ಏರ್‌ಟೆಲ್ ಗ್ರಾಹಕರಿಗೆ ಮತ್ತೊಂದು ಬಿಗ್ ಶಾಕ್ | ಕನಿಷ್ಠ ರೀಚಾರ್ಜ್ ಬೆಲೆಯಲ್ಲಿ ಮತ್ತೆ ಏರಿಕೆ !! ಗ್ರಾಹಕರ ಚಿತ್ತ ಇದೀಗ ಬಿಎಸ್ಎನ್ಎಲ್ ನತ್ತ !

Share the Article

ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಉಂಟಾದ ದರಸಮರ ಪರಿಣಾಮದಿಂದ ಈಗಲೂ ಚೇತರಿಸಿಕೊಳ್ಳಲು ಒದ್ದಾಡುತ್ತಿರುವ ಏರ್‌ಟೆಲ್ ಕಂಪೆನಿ ಮತ್ತೆ ತನ್ನ ಗ್ರಾಹಕರಿಗೆ ಶಾಕಿಂಗ್ ಸುದ್ದಿಯೊಂದನ್ನು ನೀಡಿದೆ. ಅತ್ಯುತ್ತಮ ನೆಟ್ವರ್ಕ್ ಜೊತೆಗೆ ಕಡಿಮೆ ದರದಲ್ಲಿ ಹೆಚ್ಚಿನ ಕರೆ ಸೌಲಭ್ಯ ಎಂದು ವಿವಿಧ ರೀತಿಯಲ್ಲಿ ಜಾಹೀರಾತುಗಳನ್ನು ನೀಡಿ ಜನಸಾಮಾನ್ಯರನ್ನು ಸೆಳೆಯುತ್ತಿದ್ದಂತಹ ಭಾರತೀಯ ಏರ್ ಟೆಲ್ ಇದೀಗ ಪ್ರಿಪೇಯ್ಡ್ ಗ್ರಾಹಕರಿಗೆ ನೀಡುತ್ತಿದ್ದ 49 ರೂ ಹಾಗೂ 79 ರೂ. ಗಳ ಸ್ಮಾರ್ಟ್ ರೀಚಾರ್ಜ್ ಪ್ಲಾನನ್ನು ಸ್ಥಗಿತಗೊಳಿಸಿದೆ.

ತನ್ನ ಪ್ರತಿ ಬಳಕೆದಾರರಿಂದ ಸರಾಸರಿ ಆದಾಯವನ್ನು ಹೆಚ್ಚು ಪಡೆಯಲೇಬೇಕು ಎಂಬ ಹಠಕ್ಕೆ ಬಿದ್ದಿರುವ ಏರ್‌ಟೆಲ್, ಇದೀಗ ತನ್ನ ಕನಿಷ್ಠ ರೀಚಾರ್ಜ್ ಯೋಜನೆಗಳನ್ನು ಮತ್ತೆ ಬದಲಾಯಿಸಲು ಮುಂದಾಗಿದೆ. ಅಂದರೆ, ಇದೀಗ ನಿಮ್ಮ ಏರ್‌ಟೆಲ್ ಸಿಮ್ ಕಾರ್ಯನಿರ್ವಹಿಸಲು ನೀವು ಕನಿಷ್ಠವೆಂದರೂ 100 ರೂ. ಗಳಿಗಿಂತ ಹೆಚ್ಚು ಹಣವನ್ನು ರೀಚಾರ್ಜ್ ಮಾಡಬೇಕಿದೆ.

