ಹಿಂದೆಂದೂ ಊಹಿಸದ ರೀತಿಯಲ್ಲಿ ಪಾಪಿ ತಾಲಿಬಾನ್ ಗೆ ತಲೆಬಾಗಿತಾ ಅಫ್ಘಾನ್ | ಸಂಸತ್ತಿನಲ್ಲಿ ತಾಲಿಬಾನಿಗಳ ಅಟ್ಟಹಾಸಕ್ಕೆ ಜಗತ್ತೇ ಆತಂಕ!!!

ಕೇವಲ ಒಂದು ತಿಂಗಳ ಹಿಂದಷ್ಟೇ ಅಫ್ಘಾನಿಸ್ತಾನ ದೇಶದೊಳಗೆ ಲಗ್ಗೆಯಿಟ್ಟ ತಾಲಿಬಾನ್ ಇಷ್ಟೊಂದು ಕ್ಷಿಪ್ರ ಗತಿಯಲ್ಲಿ ದೇಶವನ್ನೇ ತನ್ನ ತೆಕ್ಕೆಗೆ ಸೆಳೆದುಕೊಳ್ಳುತ್ತದೆ ಎಂದು ಯಾರೂ ಊಹಿಸಿರಲಿಕ್ಕಿಲ್ಲ. ಕೆಲ ದಿನಗಳ ಹಿಂದಷ್ಟೇ ತಾಲಿಬಾನ್ ದೇಶದ ಶೇ.65ರಷ್ಟು ಭಾಗವನ್ನು ವಶಪಡಿಸಿಕೊಂಡಿದೆ ಎಂದು ಹೇಳಲಾಗಿತ್ತು. ಆದರೆ ಇದೀಗ ತಾಲಿಬಾನ್ ದೇಶದ ಚುಕ್ಕಾಣಿ ಹಿಡಿದುಬಿಟ್ಟಿದೆ.

ರಸ್ತೆರಸ್ತೆಗಳಲ್ಲಿ ರಕ್ತದೋಕುಳಿ ಹರಿಸಿ, ಹೆಣ್ಣುಮಕ್ಕಳನ್ನು ಅಪಹರಿಸಿ, ಅತ್ಯಾಚಾರ ಎಸಗಿ ನೀಡಬಾರದ ಹಿಂಸೆ ನೀಡುವ ಮೂಲಕ ಅಫ್ಘಾನಿಸ್ತಾನದಲ್ಲಿ ಅಟ್ಟಹಾಸ ಮೆರೆಯುತ್ತಿದ್ದ ತಾಲಿಬಾನ್ ರಕ್ಕಸರಿಗೆ ಇದೀಗ ಅಫ್ಘಾನ್ ಸರ್ಕಾರ ತಲೆಬಾಗಿ ದೇಶವನ್ನೇ ಅವರಿಗೆ ಬಿಟ್ಟುಕೊಟ್ಟಿದೆ.

ಸಂಸತ್ತಿನೊಳಗೆ ತಾಲಿಬಾನಿಗಳು ಬಂದೂಕುಧಾರಿಗಳಾಗಿ ನುಗ್ಗುವುದನ್ನು ಇಡೀ ಜಗತ್ತೇ ಆತಂಕದಿಂದ ನೋಡುತ್ತಿದೆ. ಈ ಸಮಯದಲ್ಲಿ ನಮ್ಮೆಲ್ಲರಲ್ಲೂ ಮೂಡುತ್ತಿರುವ ಪ್ರಶ್ನೆ ಹೀಗೂ ಉಂಟೆ ಎಂಬುದಲ್ಲ, ಅತ್ಯಂತ ಕಡಿಮೆ ಸಮಯದಲ್ಲಿ ತಾಲಿಬಾನಿಗಳು ಇಡೀ ಅಫ್ಘಾನಿಸ್ತಾನವನ್ನು ವಶಪಡಿಸಿಕೊಳ್ಳಲು ಹೇಗೆ ಸಾಧ್ಯವಾಯಿತು ಎಂದು.

Ad Widget
Ad Widget

Ad Widget

Ad Widget

ಅಫ್ಘಾನ್ ಸೇನೆ ಎಡವಿದ್ದೆಲ್ಲಿ?

