ಬಾಹ್ಯಾಕಾಶಕ್ಕೆ ಜೆಟ್ ಹಾರಿಸಿದ ಮೊದಲ ಬಿಲಿಯನೇರ್ ರಿಚರ್ಡ್ ಬ್ರಾನ್ಸನ್ ಮೂಲ ಭಾರತದ್ದು | ಆತನ ಅಜ್ಜಿ ದಕ್ಷಿಣ ಭಾರತದ ಕುವರಿಯಂತೆ !
ಬಾಹ್ಯಾಕಾಶಕ್ಕೆ ಜೆಟ್ ಹಾರಿಸಿದ ಮೊದಲ ಬಿಲಿಯನೇರ್ ಎಂಬ ಇತಿಹಾಸವನ್ನು ಸೃಷ್ಟಿಸಿರುವ ಬ್ರಿಟಿಷ್ ಉದ್ಯಮಿ ಸರ್ ರಿಚರ್ಡ್ ಬ್ರಾನ್ಸನ್ ಅವರು ಕುತೂಹಲಕರ ಮಾಹಿತಿಯೊಂದನ್ನು ಹೊರಹಾಕಿದ್ದಾರೆ.
ಅದೇನೆಂದರೆ, ನಾನು ಭಾರತೀಯ ಸಂಪರ್ಕವನ್ನು ಹೊಂದಿದ್ದೇನೆ ಎಂದು ಹೇಳಿ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ತನ್ನ ಕೆಲವು ಪೂರ್ವಜರು ಭಾರತದ ಸಂಪರ್ಕವನ್ನು ಹೊಂದಿದ್ದನ್ನು ಬಹಿರಂಗಪಡಿಸಿದ್ದಾರೆ.
2019 ರ ಡಿಸೆಂಬರ್‌ನಲ್ಲಿ, ವರ್ಜಿನ್ ಗ್ರೂಪ್ ಮುಂಬೈನಿಂದ ಲಂಡನ್‌ಗೆ ಹೋಗುವಾಗಿನ ಮುಂಚಿತವಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬ್ರಾನ್ಸನ್ ಭಾರತದೊಂದಿಗೆ ತನ್ನ ಸಂಬಂಧಗಳ ಬಗ್ಗೆ ತೆರೆದಿಟ್ಟಿದ್ದರು. ಡಿಎನ್‌ಎ ಪರೀಕ್ಷೆಯು ತನ್ನ ಪೂರ್ವಜರಲ್ಲಿ ಕೆಲವರು ಭಾರತೀಯ ಮೂಲದವರು ಅದರಲ್ಲೂ ತಮಿಳುನಾಡಿನ ಕಡಲೂರಿನಿಂದ ಬಂದವರು ಮತ್ತು 1793 ರ ಹಿಂದಿನವರು ಎಂಬುದು ಸಾಬೀತಾಗಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದರು.
ಬ್ರಾನ್ಸನ್ ಅವರ ಪೂರ್ವಜರಾದ ಅರಿಯಾ ಅವರು ಭಾರತೀಯ ಮತ್ತು ದಕ್ಷಿಣ ಭಾರತದ ಕಡೆಯಿಂದ ಬಂದವರು ಎಂದು ಬಹಿರಂಗಪಡಿಸಿದ್ದರು.
‘ನಿಜಕ್ಕೂ ನನಗೆ ಈ ವಿಷಯದ ಬಗ್ಗೆ ಸೋಜಿಗವೆನಿಸುತ್ತದೆ. ಏಕೆಂದರೆ ನಮ್ಮ ನಾಲ್ಕು ತಲೆಮಾರಿನ ಹಿಂದಿನ ಭಾರತೀಯ ಅಜ್ಜಿ ಅರಿಯಾ 1793ರಲ್ಲಿ ನನ್ನ ನಾಲ್ಕು ತಲೆಮಾರಿನ ಹಿಂದಿನ ನನ್ನ ತಾತನನ್ನು ಮದುವೆಯಾಗಿದ್ದರು. ಎಷ್ಟೊಂದು ವಿಸ್ಮಯಕಾರಿ ಅಲ್ಲವೇ ಈ ಜಗತ್ತು! ಈ ವಿಷಯ ನನಗೆ ಈಗ ಗೊತ್ತಾಗಿದೆ ಎಂದರೆ ಒಂದು ರೀತಿಯ ಖುಷಿಯ ಸಂಗತಿ’ ಎಂದು ಅವರು ಹೇಳಿದ್ದಾರೆ.
ನಾನು ಪ್ರತಿ ಬಾರಿ ಭಾರತಕ್ಕೆ ಬಂದಾಗಲೆಲ್ಲ ಅನ್ನಿಸುತ್ತಿತ್ತು ನನಗೂ ಈ ನೆಲಕ್ಕೂ ಸಂಬಂಧವಿದೆ ಎಂದು, ಈಗ ಅದು ನಿಜವಾಗಿದೆ ಎಂದಿದ್ದಾರೆ.
