Puttur: ಪ್ಲೇಟ್ ತೊಳೆಯುವ ಹುಡುಗನ ಜತೆ ಫ್ರೆಂಡ್ ಶಿಪ್ ಮಾಡಿದ ಶಾಸಕ: ಇದೀಗ ಹುಡುಗನ ಕಲಿಕೆಯ ವೆಚ್ಚ ವಹಿಸಿಕೊಂಡ ಪುತ್ತೂರು ಶಾಸಕ ಅಶೋಕ್ ರೈ !

Puttur: ಈ ಸಾರಿ ಮತ್ತೆ ಬೇರೆಯದೇ ಕಾರಣಕ್ಕಾಗಿ ಪುತ್ತೂರು ಶಾಸಕ ಅಶೋಕ್‌ ಕುಮಾ‌ರ್ ರೈ ನಮಗೆ ಇಷ್ಟವಾಗಿದ್ದಾರೆ. ಉಡುಪಿಯ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪ್ಲೇಟ್ ಶುಚಿ ಮಾಡುತ್ತಿದ್ದ ಬಾಲಕನೋರ್ವನ ಜೊತೆ ಮಾತುಕತೆ ನಡೆಸಿದ ವಿಚಾರ ಮತ್ತು ಆ ಬಾಲಕನೊಂದಿಗೆ ತೆಗೆದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀವೈರಲ್ ಆಗಿದ್ದು ಮಾತ್ರವಲ್ಲದೆ, ಇದೀಗ ಆ ಬಾಲಕ ಶಾಸಕರಿಗೆ ಕರೆ ಮಾಡಿ ನಾನು ವಿದ್ಯಾಭ್ಯಾಸ ಮುಂದುವರೆಸುತ್ತೇನೆ ಎಂದು ತಿಳಿಸಿದ್ದು ಸುದ್ದಿಯಾಗಿದೆ. ಜತೆಗೆ ಶಿಕ್ಷಣದ ಪೂರ್ತಿ ವೆಚ್ಚವನ್ನು ತಾನು ಭರಿಸುವುದಾಗಿ ಪುತ್ತೂರು ಶಾಸಕ ಅಶೋಕ್‌ ಕುಮಾ‌ರ್ ರೈ ತಿಳಿಸಿದ್ದು – ಹೀಗೆ ಎಲ್ಲವೂ ದೊಡ್ಡದಾಗಿ ಸುದ್ದಿಯಾಗುತ್ತಿದೆ.

ಪುತ್ತೂರು ಶಾಸಕರು ಖಾಸಗಿ ಕಾರ್ಯಕ್ರಮ ಒಂದಕ್ಕೆ ತೆರಳಿದ್ದರು. ಆ ಸಂದರ್ಭ ಅಲ್ಲಿ ಊಟ ಮಾಡಿ ಪ್ಲೇಟ್ ಇಡಲು ತೆರಳಿದಾಗ ಓರ್ವ ಬಾಲಕ ಪ್ಲೇಟ್ ಸ್ವಚ್ಚ ಮಾಡುತ್ತಿದ್ದ. ಅದ್ಯಾಕೋ ಆತನನ್ನು ನೋಡಿದ ಶಾಸಕರು ಆತನ ಪರಿಚಯ ಮಾಡಿಕೊಂಡಿದ್ದಾರೆ. ಸಣ್ಣ ಪ್ರಾಯದ ಹುಡುಗ ಆದ ಕಾರಣ, “ನೀನು ಯಾಕೆ ಓದಲು ಹೋಗಿಲ್ಲ? ಕೆಲಸ ಯಾಕೆ ಮಾಡುತ್ತಿದ್ದೀಯ? ಮನೆಯಲ್ಲಿ ಯಾರೆಲ್ಲ ಇದ್ದಾರೆ ಮತ್ತು ಅಪ್ಪ ಅಮ್ಮ ಏನು ಮಾಡುತ್ತಾರೆ’ ಇತ್ಯಾದಿ ಕುಶಲೋಪರಿ ವಿಚಾರಿಸಿದ್ದಾರೆ. ಆಗ ಬಿಚ್ಚಿಕೊಂಡಿದೆ ಬಾಲಕನ ಕರುಣಾಜನಕ ಕಥೆ.

ಶಾಸಕರ ಪ್ರಶ್ನೆಗೆ ತನ್ನ ಮನೆಯ ಸಂಗತಿಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ. ಸಂಕಷ್ಟದ ಮಾತುಗಳಿಗೆ ಶಾಸಕರ ಮನಸ್ಸು ಕರಾಗಿದೆ.” ನೀನು ಇನ್ನಷ್ಟು ಓದಬೇಕು, ಓದಿ ಒಳ್ಳೆಯ ಉದ್ಯೋಗ ಪಡೆದು ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು’ ಎಂದು ಆತನ ಭುಜಕ್ಕೆ ಕೈ ಇಟ್ಟು ಹರಸಿದ್ದರು ಅಶೋಕ್ ಕುಮಾರ್ ರೈ. ಜತೆಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದು ಬಾಲಕನೂ ಶಾಸಕರ ಜೊತೆ ನಿಂತು ಸೆಲ್ಸಿ ಕ್ಲಿಕ್ಕಿಸಿಕೊಂಡಿದ್ದ.

