ಪುತ್ತೂರು : ಕೆನರಾ ಪ್ರಿಂಟರ್ಸ್ ಮಾಲಕ ಎಂ.ಎ.ಹುಸೈನ್ ನಿಧನ

ಪುತ್ತೂರಿನ ಎಂ.ಟಿ.ರಸ್ತೆಯಲ್ಲಿರುವ ಕೆನರಾ ಪ್ರಿಂಟರ್ಸ್ ಮಾಲಕ, ಪ್ರಸ್ತುತ ಬನ್ನೂರು ನಿವಾಸಿಯಾಗಿದ್ದ ಎಂ.ಎ. ಹುಸೈನ್ (68ವ.) ರವರು ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ನಿಧನರಾದರು.

ಅನಾರೋಗ್ಯದಲ್ಲಿದ್ದ ಅವರನ್ನು ಇಲ್ಲಿನ ಪ್ರಗತಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಅಲ್ಲಿ ಚೇತರಿಸಿಕೊಂಡ ಅವರನ್ನು ಮನೆಗೆ ಕರೆದುಕೊಂಡು ಹೋಗಲಾಗಿತ್ತು.ಅಲ್ಲಿ ಮತ್ತೆ ಅವರು ಅನಾರೋಗ್ಯಕ್ಕೊಳಗಾದುದರಿಂದ ಮೂರು ದಿನಗಳ ಹಿಂದೆ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಅವರು ಸೆ.21ರಂದು ಬೆಳಿಗ್ಗೆ ನಿಧನರಾಗಿದ್ದಾರೆ.

ಮುದ್ರಣ ಕ್ಷೇತ್ರದಲ್ಲಿ ಹಲವು ವರ್ಷಗಳ ಸೇವೆ: ಇಲ್ಲಿನ ಎಂ.ಟಿ.ರಸ್ತೆಯಲ್ಲಿ ಹಲವು ವರ್ಷಗಳಿಂದ ಕೆನರಾ ಪ್ರಿಂಟರ್ ಹೊಂದಿ ಮುದ್ರಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ಕೆನರಾ ಹುಸೇನ್ ಎಂದೇ ಚಿರಪರಿಚಿತರಾಗಿದ್ದ ಅವರು ಆರಂಭದಲ್ಲಿ ಕೆನರಾ ಪ್ರಿಂಟರ್ ಕಟ್ಟಡದಲ್ಲಿಯೇ ಮನೆ ಮಾಡಿ ವಾಸವಾಗಿದ್ದರು.

ಬಳಿಕ ಕೆನರಾ ಪ್ರಿಂಟರ್ ಕಟ್ಟಡವನ್ನು ಕೆಡವಿ ಮರು ನಿರ್ಮಾಣ ಮಾಡುವ ಕಾಮಗಾರಿ ಆರಂಭಗೊಂಡ ಬಳಿಕ ಅವರು ಒನ್ನೂರಿನಲ್ಲಿ ಮನೆ ಮಾಡಿ ವಾಸವಾಗಿದ್ದರು.ಮುದ್ರಣ ಕ್ಷೇತ್ರದ ಜೊತೆಗೆ ಎಂ.ಟಿ.ರೋಡ್ ನಲ್ಲಿ ಅಭಿನಂದನಾ ಫೂಟ್‌ವೇರ್‌ ಮಳಿಗೆಯನ್ನೂ ಪ್ರಾರಂಭಿಸಿ ಮುನ್ನಡೆಸಿದ್ದರು.

ಉದ್ಯಮದ ಜೊತೆಗೆ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿಯೂ ತೊಡಗಿಸಿಕೊಂಡಿದ್ದ ಹುಸೈನ್ ರವರು ಪುತ್ತೂರಿನ ಅನ್ನಾರುದ್ದೀನ್ ಜಮಾತ್ ಕಮಿಟಿಯಲ್ಲಿ ಹಲವು ವರ್ಷಗಳ ಕಾಲ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.ಕ್ರಿಸೆಂಟ್ ಯಂಗ್‌ಮೆನ್ಸ್ ಎಸೋಸಿಯೇಶನ್‌ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಅವರು, ಸರುಲ್ ಉಲಮಾ ಸೋಷಿಯಲ್ ಟ್ರಸ್ಟ್ ಕಮಿಟಿಯ ಪದಾಧಿಕಾರಿಯಾಗಿ, ಜಮೀಯ್ಯತುಲ್ ಫಲಾಹ್ ಪುತ್ತೂರು ಘಟಕದ ಅಧ್ಯಕ್ಷರಾಗಿ ಸೇರಿದಂತೆ ವಿವಿಧ ಧಾರ್ಮಿಕ, ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು.
ಮೃತರು ಪತ್ನಿ, ಪತ್ರರಾದ ಹರ್ಷದ್‌, ಸವಾದ್ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಪ್ರಸ್ತುತ ಪುತ್ರ ಹರ್ಷದ್ ಕೆನರಾ ಪ್ರಿಂಟರ್ ವ್ಯವಹಾರ ಮುಂದುವರಿಸುತ್ತಿದ್ದಾರೆ.

Leave A Reply

Your email address will not be published.