ಶಿಕ್ಷಕರ ಬಹುದಿನದ ಬೇಡಿಕೆ ಈಡೇರಿಕೆ | ವರ್ಗಾವಣೆ ವೇಳಾಪಟ್ಟಿ ನಾಳೆ ಪ್ರಕಟ ಸಾಧ್ಯತೆ

ಬೆಂಗಳೂರು: ಶಿಕ್ಷಕರ ಬಹುದಿನದ ಬೇಡಿಕೆ ಈಡೇರುವ ಸಮಯ ಹತ್ತಿರವಾಗಿದ್ದು, ನಾಳೆ ಶಿಕ್ಷಕರ ವರ್ಗಾವಣೆಗೆ ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ.

ವರ್ಗಾವಣೆಗಾಗಿ ಕಾಯುತ್ತಿರುವ ಶಿಕ್ಷಕರಿಗೆ
ಅನುಕೂಲವಾಗುವಂತೆ ನಾಳೆ ವೇಳಾಪಟ್ಟಿ
ಪ್ರಕಟಿಸಲಾಗುವುದು. ವಿಶೇಷ ಕೌನ್ಸೆಲಿಂಗ್ ಗೆ ಲಭ್ಯವಿರುವ ಖಾಲಿ ಹುದ್ದೆಗಳ ಪಟ್ಟಿಯನ್ನು ಪ್ರಕಟಿಸಲಿದ್ದು, ಕಳೆದ ಬಾರಿ ಕಡ್ಡಾಯ ವರ್ಗಾವಣೆಗಳಲ್ಲಿ ಅವಕಾಶ ಸಿಗದ ಶಿಕ್ಷಕರಿಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಆನ್ ಲೈನ್‌ನಲ್ಲಿ ಅರ್ಜಿ ಆಹ್ವಾನಿಸಿ, ವಿಶೇಷ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯೋಜನೆ ಮಾಡಲಾಗುತ್ತದೆ. ಜೇಷ್ಠತಾ ಕ್ರಮಾಂಕ ಪ್ರಕಟಿಸಿ, ಆಕ್ಷೇಪಣಾ ಅರ್ಜಿ ಆಹ್ವಾನಿಸಿ ಪಟ್ಟಿ ಅಂತಿಮಗೊಳಿಸಲಾಗುವುದು. ಎಲ್ಲಾ ಬಾಧಿತ ಶಿಕ್ಷಕರಿಗೆ ಕೌನ್ಸೆಲಿಂಗ್ ನಡೆಸಲಾಗುವುದು.

ವರ್ಗಾವಣೆಗೆ ಈಗಾಗಲೇ 70 ಸಾವಿರ ಶಿಕ್ಷಕರು ಅರ್ಜಿ ಸಲ್ಲಿಸಿದ್ದಾರೆ. 2019ರಲ್ಲೇ ವರ್ಗಾವಣೆ ಪ್ರಕ್ರಿಯೆ ಆರಂಭವಾಗಬೇಕಾಗಿತ್ತು. ಆದರೆ, ಕೊರೋನಾ ಕಾರಣ ಹಾಗೂ ವರ್ಗಾವಣೆ ವೇಳಾಪಟ್ಟಿ ಪ್ರಶ್ನಿಸಿ ಕೆಲ ಶಿಕ್ಷಕರು ಕೋರ್ಟ್ ಮೆಟ್ಟಿಲೇರಿದ ಪರಿಣಾಮ ವಿಳಂಬವಾಯಿತು. ಇದಾದ ನಂತರ ಕಡ್ಡಾಯ ವರ್ಗಾವಣೆಯಲ್ಲಿ ವಂಚಿತರಾದವರಿಗೆ ಮತ್ತೆ ಹೊಸ ವರ್ಗಾವಣೆ ನೀತಿಯಲ್ಲಿ ಅವಕಾಶ ಕಲ್ಪಿಸಬೇಕಾಗಿದ್ದರಿಂದ ವಿಳಂಬವಾಗುತ್ತಲೇ ಇದೆ. ಸದ್ಯ ಶಿಕ್ಷಣ ಇಲಾಖೆ ವರ್ಗಾವಣೆ ಪ್ರಕ್ರಿಯೆ ಆರಂಭಕ್ಕೆ ತೆರೆಮರೆಯಲ್ಲಿ ಸಿದ್ಧತೆ ನಡೆಸುತ್ತಿದ್ದು, ಇಲ್ಲಿ ಎದುರಾಗುವ ಸಮಸ್ಯೆಗಳ ನಿವಾರಣೆಗೆ ಪ್ರತ್ಯೇಕ ಅಧಿಕಾರಿಗಳ ನೇಮಕ ಮಾಡಲೂ ಸೂಚನೆ ನೀಡಿದೆ.

ವರ್ಗಾವಣೆ ನಿಯಮ ಪ್ರಶ್ನಿಸಿ ಕೆಲವು ಶಿಕ್ಷಕರು ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಹಿನ್ನೆಲೆಯಲ್ಲಿ ಹೈಕೋರ್ಟ್ ಗೆ ಕೇವಿಯಟ್ ಸಲ್ಲಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಸುಗ್ರೀವಾಜ್ಞೆಯ ಮೂಲಕ ಶಿಕ್ಷಕರ ವರ್ಗಾವಣೆಗೆ ತಿದ್ದುಪಡಿ ತಂದು ಆಕ್ಷೇಪಣೆ ಸ್ವೀಕರಿಸಿ ಪರಿಶೀಲನೆ ನಂತರ ಅಂತಿಮ ನಿಯಮಗಳನ್ನು ರೂಪಿಸಲಾಗಿದೆ. ಬಹುತೇಕ ನಾಳೆಯೇ ವರ್ಗಾವಣೆಗೆ ವೇಳಾ ಪಟ್ಟಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.

Leave A Reply

Your email address will not be published.