ವರ್ಜಿನ್ ಗ್ರೂಪ್ ಸಂಸ್ಥಾಪಕ ಬ್ರಾನ್ಸನ್ ಭಾನುವಾರ ಕೈಗೊಂಡಿದ್ದ ಸ್ಪೇಸ್ ಹಾರಾಟವು ಬಿಸಿ ಬಿಸಿ ಸುದ್ದಿಯಾಗಲಿದೆ ಎಂದು ಎಲ್ಲ ಭಾವಿಸಿದ್ದರು. ಆದರೆ ಬಿಲಿಯನೇರ್‌ನ ಈಗ ಭಾರತೀಯ ಸಂಬಂಧದ ಕಾರಣದಿಂದಾಗಿ ಹೆಚ್ಚು ಚರ್ಚೆಗೆ ಒಳಗಾಗಿದ್ದಾರೆ.
ರಿಚರ್ಡ್ ಬ್ರಾನ್ಸನ್ ಅವರ ‘ವರ್ಜಿನ್ ಗ್ಯಾಲಾಕ್ಟಿಕ್’ ನ ಮೊದಲ ಬಾಹ್ಯಾಕಾಶ ತಂಡ ನಭಕ್ಕೆ ಹಾರಿ ವಾಪಸ್ ಬಂದಿದೆ. ಈ ಹಿಂದೆ ನಿಗದಿ ಪಡಿಸಿದಂತೆ ಭಾನುವಾರ ಭಾರತೀಯ ಕಾಲಮಾನ ಸಂಜೆ 6:30 ಕ್ಕೆ ಹೊರಡಬೇಕಿತ್ತಾದರೂ ಹವಾಮಾನ ವೈಪರೀತ್ಯದಿಂದಾಗಿ ರಾತ್ರಿ 8 ಗಂಟೆಗೆ ಹೊರಟಿತು. ವಿಶೇಷವೇನೆಂದರೆ ಈ ಪ್ರಯಾಣದ ತಂಡದಲ್ಲಿ ಭಾರತೀಯ ಮೂಲದ ಸಿರಿಶಾ ಬಾಂಡ್ಲಾ ಕೂಡಾ ಇದ್ದಾರೆ.
ಬಾಹ್ಯಾಕಾಶಕ್ಕೆ ಹೊರಟಿರುವ ‘ವರ್ಜಿನ್ ಗ್ಯಾಲಾಕ್ಟಿಕ್’ ಸಂಸ್ಥೆಯ ಆರು ಉದ್ಯೋಗಿಗಳಲ್ಲಿ ಒಬ್ಬರಾದ 71 ವರ್ಷದ ಬ್ರಾನ್ಸನ್, ಭವಿಷ್ಯದಲ್ಲಿ ‘ಬಾಹ್ಯಾಕಾಶ ಪ್ರವಾಸೋದ್ಯಮ’ದ ಹೊಸ ಪ್ರಯೋಗದ ಪೂರ್ವಭಾವಿಯಾಗಿ ಪ್ರಸ್ತುತ ಹಾರಾಟವನ್ನು ನಡೆಸುತ್ತಿದ್ದಾರೆ. ಅವರು ಸ್ಥಾಪಿಸಿದ ಕಂಪನಿಯು ಮುಂದಿನ ವರ್ಷದಿಂದ ತನ್ನ ಪ್ರವಾಸೋದ್ಯಮದ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಮುಂದಾಗಿದೆ.
ಬಾಹ್ಯಾಕಾಶದ ಪ್ರವಾಸವು ದುಬಾರಿಯಾಗಿದ್ದರೂ, ಈಗಾಗಲೇ ನೂರಾರು ಶ್ರೀಮಂತ ಜನರು ಬ್ರಾನ್ಸನ್ ಅವರ ಸಂಸ್ಥೆಯಲ್ಲಿ ಮುಂಗಡ ಬುಕ್ಕಿಂಗ್ ಮಾಡಿದ್ದಾರೆ. ಆದರೆ ಪ್ರತಿ ಟಿಕೆಟ್‌ಗೆ 2.5 ಲಕ್ಷ ಡಾಲರ್ ವ್ಯಯಿಸಬೇಕಾಗುತ್ತದೆ. 2030 ರ ಹೊತ್ತಿಗೆ ಬಾಹ್ಯಾಕಾಶ ಪ್ರವಾಸೋದ್ಯಮದ ಮಾರುಕಟ್ಟೆ ವಾರ್ಷಿಕವಾಗಿ 300 ಕೋಟಿ ಡಾಲರ್‌ಗೆ ಬೆಳೆಯುತ್ತದೆ ಎಂದು ಸ್ವಿಸ್ ಬ್ಯಾಂಕ್ ಅಂದಾಜಿಸಿದೆ.
ಪ್ರಸ್ತುತ ಪ್ರಯಾಣದಲ್ಲಿ ಆಂಧ್ರಪ್ರದೇಶದ ಗುಂಟೂರು ಮೂಲದ 34 ವರ್ಷದ ಸಿರಿಶಾ ಬಾಂಡ್ಲಾ ಕೂಡಾ ತಂಡದಲ್ಲಿದ್ದಾರೆ. ಸಿರಿಶಾ ಅವರು ಏರೋನಾಟಿಕಲ್ ಎಂಜಿನಿಯರ್ ಆಗಿದ್ದು, ಬಾಹ್ಯಾಕಾಶಕ್ಕೆ ತೆರಳುತ್ತಿರುವ ಭಾರತೀಯ ಮೂಲದ ಮೂರನೇ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.