KSRTC: ಪುರುಷ ಪ್ರಯಾಣಿಕರಿಗೆ ದೊಡ್ಡ ಶಾಕ್ – ಬಸ್ ಟಿಕೆಟ್ ದರ ಶೇ. 15ರಷ್ಟು ಏರಿಕೆ!!

KSRTC: ಹೊಸ ವರ್ಷದ ಆದಿಯಲ್ಲಿ ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎದುರಾಗಿದ್ದು ಸಾರಿಗೆ ಬಸ್ ಟಿಕೆಟ್ ದರವನ್ನು ಸರ್ಕಾರ ಹಿಗ್ಗಾಮುಗ್ಗ ಏರಿಸಿದೆ. ಈ ಮೂಲಕ ಪುರುಷ ಪ್ರಯಾಣಿಕರಿಗೆ ಬರೆ ಎಳೆದಂತಾಗಿದೆ.
ಹೌದು, ಸಾರಿಗೆ ಬಸ್ಸುಗಳ(KSRTC) ಟಿಕೆಟ್ ದರವನ್ನು ಶೇ.15ರಷ್ಟು ಹೆಚ್ಚಳ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಹೀಗಾಗಿ ಶೀಘ್ರವೇ ಸಾರಿಗೆ ಬಸ್ ಟಿಕೆಟ್ ದರದ ಶಾಕ್ ಜನತೆಗೆ ಉಂಟಾಗಲಿದೆ.
ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆದಿದ್ದು, ಈ ಸಭೆಯಲ್ಲಿ ಸಾರಿಗೆ ಬಸ್ಸುಗಳ ಟಿಕೆಟ್ ದರ ಹೆಚ್ಚಳದ ಪ್ರಸ್ತಾವನೆ ಕುರಿತಂತೆ ಚರ್ಚೆ ನಡೆಸಲಾಯಿತು. ಈ ಸಂದರ್ಭದಲ್ಲಿ ಶೇ.15ರಷ್ಟು ಟಿಕೆಟ್ ದರ ಏರಿಕೆಗೆ ಸಂಪುಟ ಅನುಮೋದನೆ ನೀಡಿರುವುದಾಗಿ ತಿಳಿದು ಬಂದಿದೆ.
ಅಂದ ಹಾಗೆ ಶಕ್ತಿ ಯೋಜನೆಯ ಮುಖಾಂತರ ಕಂಗೆಟ್ಟಿರುವ ಸರ್ಕಾರ ತನ್ನ ಸಾರಿಗೆ ಸಂಸ್ಥೆಗಳಿಗೆ ಹಣವನ್ನು ನೀಡಲಾಗದೆ ಕೈಚಳ್ಳಿ ಕುಳಿತಿದೆ. ಈಗಾಗಲೇ ಉಳಿಸಿಕೊಂಡಿರುವ ಸಾಲದ ಹೊರೆಯನ್ನು ಇಳಿಸಿಕೊಳ್ಳಲು ಬರೋಬ್ಬರಿ 2,000 ಕೋಟಿ ಸಾಲ ಮಾಡಲು ಕೂಡ ಸಾರಿಗೆ ಸಂಸ್ಥೆಗೆ ತಿಳಿಸಿದೆ. ಈ ಬೆನ್ನಲ್ಲೇ ಸರ್ಕಾರವು ಟಿಕೆಟ್ ದರ ಏರಿಸಲು ನಿರ್ಧಾರ ಮಾಡಿದೆ.