ಪ್ರೀತಿಸಿದ ತಪ್ಪಿಗೆ ಅಪ್ರಾಪ್ತ ಬಾಲಕ ಬಾಲಕಿಯ ದುರಂತ ಸಾವು !! |ಪ್ರಿಯಕರನನ್ನು ಕೊಂದ ಬಾಲಕಿಯ ಹೆತ್ತವರು ಜೈಲು ಸೇರಿದರೆ, ಇತ್ತ ನೊಂದ ಬಾಲಕಿ ಆತ್ಮಹತ್ಯೆಗೆ ಶರಣು

ಮಗಳು ಪ್ರೀತಿಸುತ್ತಿದ್ದಾಳೆ ಎಂಬ ವಿಷಯ ತಿಳಿದು, ಆಕೆಯ ಪ್ರಿಯಕರನನ್ನು ಉಪಾಯದಲ್ಲಿ ಮನೆಗೆ ಕರೆಸಿಕೊಂಡು ಕೊಲೆ ನಡೆಸಿದ ಆರೋಪದಲ್ಲಿ ತಂದೆ ತಾಯಿ ಇಬ್ಬರೂ ಜೈಲು ಸೇರಿದ್ದರೆ, ಇತ್ತ ಹೆತ್ತವರಿಲ್ಲದೆ ಬಾಲಮಂದಿರದಲ್ಲಿದ್ದ ಬಾಲಕಿ ಅಲ್ಲೇ ನೇಣು ಬಿಗಿದುಕೊಂಡು ಸಾವಿಗೆ ಶರಣಾದ ಘಟನೆ ಮಂಡ್ಯದಲ್ಲಿ ನಡೆದಿದೆ.

ಮಂಡ್ಯ ನಗರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷ ಶಿವಲಿಂಗು ಜೈಲು ಸೇರಿದ ವ್ಯಕ್ತಿಯಾದರೆ, ಕೊಲೆಯಾದ ಬಾಲಕನನ್ನು ದರ್ಶನ್ ಎಂದು ಗುರುತಿಸಲಾಗಿದ್ದು, ಆತ್ಮಹತ್ಯೆಗೆ ಶರಣಾದ ಬಾಲಕಿ ಶಿವಲಿಂಗು ಅವರ ಪುತ್ರಿ ಮಾನ್ವಿತಾ ಎಂದು ಗುರುತಿಸಲಾಗಿದೆ.

ಘಟನೆ ವಿವರ :ಅಪ್ರಾಪ್ತರಾಗಿದ್ದ ದರ್ಶನ್ ಹಾಗೂ ಮಾನ್ವಿತಾ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದೂ, ಈ ವಿಷಯ ತಿಳಿದ ಶಿವಲಿಂಗು ಕೋಪ ನೆತ್ತಿಗೇರಿದೆ. ಅದರಂತೆ ಏಪ್ರಿಲ್ 24ರ ರಾತ್ರಿ ಮಗಳ ಪ್ರಿಯಕರನನ್ನು ಉಪಾಯದಲ್ಲಿ ಮನೆಗೆ ಕರೆಸಿಕೊಂಡು, ಮನೆಮಂದಿಯೆಲ್ಲಾ ಸೇರಿ ಹಿಗ್ಗಾಮುಗ್ಗ ಥಳಿಸಿದ್ದಾರೆ. ಇದರಿಂದ ಗಂಭೀರ ಗಾಯಗೊಂಡಿದ್ದ ಬಾಲಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಈ ಬಗ್ಗೆ ಮೃತ ಬಾಲಕನ ಪೋಷಕರು ಆರೋಪಿಗಳ ವಿರುದ್ಧ ಮೊಕದ್ದಮೆ ಹೂಡಿದ್ದು, ಅದರಂತೆ ಬಾಲಕಿಯ ತಂದೆ, ತಾಯಿ ಸಹಿತ ಹಲವರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದರು.

ಇತ್ತ ಮನೆಯವರೆಲ್ಲರೂ ಜೈಲು ಪಾಲಾಗಿದ್ದರಿಂದ ಬಾಲಕಿ ಮಾನ್ವಿತಳನ್ನು ಮಂಡ್ಯದ ಬಾಲಕಿಯರ ಬಾಲ ಮಂದಿರಕ್ಕೆ ಸೇರಿಸಲಾಗಿತ್ತು.ಪ್ರೀತಿಸಿದ ಪ್ರೀತಿ ಸಿಗಲಿಲ್ಲ,ಹೆತ್ತವರು ಜೈಲಿನಲ್ಲಿರುವುದರಿಂದ ಮಾನಸಿಕವಾಗಿ ನೊಂದ ಬಾಲಕಿ ನಿನ್ನೆ ರಾತ್ರಿ ಬಾಲಮಂದಿರದಲ್ಲೇ ನೇಣುಬಿಗಿದುಕೊಂಡು ಸಾವಿಗೆ ಶರಣಾಗಿದ್ದಾಳೆ.

ಇತ್ತ ಮಗಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಜೈಲಿನಿಂದ ಅನುಮತಿ ಮೇರೆಗೆ ಅಂತಿಮ ದರ್ಶನಕ್ಕೆ ಆಗಮಿಸಿದ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು. ಪ್ರೀತಿಸಿದ ತಪ್ಪಿಗೆ ಅಪ್ರಾಪ್ತರಿಬ್ಬರೂ ಪರಲೋಕಕ್ಕೆ ಪ್ರಯಾಣ ಬೆಳೆಸಿದ್ದು, ಊರಿನಲ್ಲಿ ಸ್ಮಶಾನ ಮೌನ ಆವರಿಸಿದೆ.

Leave A Reply

Your email address will not be published.