ತಾಲಿಬಾನ್ ಅನ್ನು ಅಫ್ಘಾನ್ ದೇಶದಿಂದ ಹೊಡೆದೋಡಿಸಿ ಕಳೆದ 20 ವರ್ಷಗಳಿಂದ ಅಲ್ಲಿಯೇ ನೆಲೆಗೊಂಡಿದ್ದ ಅಮೆರಿಕ ಹಾಗೂ ನ್ಯಾಟೊ ಪಡೆಗಳು ಹಿಂದಕ್ಕೆ ಮರಳುವ ಪ್ರಕ್ರಿಯೆ ಆರಂಭವಾಯಿತು. ಹಾಗಾಗಿ ಅಮೆರಿಕ ತನ್ನ ಸಾವಿರಾರು ಸೈನಿಕರನ್ನು ಹಿಂದಕ್ಕೆ ಕರೆಸಿಕೊಂಡಿತು. ತಾನು ಅಧಿಕಾರವನ್ನು ಅಫ್ಘಾನ್ ಸೇನೆಯ ಕೈಗೆ ಹಸ್ತಾಂತರಿಸಿ ಪರಿಸ್ಥಿತಿ ಕೈಮೀರದಂತೆ ಸಹಾಯ ಮಾಡಿಯೇ ದೇಶ ತೊರೆಯುವುದಾಗಿ ಅಮೆರಿಕ ವಾಗ್ದಾನ ನೀಡಿತ್ತು. ಆದರೆ ಅಲ್ಲಿ ಆದದ್ದೇ ಬೇರೆ. ತಾಲಿಬಾನಿಗಳು ದೇಶವನ್ನು ನುಂಗುವುದನ್ನು ಕೈಕಟ್ಟಿಕೊಂಡೇ ಅಮೆರಿಕ ನೋಡಿತು. ಅಫ್ಘಾನ್ ಪಡೆಗಳು ತಾಲಿಬಾನಿಗಳ ವಿರುದ್ಧ ಹೋರಾಟ ನಡೆಸುವ ಸಮಯದಲ್ಲಿ ತಾನು ನೆರವಿಗೆ ಧಾವಿಸುವುದಾಗಿ ಹೇಳಿದ್ದರೂ, ಅದೇಕೋ ಪೂರ್ಣ ಪ್ರಮಾಣದಲ್ಲಿ ಸಹಾಯಹಸ್ತ ಚಾಚಲಿಲ್ಲ. ಅದಕ್ಕೀಗ ಅಂತಾರಾಷ್ಟ್ರೀಯ ಸಮುದಾಯ ಅಮೆರಿಕವನ್ನು ದೂಷಿಸುತ್ತಿದೆ.

ನೆರವಾದ ಆಂತರಿಕ ಭ್ರಷ್ಟಾಚಾರ

ಅಫ್ಘನ್ ಸೇನೆಯಲ್ಲಿ 3 ಲಕ್ಷ ಸೈನಿಕರಿದ್ದು, ಕೋಟ್ಯಂತರ ರೂ. ಬೆಲೆಯ ಅಮೆರಿಕ ನಿರ್ಮಿತ ಅಸ್ತ್ರಗಳಿದ್ದವು. ಆದರೆ ಅವೆಲ್ಲವೂ ಕಾಗದಪತ್ರಗಳಲ್ಲಿ ಮಾತ್ರವೇ ಇದ್ದವು ಎಂದು ಈಗ ತಿಳಿದುಬರುತ್ತಿದೆ. ಅಸಲಿಗೆ ಅಫ್ಘಾನ್ ಸೇನೆ ಭ್ರಷ್ಟಾಚಾರದಲ್ಲಿ ಮುಳುಗಿತ್ತು. ಕಳಪೆ ನಾಯಕತ್ವ ಸೇರಿದಂತೆ ಹಲವು ಆಂತರಿಕ ಸಮಸ್ಯೆಗಳನ್ನು ಹೊಂದಿತ್ತು. ಈ ಪರಿಸ್ಥಿತಿಯ ಲಾಭವನ್ನು ಜಾಣ್ಮೆಯಿಂದ ತಾಲಿಬಾನ್ ಪಡೆದುಕೊಂಡಿತು. ಹಿಂದಿನ ಬಾರಿ ತಾಲಿಬಾನಿಗಳನ್ನು ಹೊಡೆದೋಡಿಸುವಲ್ಲಿ ಅಮೆರಿಕ ವಾಯುಪಡೆಯ ವಿಮಾನಗಳು ಮಹತ್ತರ ಪಾತ್ರಗಳನ್ನು ನಿರ್ವಹಿಸಿದ್ದವು. ಈ ಬಾರಿ ಅಮೆರಿಕ ವಾಯುಪಡೆಯ ಸಹಾಯ ಲಭ್ಯವಾಗಲಿಲ್ಲ.

