ಕೋಳಿ ಬಾಕ ಗೆಳೆಯನಿಂದ ಕುಚಿಕು ಗೆಳೆಯನ ಹತ್ಯೆ | ಕೇವಲ ಕೋಳಿಸಾರಿಗಾಗಿ ಅಲ್ಲಿ ನಡೆದಿತ್ತು ಕೊಲೆ

ಹನೂರು: ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ದೊಮ್ಮನಗದ್ದೆ ಗ್ರಾಮದಲ್ಲಿ ಕೋಳಿ ಊಟ ಖಾಲಿ ಮಾಡಿದ ಕಾರಣಕ್ಕಾಗಿ ಗೆಳೆಯನ ನಿಕಾಲಿ ನಡೆದುಹೋಗಿದೆ.

ಪತ್ನಿಗೆ ಹೇಳಿ ಕೋಳಿ ರೆಡಿ ಮಾಡಿಸಿ ಮನೆಗೆ ಆಹ್ವಾನ ನೀಡಿದ್ದ ಸ್ನೇಹಿತನನ್ನೇ ಕೊಲೆಗೈದಿದ್ದ ಆರೋಪಿಯನ್ನು ಚಾಮರಾಜನಗರ ಜಿಲ್ಲೆಯ ರಾಮಾಪುರ ಪೊಲೀಸರು ಬಂಧಿಸಿದ್ದಾರೆ. 

ಹನೂರು ತಾಲೂಕಿನ ದೊಮ್ಮನಗದ್ದೆ ಗ್ರಾಮದ ಕೃಷ್ಣನಾಯ್ಕ (55) ಹತ್ಯೆಗೀಡಾದ ವ್ಯಕ್ತಿಯಾಗಿದ್ದು, ಇದೇ ಗ್ರಾಮದ ಕೋಳಿ ಬಾಕ ರಂಗಪ್ಪ ಎಂಬಾತ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆಸಾಮಿ.

ಏನಿದು ಕೋಳಿ ಜಗಳ ?

ಇದೀಗ ಮೃತ ಕೃಷ್ಣನಾಯ್ಕ ಹಾಗೂ ಆರೋಪಿ ರಂಗಪ್ಪ ಚೆಡ್ಡಿ ದೋಸ್ತ್ ಗಳು. ತೋಟದಲ್ಲಿ ಗೆಮೇ ಮಾಡುತ್ತಾ, ದಿನಾ ಒಂದಿಷ್ಟು ದ್ರವವನ್ನು ಸೇವಿಸುತ್ತಾ ತಮ್ಮಿಬ್ಬರ ಮದ್ಯೆ ಇರುವ ಸ್ನೇಹವನ್ನು ಅವರಿಬ್ಬರೂ ಘನ ಮಾಡಿಕೊಂಡಿದ್ದರು. ಕಳೆದ ವಾರ, ಜೂನ್ 23ರ ರಾತ್ರಿ ಇಬ್ಬರೂ ಎಂದಿನಂತೆ ಮದ್ಯ ಸೇವನೆ ಮಾಡಿಕೊಂಡು ಕೃಷ್ಣ ನಾಯಕನ ಮನೆಗೆ ಆಗಮಿಸಿದ್ದರು. ಮನೆಯಲ್ಲಿ ರಾತ್ರಿ ಊಟಕ್ಕೆ ಕೋಳಿ ಸಾರು ಮಾಡುವಂತೆ ಕೃಷ್ಣನಾಯ್ಕ ತನ್ನ ಪತ್ನಿಗೆ ಮೊದಲೇ ತಿಳಿಸಿದ್ದ. 

