ವಿಶ್ವ ಪರಿಸರ ದಿನದಂದು ಸ್ವಾರ್ಥಿ ಮನುಕುಲಕ್ಕೆ ಕಿವಿಮಾತು..ಕೇವಲ ತೋರಿಕೆಗೆ ಸೀಮಿತವಾಗದಿರಲಿ ನಿಸ್ವಾರ್ಥಿ ಪರಿಸರದ ಮೇಲಿನ ಅಮೋಘ ಪ್ರೀತಿ

ಪರಿಸರ” ಕೇವಲ ಪದವಲ್ಲ, ಮನುಕುಲಕ್ಕೆ ಉಸಿರಾಡಲು ಗಾಳಿ, ಆಹಾರ ಇನ್ನೂ ಜೀರ್ಣಸಿಕೊಳ್ಳಲಾಗದಂತಹ ಸಾಗರದಷ್ಟು ಸಂಪತ್ತನ್ನು ಕರುಣಿಸುವ ನಿಸ್ವಾರ್ಥಿ.ಸ್ವಚ್ಛ ಪರಿಸರ ಅರೋಗ್ಯ ಪರಿಸರ ಎಂಬ ಧ್ಯೇಯ ವಾಕ್ಯದೊಂದಿಗೆ ಎಲ್ಲರಿಗೂ “ವಿಶ್ವ ಪರಿಸರ ದಿನದ ಶುಭಾಶಯಗಳು” .

ಸಂಯುಕ್ತ ರಾಷ್ಟ್ರಗಳ ಪರಿಸರ ದಿನದ ಚಿಹ್ನೆ

ಪರಿಸರದ ರಕ್ಷಣೆಯ ಬಗ್ಗೆ ಜನರಿಗೆ ಅರಿವು ಮತ್ತು ಜಾಗೃತಿಯನ್ನು ಮೂಡಿಸುವ ಮೂಲ ಉದ್ದೇಶದಿಂದ 1972 ರಲ್ಲಿ ಸಂಯುಕ್ತ ರಾಷ್ಟ್ರಗಳು ಆಯೋಜಿಸಿದ್ದ ವಿಶ್ವ ಪರಿಸರ ಸಮ್ಮೇಳನದಲ್ಲಿ ನಡೆದ ಚರ್ಚೆಯ ನಂತರ, ಈ ದಿನಾಚರಣೆಯನ್ನು ಆಚರಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಅದರಂತೆ 5 ಜೂನ್ 1974 ರಂದು ವಿಶ್ವದ ಪ್ರಥಮ ಪರಿಸರ ದಿನವನ್ನು ಆಚರಿಸಿದ್ದು,ನಂತರದಲ್ಲಿ ಪ್ರತೀ ವರ್ಷ ವಿಶ್ವದಾದ್ಯಂತ ಆಚರಣೆ ಮಾಡಲಾಗುತ್ತದೆ.

ಪರಿಸರ ನಮಗೇನು ಕೊಡುತ್ತದೆ? ನಾವು ಯಾಕೆ ಪರಿಸರವನ್ನು ಸ್ವಚ್ಛಂದವಾಗಿ ಇಟ್ಟುಕೊಳ್ಳಬೇಕು ಎಂಬುದನ್ನು ಪ್ರಾಥಮಿಕ ಶಾಲೆಯಿಂದಲೇ ಕಲಿಯುತ್ತಾ ಬರುತ್ತೇವೆ. ಪರಿಸರ ಅಧ್ಯಯನ ಎಂಬ ಒಂದು ಗದ್ಯ ಪುಸ್ತಕ ಮಕ್ಕಳಿಗೆ ಪರಿಸರದ ಬಗ್ಗೆ ಅರಿವಿನ ಜೊತೆಗೆ ಪ್ರೀತಿ ಹುಟ್ಟುವಂತೆ ಮಾಡಿರುವುದು ನಿಜವಲ್ಲವೇ?.

ಜೀವಿಗಳು ಜೀವಿಸಲು ಬೇಕಾದ ಪರಿಸರ ಭೂಮಿ ಮೇಲೆ ಮಾತ್ರವಿದೆ, ಇದ್ದ ಒಂದು ಪರಿಸರವನ್ನು ನಾವು ಕಾಪಾಡಿಕೊಂಡು ಹೋಗುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಮಾನವನು ಇದೇ ರೀತಿಯಾಗಿ ಪರಿಸರವನ್ನು ನಾಶ ಮಾಡುತ್ತ ಹೋದರೆ ಒಂದು ದಿನ ನಮ್ಮ ಭೂಮಿಯು ಮಂಗಳ ಗ್ರಹದಂತೆ ಬರಡಾಗಿ ಬಿಡುತ್ತದೆ.