ಶಾಂತಿ ಒಪ್ಪಂದದ ಸೋಲು

ಕಳೆದ ವರ್ಷ ಅಮೆರಿಕ ತಾನು ದೇಶದಿಂದ ಕಾಲ್ತೆಗೆಯುವುದಾಗಿ ತಾಲಿಬಾನ್ ಷರತ್ತಿಗೆ ಸಹಿ ಹಾಕಿದಾಗಲೇ ತಾಲಿಬಾನ್ ಗೆ ಬಲ ಬಂದಿತ್ತು. ದೇಶದೊಳಕ್ಕೆ ನುಗ್ಗಲು ರಹದಾರಿ ಸಿಕ್ಕಂತಾಗಿತ್ತು. ಅಫ್ಘಾನಿಸ್ತಾನದಲ್ಲಿ ಹಲವು ತಿಂಗಳುಗಳಿಂದ ದಾಳಿ, ಸ್ಫೋಟ ಪ್ರಕರಣಗಳು ಹೆಚ್ಚಿದ್ದವು. ಅಮೆರಿಕ ದೇಶದ ನೆಲದಿಂದ ಕಾಲ್ತೆಗೆದರೆ ಮಾತ್ರ ಶಾಂತಿ ನೆಲೆಸಲು ಅನುವು ಮಾಡಿಕೊಡುವುದಾಗಿ ತಾಲಿಬಾನ್ ಷರತ್ತು ವಿಧಿಸಿತ್ತು. ಆದರೆ ಅಮೆರಿಕ ಷರತ್ತಿಗೆ ಸಹಿ ಹಾಕಿದ ನಂತರವೂ ದಾಳಿ ಪ್ರಕರಣಗಳು ಕಡಿಮೆಯಾಗಿರಲಿಲ್ಲ. ಹೀಗಾಗಿ ತಾಲಿಬಾನ್ ವಂಚನೆ ಎಸಗಿದೆ ಎನ್ನುವುದು ಸ್ಥಳೀಯರ ಆರೋಪ.

ತಾಲಿಬಾನಿಗಳಿಂದ ಸೈಕಾಲಾಜಿಕಲ್ ಯುದ್ಧ ತಂತ್ರ ಬಳಕೆ

ನೇರಾನೇರ ಶಸ್ತ್ರಾಸ್ತ್ರಗಳನ್ನು ಹಿಡಿದು ಕಾಳಗ ನಡೆಸಿದ್ದು ಒಂದೆಡೆಯಾದರೆ, ಇನ್ನೊಂದೆಡೆ ಸರ್ಕಾರಿ ಅಧಿಕಾರಿಗಳು, ನೌಕರರ ಮೊಬೈಲುಗಳಿಗೆ ಒಂದರ ಹಿಂದೊಂದರಂತೆ ಸಂದೇಶಗಳನ್ನು ಕಳುಹಿಸಿ ಭಯವನ್ನು ಸೃಷ್ಟಿಸಿತ್ತು. ಆ ಸಂದೇಶಗಳಲ್ಲಿ ಇನ್ನುಮುಂದೆ ತಾಲಿಬಾನ್ ನಾಯಕತ್ವದ ಆದೇಶದಂತೆ ನಡೆಯಬೇಕು ಎಂಬುದಾಗಿ ಎಚ್ಚರಿಕೆ ಸೂಚಿಸಲಾಗಿತ್ತು. ಒಂದು ವೇಳೆ ತಮ್ಮ ಆದೇಶದಂತೆ ನಡೆಯದಿದ್ದರೆ ಪ್ರಾಣಪಾಯ ಖಚಿತ ಎನ್ನುವ ಅರ್ಥದಲ್ಲಿ ಜೀವಬೆದರಿಕೆ ಒಡ್ಡಿದ್ದರು. ಹಲವೆಡೆ ಗ್ರಾಮದ ಮುಖಂಡರ ಮೂಲಕ ತಾಲಿಬಾನಿಗಳು ಗ್ರಾಮಸ್ಥರಿಗೆ ತಮ್ಮ ಸೂಚನೆಯನ್ನು ತಲುಪಿಸಿದ್ದರು. ಆ ಮೂಲಕ ತಾಲಿಬಾನ್ ಆಡಳಿತ ಬರುವುದನ್ನು ಬಹಳ ಹಿಂದಿನಿಂದಲೇ ಸಾರುತ್ತಾ ಬಂದಿದ್ದರು.