ಹೌದು, ಮೊದಲು ತನ್ನ ಗ್ರಾಹಕರಿಗೆ 49 ರೂ. ಪ್ರಿಪೇಯ್ಡ್ ಪ್ಲಾನ್ ಹಾಗೂ 79 ರೂ. ಗಳ ಕನಿಷ್ಠ ಪ್ರಿಪೇಯ್ಡ್ ಪ್ಲ್ಯಾನ್‌ಗಳನ್ನು ಒದಗಿಸಿದ್ದ ಏರ್‌ಟೆಲ್, ಇತ್ತೀಚಿಗಷ್ಟೇ 49 ರೂ. ಪ್ರಿಪೇಯ್ಡ್ ಪ್ಲಾನ್ ಅನ್ನು ತೆಗೆದುಹಾಕುವ ಮೂಲಕ ಶಾಕ್ ನೀಡಿತ್ತು. ಇದೀಗ 79 ರೂ. ಗಳ ಕನಿಷ್ಠ ಪ್ರಿಪೇಯ್ಡ್ ಪ್ಲ್ಯಾನ್ ಅನ್ನು ಕೂಡ ತೆಗೆದು ಹಾಕುತ್ತಿರುವುದಾಗಿ ವರದಿಯಾಗಿದೆ. ಹಾಗಾಗಿ, ನೀವು ಇನ್ನು ನಿಗದಿತ ಕಾಲದಲ್ಲಿ ನಿಮ್ಮ ಏರ್‌ಟೆಲ್ ಸಿಮ್ ಅನ್ನು ಕನಿಷ್ಠ ಎಂದರೂ 100 ರೂ. ಗಳಿಗಿಂತ ಹೆಚ್ಚು ಹಣವನ್ನು ರೀಚಾರ್ಜ್ ಮಾಡಲೇಬೇಕಾಗುತ್ತದೆ. ಇಲ್ಲದಿದ್ದರೆ ಸಿಮ್ ಸೇವೆ ಸ್ಥಗಿತಗೊಳ್ಳಲಿದೆ.

ಇದಕ್ಕಿಂತಲೂ ಮತ್ತೊಂದು ಶಾಕಿಂಗ್ ಸುದ್ದಿ ಎಂದರೆ, ಈ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಏರ್‌ಟೆಲ್ ತನ್ನ ಕನಿಷ್ಟ ರೀಚಾರ್ಜ್ ಪ್ಲ್ಯಾನ್‌ಗಳನ್ನು 200 ರೂ.ಗೆ ಹೆಚ್ಚಿಸುವ ಗುರಿಯನ್ನು ಹಾಕಿಕೊಂಡಿದೆಯಂತೆ. ಇದನ್ನು 300 ರೂ. ಗಳ ವರೆಗೂ ಹೆಚ್ಚಿಸುವಂತಹ ಮುಂದಾಲೋಚನೆಯನ್ನು ಏರ್‌ಟೆಲ್ ಆಡಳಿತ ಮಂಡಳಿ ಹೊಂದಿದೆ ಎಂದು ಹೇಳಲಾಗಿದೆ. ಇತ್ತೀಚಿಗಷ್ಟೇ ಏರ್‌ಟೆಲ್ ಕಂಪನಿಯ ಅಧ್ಯಕ್ಷ ಸುನಿಲ್ ಮಿತ್ತಲ್ ಅವರು ಬೆಲೆ ಏರಿಕೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ ನಂತರ ಈ ಎಲ್ಲಾ ನೂತನ ಬೆಳವಣಿಗೆಗಳು ಕಂಡುಬಂದಿವೆ.

ಇದರೆಲ್ಲದರ ನಡುವೆ, ಬಿಎಸ್ಎನ್ಎಲ್ ಸಂಸ್ಥೆಯೇ ಜನರಿಗೆ ಹತ್ತಿರವಾಗುತ್ತಿದೆ. 399 ರೂಪಾಯಿ ರೀಚಾರ್ಜ್ ಮಾಡಿದರೆ 10 ತಿಂಗಳ ಕಾಲ ವಾಲಿಡಿಟಿ ಇರುವ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ನೆಟ್ವರ್ಕ್ ನತ್ತ ಗ್ರಾಹಕರೆಲ್ಲರೂ ವಲಸೆ ಹೋಗುತ್ತಿದ್ದಾರೆ. ಈ ಪೋರ್ಟ್ ಕ್ರಾಂತಿಯಿಂದಾಗಿ ಬಿಎಸ್ಎನ್ಎಲ್ ಸಿಮ್ ನ ಕೊರತೆ ಉಂಟಾಗಿದೆ.

Leave A Reply

Your email address will not be published.