ಮನುಷ್ಯನು ಪರಿಸರಕ್ಕೆ ಸರಿಯಾಗಿ ಹೊಂದಿಕೊಳ್ಳುವುದರೊಂದಿಗೆ ತನ್ನ ದೈನಂದಿನ ಅನುಕೂಲಕ್ಕಾಗಿ ಪರಿಸರವನ್ನೇ ಬದಲಾಯಿಸುವ ಕ್ರಮಗಳನ್ನು ಕೈಗೊಂಡಿದ್ದಾನೆ. ತಂತ್ರವಿಜ್ಞಾನ ಪ್ರಗತಿ ಕೈಗಾರಿಕೋದ್ಯಮಗಳ ಹೆಚ್ಚಳಗಳಿಂದ ಆಮ್ಲಜನಕದ ಕೊರತೆಯಾಗಿ ಮನುಷ್ಯನ ನಿತ್ಯಜೀವನಕ್ಕೆ ತೊಂದರೆಗಳನ್ನು ಒಡ್ಡಿರುವುದು ಗಮನಕ್ಕೆ ಬಂದಿದೆಯಾದರೂ ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಅಲ್ಲಲ್ಲಿ ಕದ್ದು ಮುಚ್ಚಿ ಹಗರಣಗಳು ನಡೆಯುತ್ತಿರುವುದು ಈಗಾಗಲೇ ಗಮನಕ್ಕೆ ಬಂದಿದೆ.

ಇಂದಿನ ದಿನಗಳಲ್ಲಿ ಜೂನ್‌ 5ರಂದು ಮಾತ್ರ ಗಿಡ ನೆಡುವ ಮೂಲಕ “ಪರಿಸರ ಪ್ರೇಮಿ” ಎನಿಸಿ ಅನಂತರ ಅದರ ಬಗ್ಗೆ ಯಾವುದೇ ರೀತಿಯ ಕಾಳಜಿ ವಹಿಸದೇ ಪರಿಸರದ ಕುರಿತಾದ ಭಾಷಣಗಳಿಗೆ ಸೀಮಿತವಾಗಿ ಬಿಟ್ಟಿದೆ. ಅನಂತರ ಪರಿಸರವು ನೆನಪಾಗಬೇಕೆಂದರೆ ಮುಂದಿನ ವರ್ಷದ ಜೂನ್‌ 5 ಬರಬೇಕು. ಇದು ಇಂದಿನ ಸ್ಥಿತಿ.ಪರಿಸರ ಪ್ರಾಮುಖ್ಯತೆಯ ಕುರಿತು ಸಿನೆಮಾ ಹಾಗೂ ಇನ್ನಿತರ ಮನರಂಜನಾ ಕಾರ್ಯಕ್ರಮಗಳಲ್ಲಿ, ದಿನಪತ್ರಿಕೆ ಹಾಗೂ ಟಿವಿ ಮಧ್ಯಮಗಳಲ್ಲಿ ಜಾಹೀರಾತು ನೀಡುವುದರ ಮೂಲಕ ಜನರಿಗೆ ಮಾನವರಿಕೆ ಮಾಡಿಸಬೇಕು ಪರಿಸರ ಮಹತ್ವವನ್ನು ತಿಳಿಯಪಡಿಬೇಕು ಎಂಬುವುದೇ ಪರಿಸರ ದಿನದ ಮೂಲ ಉದ್ದೇಶವಾಗಿದೆ.

ಪರಿಸರದ ರಕ್ಷಣೆಯ ಘೋಷಣೆಗಳು, ಭಾಷಣಗಳು, ಪ್ರಶಸ್ತಿಗಳು, ಸನ್ಮಾನಗಳು ಕೇವಲ ಒಂದು ದಿನದ ತೋರಿಕೆಗೆ ಮಾತ್ರ ಸೀಮಿತವಾಗದೆ, ನಿಜ ಜೀವನದಲ್ಲಿ ಪರಿಸರ ರಕ್ಷಣೆಯ ಜವಾಬ್ದಾರಿಯನ್ನು ಪ್ರತಿಯೊಬ್ಬ ನಾಗರೀಕನು ನಿಸ್ವಾರ್ಥಿಯಾಗಿ ಹೊತ್ತರೆ ಮಾತ್ರ ಪರಿಸರ ದಿನಕ್ಕೆ ನಿಜ ಅರ್ಥ ಬರುತ್ತದೆ ಎಂಬುವುದೇ ಆಶಯ.

ಬರಹ :-✍️ಶ್ರೀದೇವಿ ಹೆಗಡೆ

Leave A Reply

Your email address will not be published.