ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ 12 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಆರೋಗ್ಯ ಸಂಕೀರ್ಣಗಳಾಗಿ ಮೇಲ್ದರ್ಜೆಗೆ ಆಯ್ಕೆ

ರಾಜ್ಯದಲ್ಲಿ 250 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆರೋಗ್ಯ ಸಂಕೀರ್ಣವಾಗಿ ಮೇಲ್ದರ್ಜೆಗೇರಿಸಲು ರಾಜ್ಯ ಸರಕಾರ ನಿರ್ಧರಿಸಿದ್ದು, ಉಡುಪಿ ಮತ್ತು ದಕ್ಷಿಣ ಕನ್ನಡದ 12 ಕೇಂದ್ರಗಳನ್ನು ಆಯ್ಕೆ ಮಾಡಿ ಪ್ರಸ್ತಾವನೆ ಸಲ್ಲಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ 7 ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಆಯ್ಕೆ ಮಾಡಲಾಗಿದ್ದು, ಉಡುಪಿ ಜಿಲ್ಲೆಯ ಒಟ್ಟು 61 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 5 ನ್ನು ಆರೋಗ್ಯ ಸಂಕೀರ್ಣವಾಗಿ ಮೇಲ್ದರ್ಜೆಗೇರಿಸಲು ಆಯ್ಕೆ ಮಾಡಲಾಗಿದೆ.

ಪ್ರಸ್ತಾವಿತ ಕೇಂದ್ರಗಳಲ್ಲಿ ಕನಿಷ್ಠ 2 ಎಕ್ರೆ ಜಾಗವಿರಬೇಕೆಂಬ ನಿಯಮವಿದೆ. ಸಿದ್ದಾಪುರದ ಕೇಂದ್ರದಲ್ಲಿ 4.3 ಎಕ್ರೆ ಸ್ಥಳವಿದ್ದು, ಉಳಿದೆಡೆ 2 ಎಕ್ರೆಗಿಂತ ಹೆಚ್ಚಿಗೆ ಜಾಗವಿದೆ.

ಮೇಲ್ದರ್ಜೆಗೇರಿಸಿದ ಬಳಿಕ ಇಬ್ಬರು ಎಂಬಿಬಿಎಸ್‌ ವೈದ್ಯರು, ಒಬ್ಬರು ಬಿಎಎಂಎಸ್‌ ವೈದ್ಯರು ಇರುತ್ತಾರೆ. ದಿನದ 24 ತಾಸು ಸೇವೆ ಲಭ್ಯವಾಗಲಿದ್ದು, ಇದನ್ನು ಮಾದರಿ ಆರೋಗ್ಯ ಕೇಂದ್ರವಾಗಿ ರೂಪಿಸುವುದು ಸರಕಾರದ ಉದ್ದೇಶ. ಒಟ್ಟು 3 ಕೋ.ರೂ. ವೆಚ್ಚದಲ್ಲಿ ಆಸ್ಪತ್ರೆ, 2 ಕೋ.ರೂ. ವೆಚ್ಚದಲ್ಲಿ ವಸತಿಗೃಹ ನಿರ್ಮಾಣವಾಗಲಿದೆ.

ಸಿಬ್ಬಂದಿಗೆ ಅಲ್ಲೇ ವಸತಿ ಒದಗಿಸುವ ಮೂಲಕ 24*7 ಸೇವೆ ಲಭ್ಯವಾಗಬೇಕೆಂಬುದು ಉದ್ದೇಶವಿದೆ. ಅಸಾಂಕ್ರಾಮಿಕ ರೋಗಗಳ ಚಿಕಿತ್ಸೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಮತ್ತು ಯೋಗ ಪ್ರಸಾರದ ಮೂಲಕ ಸಮಗ್ರ ಕ್ಷೇಮ ಕೇಂದ್ರವಾಗಿ ರೂಪಿಸಲಾಗುತ್ತದೆ. ಹೆರಿಗೆ ಸೌಲಭ್ಯವೂ ಲಭ್ಯವಾಗಲಿದೆ.

5 ವರ್ಷಗಳಲ್ಲಿ ರಾಜ್ಯದ 250 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಆರೋಗ್ಯ ಸಚಿವ ಡಾ| ಸುಧಾಕರ್‌ ಈ ಹಿಂದೆ ತಿಳಿಸಿದ್ದರು.

Leave A Reply

Your email address will not be published.