ಯಾರೆಂಬುದೇ ಗೊತ್ತಿಲ್ಲ!
ಅದಾಯಿತು. ಮೊನ್ನೆ ಮೇ.3 ರಂದು ಬಾಲಕ ಶಾಸಕ ಅಶೋಕ್ ಕುಮಾರ್ ರೈಗೆ ಬಾಲಕ ಕರೆ ಮಾಡಿದ್ದಾನೆ. ನಾನು ಓದಬೇಕು ಅಂದಿದ್ದಾನೆ. ಆಗ ಇಂಜನಿಯರಿಂಗ್ ಕಲಿಯಲು ಅಶೋಕ್ ಕುಮಾರ್ ಸೂಚಿಸಿದ್ದಾರೆ. ಆದರೆ ಹುಡುಗನಿಗೆ ಅದ್ಯಾಕೋ ಬಿಕಾಂ ಪದವಿ ಮೇಲೆ ಇನ್ನಿಲ್ಲದ ಮೋಹ. ನಾನು ಬಿಕಾಂ ಮಾಡಬೇಕು, ಕಾಮರ್ಸ್. ಮಾಡುತ್ತೇನೆ ಅಂದಿದ್ದಾನೆ ಆ ಬಾಲಕ. ಆತನಿಗೆ ಬಿಕಾಂ ಇಷ್ಟವಾದ ಕಾರಣ ಅದನ್ನೇ ಆಯ್ಕೆ ಮಾಡಿಕೊಳ್ಳುವುದಾಗಿ ಬಾಲಕ ಶಾಸಕರಲ್ಲಿ ತಿಳಿಸಿದ್ದು, ಅವರೂ ಅದಕ್ಕೆ ಸಮ್ಮತಿ ಸೂಚಿಸಿದ್ದಾರೆ.

ಆದರೆ ಈ ಬಾಲಕನ ಹೆಸರು, ಅವನ ಊರು ಯಾವುದೂ ಶಾಸಕರಿಗೆ ಗೊತ್ತಿಲ್ಲದೆ ಹೋದರೂ ಆತನಿಗೆ ಸಹಾಯಕ್ಕೆ ಬಂದ ಅಶೋಕ್ ರೈ ನಡೆ ಪ್ರಶಂಸನೀಯ ಆಗಿದೆ. ” ಹುಡುಗ ನೋಡಲು ತುಂಬಾ ಸ್ಮಾರ್ಟ್ ಇದ್ದು, ಬುದ್ದಿವಂತನಂತೆ ಕಾಣುತ್ತಾನೆ. ಬಹುಶಃ ಅದೇ ಹುಡುಗನನ್ನು ಅಶೋಕ್ ಕುಮಾರ್ ರೈ ಕಡೆಗೆ ಆಕರ್ಷಿಸಿರಬೇಕು.
ಹಾಗೆ ಉಡುಪಿಯ ಖಾಸಗಿ ಕಾರ್ಯಕ್ರಮವೊಂದರಲ್ಲಿ ಸಿಕ್ಕ ಹುಡುಗನ ಓದಿಗೆ ಶಾಸಕ ಅಶೋಕ್ ಕುಮಾರ್ ರೈ ಆರ್ಥಿಕ ಸಹಾಯ ನೀಡಲಿದ್ದಾರೆ. ಕೇಟರಿಂಗ್ ನಲ್ಲಿ ಪಾತ್ರೆ ಬೆಳಗುವ ಹುಡುಗನ ಭವಿಷ್ಯ ಫಳ ಫಳ ಹೊಳೆಯಲಿದೆ. ಕಾಮರ್ಸು. ತಗೊಳ್ಳುವ ಬಾಲಕನ ಬದುಕಿನ ಲೆಕ್ಕ ಯಾವತ್ತೂ ತಪ್ಪದಿರಲಿ ಅನ್ನುತ್ತಾ ‘ರೈ ‘ ಗಳಿಗೆ ಇದೊಂದು ಧನ್ಯವಾದ ಹೇಳುವ ಸಮಯ.

ಇದನ್ನೂ ಓದಿ: DK Shivakumar: ಕುಮಾರಸ್ವಾಮಿ ಮತ್ತು ಎಚ್‌ಡಿ ರೇವಣ್ಣ ಕುಟುಂಬ ಕದನದಿಂದ ಲೈಂಗಿಕ ಹಗರಣ ಹೊರಬಿದ್ದಿದೆ: ಡಿಸಿಎಂ ಡಿಕೆ ಶಿವಕುಮಾರ್

Leave A Reply

Your email address will not be published.