ಈತ ಬರೋಬ್ಬರಿ 43 ಬಾರಿ ಕೋರೋನಾ ಪಾಸಿಟಿವ್ ಆಗಿದ್ದ | ಸುದೀರ್ಘ 305 ದಿನ ಆಸ್ಪತ್ರೆಯಲ್ಲಿ ಕಳೆದು ಕೊನೆಗೂ ಗೆದ್ದ

ನವದೆಹಲಿ: ಈ ಜಗತ್ತಿನಲ್ಲಿ ಹೈಯೆಸ್ಟ್ ಪಾಸಿಟಿವ್ ವ್ಯಕ್ತಿ ಯಾರು ? ಅತ್ಯಂತ ಜಾಸ್ತಿ ಪಾಸಿಟಿವ್ ವ್ಯಕ್ತಿತ್ವದ ವ್ಯಕ್ತಿ ಯಾರು ಅಂತ ಪತ್ತೆ ಮಾಡುವುದು ಕಷ್ಟ. ಆದರೆ, ಅತ್ಯಂತ ಬಾರಿ ಕೋವಿಡ್ ಪಾಸಿಟಿವ್ ಆಗಿ ಬದುಕಿ ಬಂದವನು ಬ್ರಿಟನ್ನಿನ ಈ ವ್ಯಕ್ತಿ.

ಹಲವಾರು ಬಾರಿ ಕೋವಿಡ್-19 ಪರೀಕ್ಷೆಗೆ ಒಳಗಾದ ಈತ ಒಟ್ಟು 43 ಸಲ ಪಾಸಿಟಿವ್ ಆಗಿದ್ದಾನೆ. ಮಾತ್ರವಲ್ಲ, ಏಳು ಬಾರಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಮೊದಲ ಅಲೆಯಲ್ಲೇ ಕೋರೊನಾ ಸೋಂಕಿಗೆ ಒಳಗಾದ ಈತ ಎರಡನೇ ಅಲೆ ಬಂದರೂ ಸೋಂಕುಮುಕ್ತನಾಗಿರಲಿಲ್ಲ. ಒಟ್ಟಿನಲ್ಲಿ ಈತ ಜಗತ್ತಿನಲ್ಲೇ ಅತಿ ಹೆಚ್ಚು ಕಾಲ ಕೋವಿಡ್ ನಿಂದ ಬಳಲಿದ ವ್ಯಕ್ತಿ ಈತನೇ. ಹಾಗಿದ್ದರೂ ಪ್ರತೀ ಬಾರಿ ಕೋರೋನಾವನ್ನು ಸೋಲಿಸಿದ್ದಾರೆ.

ಹೀಗೆ ಅತಿಹೆಚ್ಚು ಕಾಲ ಕೋವಿಡ್‌ನಿಂದ ಬಳಲಿದ ಈ ಬ್ರಿಟಿಷ್ ವ್ಯಕ್ತಿಯ ಹೆಸರು ಡೇವ್ ಸ್ಮಿತ್. ಅತಿ ಹೆಚ್ಚು ಬಾರಿ ಕೋರೋನಾ ವನ್ನು ಸೇರಿಸಿದವನು ಯುನೈಟೆಡ್ ಕಿಂಗ್ಡಮ್ ನ ಬ್ರಿಸ್ಟಲ್‌ನ ವ್ಯಕ್ತಿ.
ಅಷ್ಟು ಬಾರಿ ಈ ಸಾಂಕ್ರಾಮಿಕ ರೋಗವನ್ನು ಸೋಲಿಸಿದ ವ್ಯಕ್ತಿ ನವ ಯೌವನದ ತರುಣ ಅಂದುಕೊಳ್ಳಬೇಡಿ. ಆತ 72 ವರ್ಷದ ವೃದ್ದ !

ಅಷ್ಟೇ ಅಲ್ಲ, ಈತ ಕೋರೋನಾ ಹೋರಾಟದಲ್ಲಿ ಹೆಚ್ಚು ಕಮ್ಮಿ ಒಂದು ವರ್ಷಗಳ ಕಾಲ ಆಸ್ಪತ್ರೆಯಲ್ಲಿಯೇ ಕಾಲ ಕಳೆದಿದ್ದಾರೆ.

ಈತ ತನ್ನ ಪರಿಸ್ಥಿತಿ ಕುರಿತು ಗೆಳೆಯರಲ್ಲಿ ಹೀಗೆ ಹೇಳಿಕೊಂಡಿದ್ದಾನೆ. ” ಯಾವಾಗೆಲ್ಲ ನನ್ನ ಪರಿಸ್ಥಿತಿ ಗಂಭೀರವಾಗಿತ್ತೋ ಆಗೆಲ್ಲ ನಾನು ತೀರಾ ಚಿಂತಾಜನಕ ಸ್ಥಿತಿಗೆ ತಲುಪಿದ್ದೆ. ಎಷ್ಟೆಂದರೆ ಪ್ರತಿಸಲವೂ ಸಾವಿನ ಬಾಗಿಲನ್ನು ತಟ್ಟಿ ಬಂದಿದ್ದೇನೆ. ಎಷ್ಟರಮಟ್ಟಿಗೆ ಎಂದರೆ ಪತ್ನಿ ಐದು ಸಲ ನನ್ನ ಶವಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದಳು. ” ಎಂದು ತಮ್ಮ ಕೋವಿಡ್ ಅನುಭವ ಹೇಳಿಕೊಂಡಿದ್ದಾನೆ ಡೇವ್ ಸ್ಮಿತ್.