ತಾಲಿಬಾನಿಗಳ ಆದಾಯ ಮೂಲದ ಬಗ್ಗೆ ನಿಮಗೆಷ್ಟು ಗೊತ್ತು?

2016 ರಲ್ಲಿ ವಿಶ್ವದ 10 ಭಯೋತ್ಪಾದಕ ಸಂಘಟನೆಗಳಲ್ಲಿ ತಾಲಿಬಾನ್‌ 5ನೇ ಶ್ರೀಮಂತ ಸಂಘಟನೆ ಎಂದು ಫೋರ್ಬ್ಸ್ ನಿಯತಕಾಲಿಕೆ ಪಟ್ಟಿ ಮಾಡಿದೆ. ಈ ಪಟ್ಟಿಯಲ್ಲಿ ISIS ಸಂಘಟನೆಯು 2 ಶತಕೋಟಿ ಅಮೆರಿನ್ ಡಾಲರ್ ವಾರ್ಷಿಕ ವಹಿವಾಟಿನೊಂದಿಗೆ ಅಗ್ರಸ್ಥಾನದಲ್ಲಿದೆ ಎಂದು ಹೇಳಲಾಗಿತ್ತು. ಅದರಂತೆ ತಾಲಿಬಾನ್ 400 ದಶಲಕ್ಷ ಅಮೆರಿಕನ್ ಡಾಲರ್ ವಾರ್ಷಿಕ ವಹಿವಾಟಿನೊಂದಿಗೆ 5ನೇ ಸ್ಥಾನವನ್ನು ಆಕ್ರಮಿಸಿಕೊಂಡಿತ್ತು.

ಫೋರ್ಬ್ಸ್ ಪ್ರಕಾರ, ತಾಲಿಬಾನ್‌ನ ಪ್ರಾಥಮಿಕ ಆದಾಯ ಮೂಲಗಳು ಮಾದಕವಸ್ತು, ಕಳ್ಳಸಾಗಣೆ, ಹಣದ ರಕ್ಷಣೆ ಮತ್ತು ವಿಶ್ವದಾದ್ಯಂತ ಹರಿದುಬರುವ ದೇಣಿಗೆಯಾಗಿದೆ. ರೇಡಿಯೋ ಫ್ರೀ ಯೂರೋಪ್/ರೇಡಿಯೋ ಲಿಬರ್ಟಿಯಿಂದ ಪಡೆದ ನ್ಯಾಟೋ ವರದಿಯ ಪ್ರಕಾರ, 2019-20ರಲ್ಲಿ ತಾಲಿಬಾನ್ ನ ವಾರ್ಷಿಕ ಬಜೆಟ್ 1.6 ಬಿಲಿಯನ್ ಅಮೆರಿಕನ್ ಡಾಲರ್ ಎಂದು ಹೇಳಲಾಗಿದೆ.

• ಗಣಿಗಾರಿಕೆ: 464 ಮಿಲಿಯನ್ ಅಮೆರಿಕನ್ ಡಾಲರ್
• ಡ್ರಗ್ಸ್: 416 ಮಿಲಿಯನ್ ಅಮೆರಿಕನ್ ಡಾಲರ್
• ವಿದೇಶಿ ದೇಣಿಗೆಗಳು: 240 ಮಿಲಿಯನ್ ಅಮೆರಿಕನ್ ಡಾಲರ್
• ರಫ್ತು: 240 ಮಿಲಿಯನ್ ಅಮೆರಿಕನ್ ಡಾಲರ್
• ತೆರಿಗೆಗಳು: 160 ಮಿಲಿಯನ್ ಅಮೆರಿಕನ್ ಡಾಲರ್ (ರಕ್ಷಣೆ/ಸುಲಿಗೆ ಹಣ?)
• ರಿಯಲ್ ಎಸ್ಟೇಟ್: 80 ಮಿಲಿಯನ್ ಅಮೆರಿಕನ್ ಡಾಲರ್

ಸ್ವತಂತ್ರ ರಾಜಕೀಯ ಮತ್ತು ಸೇನಾ ಘಟಕವಾಗಲು ತಾಲಿಬಾನ್ ನಾಯಕತ್ವವು ಸ್ವಾವಲಂಬಿಯಾಗುವತ್ತ ಗಮನಹರಿಸಿದೆ ಎಂದು ನ್ಯಾಟೋ ವರದಿಯಲ್ಲಿ ಉಲ್ಲೇಖಿಸಲಾಗಿದೆ.

Leave a Reply

error: Content is protected !!
Scroll to Top
%d bloggers like this: