ್ತು ಬದ್ಧ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.

Leave A Reply

Your email address will not be published.