“2019ರಲ್ಲಿ ಲ್ಯೂಕೇಮಿಯಾದಿಂದ ಬಳಲುತ್ತಿದ್ದ ನಾನು 2020ರ ಮಾರ್ಚ್‌ನಲ್ಲಿ ಕೋವಿಡ್ ಸೋಂಕಿಗೆ ಒಳಗಾದೆ. ಆದರೆ ಏಪ್ರಿಲ್‌ವರೆಗೂ ನಾನು ಪರೀಕ್ಷೆಗೆ ಒಳಗಾಗಿಲ್ಲ. ಕೊನೆಗೆ ಎದೆಯಲ್ಲಿ ಸೋಂಕು ವ್ಯಾಪಿಸಿಕೊಂಡ ಬಳಿಕ ಆಸ್ಪತ್ರೆಗೆ ಸೇರಬೇಕಾಯಿತು. ಆದರೆ ಸ್ವಲ್ಪ ಚೇತರಿಸಿಕೊಂಡು ಮನೆಗೆ ಬಂದರೂ ಮತ್ತೆ ಆರೋಗ್ಯ ಪರಿಸ್ಥಿತಿ ಹದಗೆಟ್ಟು ಆಸ್ಪತ್ರೆಗೆ ಸೇರುವಂತಾಗಿತ್ತು. ಹೀಗೆ 43 ಸಲ ಕೋವಿಡ್ ಪಾಸಿಟಿವ್ ಆಗಿ, 7 ಸಲ ಆಸ್ಪತ್ರೆಗೆ ದಾಖಲಾಗುವಂತಾಯಿತು. ಒಟ್ಟಿನಲ್ಲಿ ಕೊರೊನಾ ಸೋಂಕಿತನಾಗಿ 305 ದಿನಗಳ ಕಾಲ ಆಸ್ಪತ್ರೆಯಲ್ಲಿ ಕಳೆದಿದ್ದೇನೆ. ಒಟ್ಟಿನಲ್ಲಿ ಸುಮಾರು ಹತ್ತು ತಿಂಗಳ ಕಾಲ ಆಸ್ಪತ್ರೆಯಲ್ಲಿದ್ದು, ಒಂದು ಸಮಯದಲ್ಲಂತೂ 2-3 ತಿಂಗಳವರೆಗೂ ನಿರಂತರವಾಗಿ ಆಸ್ಪತ್ರೆಯಲ್ಲಿ ಇರುವಂತಾಗಿತ್ತು. ಇಷ್ಟು ಸುದೀರ್ಘವಾದ ಸೋಂಕಿನಿಂದ ನಾನು ಸಂಪೂರ್ಣ ನಿತ್ರಾಣಗೊಂಡಿದ್ದು, ಕಳೆದುಕೊಂಡಿರುವ ಬಾಯಿರುಚಿ ಇನ್ನೂ ವಾಪಸ್ ಬಂದಿಲ್ಲ. ಕೋವಿಡ್ ಸೋಂಕಿಗೆ ಒಳಗಾಗುವ ಮುನ್ನ 117 ಕೆ.ಜಿ. ಇದ್ದ ನನ್ನ ದೇಹತೂಕ ಈಗ 63 ಕೆ.ಜಿ.ಗೆ ಇಳಿದಿದೆ ಎಂದು ಡೇವ್ ಹೇಳಿದ್ದಾನೆ.

ಸದ್ಯ ಡೇವ್ ಸ್ಮಿತ್ ಕೋವಿಡ್ ಪಾಸಿಟಿವ್ ಟೆಸ್ಟ್ ನೆಗೆಟಿವ್ ರಿಪೋರ್ಟ್ ಸಿಕ್ಕಿದ್ದು ಅದನ್ನು ಊರಿಗೆಲ್ಲ ತೋರಿಸಿ ಆತ ಸಿಕ್ಕಾಪಟ್ಟೆ ಖುಷಿಪಟ್ಟಿದ್ದಾನೆ. ಇದೊಂದು ವಿಶೇಷ ಪ್ರಕರಣವಾಗಿದ್ದು, ಸ್ಮಿತ್ ಸೋಂಕಿನ ಕುರಿತು ಬ್ರಿಸ್ಟಲ್ ಯುನಿವರ್ಸಿಟಿಯ ವೈರಾಲಜಿಸ್ಟ್ ಆ್ಯಂಡೂ ಡೇವಿಡ್‌ಸನ್ ಅಧ್ಯಯನ ನಡೆಸಲು ಮುಂದಾಗಿದ್ದಾರೆ. ಒಟ್ಟಾರೆಯಾಗಿ ಕೋರೋನಾ ವಿರುದ್ಧ ಸುದೀರ್ಘ ಸಮಯ ಹೋರಾಡಿದ ಸ್ಮಿತ್ ಹಲವು ದಾಖಲೆಗಳನ್ನು ಕೋರೋನಾ ಹೋರಾಟದಲ್ಲಿ ಬರೆದಿದ್ದು, ಡೇವ್ ಸ್ಮಿತ್ ನನ್ನು ಈಗ ಆತನ ಊರಲ್ಲಿ ಬ್ರೇವ್ ಸ್ಮಿತ್ ಎನ್ನುತ್ತಿದ್ದಾರೆ.

Leave A Reply

Your email address will not be published.