ಲಿಂಕ್ ಕಳುಹಿಸಿ ಒಟಿಪಿ ಪಡೆದು ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿರುವ ವಂಚಕರು | ಎಚ್ಚರ ಗ್ರಾಹಕರೇ ಎಚ್ಚರ!!

“ನಿಮ್ಮ ಬ್ಯಾಂಕ್ ಖಾತೆ ಬ್ಲಾಕ್ ಆಗಿದೆ. ಕೂಡಲೇ ಅಗತ್ಯ ದಾಖಲೆಗಳನ್ನು ಅಪ್‌ಡೇಟ್ ಮಾಡಿ. ಅದಕ್ಕಾಗಿ ಈ ಲಿಂಕ್ ಒತ್ತಿ” ಎಂಬ ಸಂದೇಶದೊಂದಿಗೆ ವೆಬ್ಸೈಟ್ ಲಿಂಕ್ ಕಳುಹಿಸಿ ಗ್ರಾಹಕರ ಖಾತೆಯಿಂದ ಹಣ ದೋಚಿದ ಘಟನೆಗಳು ಮಂಗಳೂರು ನಗರದ ಹಲವೆಡೆ ನಡೆದಿವೆ.

 

ಲಿಂಕ್ ಒತ್ತಿದ ಕೂಡಲೇ ಬ್ಯಾಂಕ್‌ನ ಅಧಿಕೃತ ಸೈಟ್‌ನಂಥದ್ದೇ ಒಂದು ಸೈಟ್‌ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಖಾತೆಗೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ನಮೂದಿಸುವಂತೆ ಸೂಚಿಸಲಾಗುತ್ತದೆ.ಅಲ್ಲಿ ನಿಮ್ಮ ಮಾಹಿತಿಗಳನ್ನು ನಮೂದಿಸಿದ ತತ್‌ಕ್ಷಣ ವಂಚಕರ ಕೈಸೇರುತ್ತದೆ. ಅವರು ಬ್ಯಾಂಕ್‌ನ ಅಧಿಕೃತ ಸೈಟ್‌ನಲ್ಲಿ ನಿಮ್ಮ ಖಾತೆಯನ್ನು ತೆರೆಯುತ್ತಾರೆ. ಕೂಡಲೇ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿರುವ ನಿಮ್ಮ ಮೊಬೈಲ್‌ಗೆ ಒಟಿಪಿ ಬರುತ್ತದೆ. ವಂಚಕರು ಅದನ್ನು ಪಡೆದು ಹಣ ಲಪಟಾಯಿಸುತ್ತಾರೆ ಎಂದು ಸೈಬರ್ ಪರಿಣತರು ತಿಳಿಸಿದ್ದಾರೆ.

ರಾಷ್ಟ್ರೀಕೃತ ಬ್ಯಾಂಕ್‌ಗಳ ಹೆಸರಿನಲ್ಲಿ ಸಂದೇಶಗಳು ಬಂದಿದ್ದು ನಂಬಿದ ಗ್ರಾಹಕರು ಒಟಿಪಿ ನೀಡಿದ್ದಾರೆ. ನಗರದ ರಾಷ್ಟ್ರೀಕೃತ ಬ್ಯಾಂಕೊಂದರ ಗ್ರಾಹಕರು 63,000 ರೂ.ಕಳೆದು ಕೊಂಡಿದ್ದಾರೆ. ಇನ್ನೂ ಕೆಲವರು ಇದೇ ರೀತಿ ಮೋಸ ಹೋಗಿರುವ ವಿಷಯ ಬೆಳಕಿಗೆ ಬಂದಿದೆ.

ಬ್ಯಾಂಕ್‌ನವರು ಎಂದೂ ಒಟಿಪಿ ಕೇಳುವುದಿಲ್ಲ. ನಮ್ಮ ಬ್ಯಾಂಕ್‌ನ ಕೆಲವು ಗ್ರಾಹಕರಿಗೂ ಇಂತಹ ಸಂದೇಶ, ಲಿಂಕ್ ಬಂದಿದೆ. ಈಗಾಗಲೇ ಜಾಗೃತಿ ಮೂಡಿಸಿರುವ ಪರಿಣಾಮವಾಗಿ ಹಲವು ಗ್ರಾಹಕರು ಕರೆ ಮಾಡಿ ವಿಚಾರಿಸಿದ್ದಾರೆ. ಒಂದಿಬ್ಬರು ಹಣ ಕಳೆದುಕೊಂಡಿರುವ ಮಾಹಿತಿ ಇದೆ. ಇಂತಹ ಸಂದರ್ಭದಲ್ಲಿ ತ್ವರಿತವಾಗಿ ಸ್ಪಂದಿಸಲು ನಮ್ಮ ಐಟಿ ಮತ್ತು ಡಿಜಿಟಲ್ ವಿಭಾಗವನ್ನು ಸನ್ನದ್ಧವಾಗಿರಿಸಿದ್ದೇವೆ. ಯಾವುದೇ ಬ್ಯಾಂಕ್‌ಗಳು ಕೆವೈಸಿಗಾಗಿ (ದಾಖಲೆಗಳ ದೃಢೀಕರಣ) ಮೊಬೈಲ್ ಲಿಂಕ್ ಕಳುಹಿಸುವುದಿಲ್ಲ ಹಾಗೂ ಒಟಿಪಿ ಕೇಳುವುದಿಲ್ಲ. ಆದ್ದರಿಂದ ಯಾವುದೇ ಬ್ಯಾಂಕ್‌ಗಳ ಖಾತೆದಾರರು ಯಾರಿಗೂ ಒಟಿಪಿ ನೀಡುವ ಅಗತ್ಯವೇ ಇರುವುದಿಲ್ಲ ಎಂದು ಎಸ್‌ಬಿಐ ಮಂಗಳೂರಿನ ಪ್ರಾದೇಶಿಕ ಪ್ರಬಂಧಕ ಹರಿಶಂಕರ್ ಅವರು ಹೇಳಿದ್ದಾರೆ.

ಕೆಲವು ಗ್ರಾಹಕರು ಲಿಂಕ್ ತೆರೆದಾಗ ಸಂಶಯಗೊಂಡು ಕೂಡಲೇ ಬ್ಯಾಂಕ್‌ಗೆ ಕರೆ ಮಾಡಿದ್ದರಿಂದ ವಂಚನೆಯ ವಿಚಾರ ಗೊತ್ತಾಯಿತು. ಲಿಂಕ್ ತೆರೆದ ಕಾರಣ ಅಪಾಯ ಬೇಡ ಎಂದು ಕೂಡಲೇ ನೆಟ್ ಬ್ಯಾಂಕಿಂಗ್ ಪಾಸ್‌ವರ್ಡ್ ಬದಲಾಯಿಸುವಂತೆ ಬ್ಯಾಂಕ್‌ನವರು ಸೂಚಿಸಿದ್ದಾರೆ. “ತ‌ಕ್ಷಣಕ್ಕೆ ಖಾತೆಯನ್ನು ಬ್ಲಾಕ್ ಮಾಡುವುದಾಗಿಯೂ ಮುಂದೆ ಖುದ್ದಾಗಿ ಬ್ಯಾಂಕ್‌ಗೆ ಆಗಮಿಸಿ ಬ್ಲಾಕ್ ತೆರವು ಮಾಡಿಸಿಕೊಳ್ಳಿ” ಎಂದು ಸಲಹೆ ನೀಡಿದ್ದಾರೆ ಎಂಬ ಮಾಹಿತಿ ದೊರೆತಿದೆ.

Leave A Reply

Your email address will not be published.