ಈ ವೇಳೆ ಮದ್ಯದ ಅರೆ ಬರೆ ಅಮಲಿನಲ್ಲಿದ್ದ ಕೃಷ್ಣನಾಯ್ಕ ಹೊರಗಡೆ ಹೋಗಿ ಬರುವುದಾಗಿ ಸ್ನೇಹಿತ ರಂಗಪ್ಪನಿಗೆ ತಿಳಿಸಿ ಇನ್ನೊಂದಿಷ್ಟು ಮದ್ಯ ತರಲು ಹೋಗಿದ್ದ. ಅದಾಗಲೇ ನಾಟಿ ಕೋಳಿ ಮನೆಯಲ್ಲಿ ತಯಾರಾಗಿ ಪರಿಮಳ ಸೂಸುತ್ತಿತ್ತು. ಆ ವೇಳೆ ರಂಗಪ್ಪ, ಕೃಷ್ಣನಾಯ್ಕನ ಪತ್ನಿಗೆ ನೆಂಜಿಕೊಳ್ಳಲು ಅಂತ ಕೋಳಿ ಸಾರು ಕೇಳಿದ್ದ. ಈ ವೇಳೆ ಗೆಳೆಯರಿಗೆ ಊಟಕ್ಕೆ ಅಂತ ಎಲ್ಲಾ ರೆಡಿ ಮಾಡಿಕೊಟ್ಟು ಅಲ್ಲಿಂದ ಕೃಷ್ಣನಾಯ್ಕನ ಪತ್ನಿ ತೆರಳಿದ್ದಳು. ಸೆಕೆಂಡ್ ರೌಂಡ್ ಗೆ ಬೇಕೆಂದು ಮದ್ಯ ತರಲು ಹೋಗಿದ್ದ ಕೃಷ್ಣನಾಯ್ಕ ಬರುವಷ್ಟರಲ್ಲಿ ರಂಗಪ್ಪ ಕೋಳಿ ಸಾಂಬಾರನ್ನು ಸಂಪೂರ್ಣ ಬಾಚಿ ಹಾಕಿ ಹಲ್ಲಿನ ಬುಡಕ್ಕೆ ಕಡ್ಡಿ ತುರುಕುತ್ತಾ ಕುಳಿತಿದ್ದ.

ಅದಾಗಲೇ ಎರಡು ಹೆಚ್ಚುವರಿ ಪೆಗ್ ಬ್ಯಾಗ್ ಪೈಪರ್ ವಿಸ್ಕಿ ಏರಿಸಿ ಬಂದಿದ್ದ ಕೃಷ್ಣನಾಯ್ಕನ ಬಿಪಿ ಇದ್ದಕ್ಕಿದ್ದಂತೆ ಏರಿದೆ. ಅವನ ಮತ್ತು ರಂಗಪ್ಪನ ನಡುವೆ ಗಲಾಟೆ ಜೋರಾಗಿದೆ. ಇಬ್ಬರೂ ಕೈ ಕೈ ಮಿಲಾಯಿಸಿದ್ದಾರೆ. ಆಗ ಉದ್ರಿಕ್ತ ರಂಗಪ್ಪ ಕೃಷ್ಣನಾಯ್ಕನಿಗೆ ಕುಡುಗೋಲಿನಿಂದ ಒಂದೇಟು ಕೊಟ್ಟಿದ್ದಾನೆ. ನೋಡನೋಡುತ್ತಿದ್ದಂತೆ ಕೃಷ್ಣನಾಯ್ಕ ಉಸಿರು ಚೆಲ್ಲಿ ಮಲಗಿಬಿಟ್ಟಿದ್ದಾರೆ. ಹಾಗೆ ಕೋಳಿ ಪೀಸ್ ಗಗಿ ಕೊಲೆ  ನಡೆದು ಹೋಗಿದೆ.

ಈ ಸಂಬಂಧ ರಾಮಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ವಿಶೇಷ ತಂಡವನ್ನು ರಚಿಸಿ ಕಾರ್ಯಾ ಚರಣೆ ಕೈಗೊಳ್ಳಲಾಗಿತ್ತು. ಆರೋಪಿ ರಂಗಪ್ಪ ಕೋಳಿ ತಿಂದು ತಮಿಳುನಾಡಿನ ಹಂದಿಯೂರಿನಲ್ಲಿ ಅಡಗಿ ಕುಳಿತಿದ್ದ.

ಇದೀಗ ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಎಸೈ ಮಂಜುನಾಥ್ ಪ್ರಸಾದ್, ಮುಖ್ಯಪೇದೆಗಳಾದ ನಿಂಗರಾಜು, ಸೈಯದ್ ಮುಸ್ತಾಕ್, ಪೇದೆಗಳಾದ ರವಿಪ್ರಸಾದ್, ಮುತ್ತುರಾಜು ಭಾಗವಹಿಸಿದ್ದರು

Leave A Reply

Your email address will not be published.