ಫೇಸ್ ಬುಕ್ ಅವಹೇಳನ ಮಾಡಿದ ಪ್ರೊಫೆಸರ್ ಗೆ ಪಾಠ ಕಲಿಸಿದ ಸ್ಮೃತಿ ಇರಾನಿ | ಶಹರ್ಯಾರ್ ಅಲಿ ಗೆ ಸುಪ್ರೀಂ ಕೋರ್ಟಲ್ಲೂ ಸಿಗಲಿಲ್ಲ ರಿಲೀಫ್ !
ಫೇಸ್ಬುಕ್ ನಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಉತ್ತರಪ್ರದೇಶ ಎಸ್ಆರ್ಕೆ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಶಹರ್ಯಾರ್ ಅಲಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿ, ಅವರನ್ನು ಪೊಲೀಸ್ ವಶಕ್ಕೆ ಒಪ್ಪಿಸಿದೆ.
ಫಿರೋಜಾಬಾದ್ನ ಎಸ್ಆರ್ಕೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಶಹರ್ಯಾರ್ ಅಲಿ ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರ ಮುಂದೆ ಶರಣಾಗಿ, ಮಧ್ಯಂತರ ಜಾಮೀನು ಅರ್ಜಿಯನ್ನು ಕೋರಿದ್ದು, ಜಾಮೀನು ತಿರಸ್ಕರಿಸಿದ ಬೆನ್ನಿಗೇ ಕೋರ್ಟ್ ಅವರ ಬಂಧನಕ್ಕೆ ಆದೇಶಿಸಿದೆ.
ಇವರು ಕಳೆದ ಮಾರ್ಚ್ ತಿಂಗಳಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಇರಾನಿ ಬಗ್ಗೆ ಅವಹೇಳನಕಾರಿ ಪೋಸ್ಟ್ ಅನ್ನು ಫೇಸ್ಬುಕ್ ಖಾತೆಯಲ್ಲಿ ಹಾಕಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ಬಳಸುವ ಭಾಷೆ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು ಎಂದು ಕೋರ್ಟ್ ಎಚ್ಚರಿಕೆಯನ್ನು ಕೂಡ ನೀಡಿತ್ತು. ಆದರೂ ಅಲಿ ಅವರು ಅವಹೇಳನಕಾರಿ ಪೋಸ್ಟ್ ಹಾಕಿದ್ದರು.
ಕಳೆದ ಮೇ ತಿಂಗಳಿನಲ್ಲಿ ಕೂಡ ಅಲಿ ಅವರು ಅಲಹಾಬಾದ್ ಹೈಕೋರ್ಟ್ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು. ತಮ್ಮ ಫೇಸ್ಬುಕ್ ಖಾತೆ ಹ್ಯಾಕ್ ಆಗಿತ್ತು ಎಂಬ ಕಾರಣವನ್ನು ಅವರು ನೀಡಿದ್ದರು. ಆದರೆ ನ್ಯಾಯಾಧೀಶರಾದ ಜೆ. ಜೆ. ಮುನೀರ್ ಅವರು ಅರ್ಜಿಯನ್ನು ತಿರಸ್ಕೃತಗೊಳಿಸಿದ್ದರು.
ಪ್ರೊಫೆಸರ್ ಅಲಿ ಬಂಧನದಿಂದ ರಕ್ಷಣೆ ಕೋರಿ, ಅಲಹಾಬಾದ್ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಅದು ತಿರಸ್ಕರಿಸಲ್ಪಟ್ಟ ಮೇಲೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಸುಪ್ರೀಂ ಕೋರ್ಟ್ ಮೇಟ್ಟಿಲೇರಿದ್ದ ಅಲಿ ಅವರಿಗೆ ಬಂಧನದಿಂದ ರಕ್ಷಣೆ ನೀಡಲು ನ್ಯಾಯಾಧೀಶರಾದ ಸಂಜಯ್ ಕಿಶನ್ ಕೌಲ್ ಮತ್ತು ನ್ಯಾ.ಹೇಮಂತ್ ಗುಪ್ತಾ ಅವರಿದ್ದ ಪೀಠ ನಿರಾಕರಿಸಿತ್ತು.
ಆದರೆ ಸುಪ್ರೀಂ ಕೋರ್ಟ್ ತಿರಸ್ಕರಿಸಿದ ಹಿನ್ನೆಲೆಯಲ್ಲಿ, ಅವರು ಸೆಷನ್ಸ್ ನ್ಯಾಯಾಲಯದ ಮುಂದೆ ಆತ್ಮ ಸಮರ್ಪಣೆ ಮಾಡಿಕೊಂಡರು. ಹಾಗಾಗಿ ಇದೀಗ ಪ್ರೊಫೆಸರ್ ಜೈಲು ಕಂಬಿ ಎಣಿಸುತ್ತಿದ್ದಾರೆ.