Ballary: ಬಳ್ಳಾರಿ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕಿಯಾದ ತೃತೀಯ ಲಿಂಗಿ – ಕರ್ನಾಟಕದಲ್ಲೇ ಮೊದಲು

Ballary: ತೃತೀಯ ಲಿಂಗಿಗಳು (Transgender) ಎಂದರೆ ಸಮಾಜದ ಜೊತೆಗೆ ಅವರ ಹೆತ್ತವರು ಕೂಡ ಅವರನ್ನುಹೆತ್ತವರು ಕೂಡ ಅವರನ್ನು ಮನೆಯಿಂದ ಹೊರ ಹಾಕಿದ ನಿದರ್ಶನಗಳೂ ಇವೆ. ಆದರೆ ಇಲ್ಲೊಬ್ಬ ಟ್ರಾನ್ಸ್‌ಜೆಂಟರ್‌ ಎಲ್ಲ ಸವಾಲು-ಸಂಕಷ್ಟಗಳನ್ನು ಮೆಟ್ಟಿ ನಿಂತು ಪ್ರಾಧ್ಯಾಪಕಿ (Guest Lecturer) ಆಗಿದ್ದಾರೆ.

ಹೌದು, ಇವರು ಬಳ್ಳಾರಿ(Ballary) ಜಿಲ್ಲೆ ಕುರುಗೋಡು ಪಟ್ಟಣದ ರೇಣುಕಾ ಪೂಜಾರಿ. ಬಳ್ಳಾರಿಯ ವಿಜಯನಗರ ಶ್ರೀಕೃಷ್ಣ ದೇವಾರಾಯ ವಿಶ್ವವಿದ್ಯಾಲಯದ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಕಳೆದ ಐದು ದಿನಗಳ ಹಿಂದೆಯಷ್ಟೇ ಅರೆಕಾಲಿಕ ಕನ್ನಡ ಪ್ರಾಧ್ಯಾಪಕರಾಗಿ ನೇಮಕಗೊಂಡಿದ್ದಾರೆ.

ರೇಣುಕಾ ಪೂಜಾರಿ ಪ್ರತಿಕ್ರಿಯಿಸಿ, “ನಮ್ಮದು ಬಡ ಕುಟುಂಬ. ತಂದೆ ಪೂಜಾರಿ ಮಲ್ಲಯ್ಯ, ತಾಯಿ ತಿಪ್ಪಮ್ಮ ಇಬ್ಬರೂ ಅನಕ್ಷರಸ್ಥರು. ಸಮಾಜ ಕೊಂಕು ನುಡಿದರೂ ತಂದೆ, ತಾಯಿ ನನ್ನನ್ನು ದೂರ ತಳ್ಳಲಿಲ್ಲ. ಕಷ್ಟಪಟ್ಟು ಈ ಹಂತಕ್ಕೆ ಬಂದಿದ್ದೇನೆ. ಬಹಳಷ್ಟು ಅವಮಾನ ಎದುರಿಸಿದೆ. ಆದರೆ ಹಲವರು ನನಗೆ ನೆರವಾದರು. ಜೋಗತಿ ಸಂಸ್ಕೃತಿ ಮತ್ತು ಚೌಡಿಕೆ ಪದಗಳ ಕುರಿತು ಪಿಎಚ್​ಡಿ ಮಾಡುವ ಗುರಿ ಇದೆ” ಎಂದು ಹೇಳಿದರು.

ಯಾರು ಈ ರೇಣುಕಾ ಪೂಜಾರಿ?
ರೇಣುಕಾ ಪೂಜಾರಿ ಅವರು ಮೂಲತಃ ಬಳ್ಳಾರಿ ಜಿಲ್ಲೆ ಕುರುಗೋಡು ಪಟ್ಟಣದವರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಪೂರ್ಣಗೊಳಿಸಿ, ಪದವಿ ಪೂರ್ವ ಶಿಕ್ಷಣವನ್ನು ಬಳ್ಳಾರಿಯ ಸರ್ಕಾರಿ ಪದವಿ ಪೂರ್ವ (ಮುನ್ಸಿಪಲ್) ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದಾರೆ. ಪದವಿ ಶಿಕ್ಷಣವನ್ನು ಕುರುಗೋಡಿನಲ್ಲಿ ಹಾಗೂ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯಲ್ಲಿ ಅಭ್ಯಾಸ ಮಾಡಿದ್ದಾರೆ.

ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರ ಪದವಿವರೆಗೆ ರೆಗ್ಯುಲರ್‌ ಆಗಿದ್ದು, ವಿದ್ಯಾರ್ಥಿಯಾಗಿರುವ ವೇಳೆ ದೇಹದಲ್ಲಿ ನೈಸರ್ಗಿಕ ಬದಲಾವಣೆ ಆದ ಹಿನ್ನೆಲೆಯಲ್ಲಿ ಮಂಗಳಮುಖಿಯಾಗಿ ಬದಲಾಗಿದ್ದಾರೆ. ಎಸ್‌ಎಸ್ ಎಲ್‌ಸಿ, ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಶೇ.70ರಷ್ಟು ಅಂಕಗಳನ್ನು ಪಡೆದಿದ್ದಾರೆ. ಇವರು, ವಿಶ್ವವಿದ್ಯಾಲಯದ ಪೂರ್ಣಕಾಲಿಕ ಅಧ್ಯಾಪಕಿಯಾಗಿ ಸೇವೆ ಸಲ್ಲಿಸಬೇಕು. ಉತ್ತಮ ಭವಿಷ್ಯ ರೂಪಿಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು ಎಂಬ ಆಸೆ ಹೊತ್ತಿದ್ದಾರೆ

Leave A Reply

Your email address will not be published.