ಪ್ಯಾಕೇಜ್‍ನಲ್ಲಿ ಮೀನುಗಾರರಿಗೂ ಪರಿಹಾರ ಘೋಷಣೆ:ಸಚಿವ ಅಂಗಾರ

ಕಡಬ: ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಆರ್ಥಿಕ ಸಂಕಷ್ಟದ ನಡುವೆಯೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಎರಡನೇ ಬಾರಿಗೆ ಘೋಷಣೆ ಮಾಡಿರುವ 500 ಕೋಟಿ ರೂ. ವಿಶೇಷ ಪ್ಯಾಕೇಜ್‍ನಲ್ಲಿ ಮೀನುಗಾರರು ಹಾಗೂ ಇನ್‍ಲ್ಯಾಂಡ್ ದೋಣಿ ಮಾಲಕರಿಗೂ ತಲಾ 3000 ರೂ. ಪರಿಹಾರ ಧನ ಲಭಿಸಲಿದೆ ಎಂದು ಬಂದರು, ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಅವರು ತಿಳಿಸಿದ್ದಾರೆ.

ಲಾಕ್‍ಡೌನ್ ಜಾರಿಯಿಂದಾಗಿ ಬಡ ಮೀನುಗಾರ ಕುಟುಂಬಗಳೂ ಸಂಕಷ್ಟಕ್ಕೀಡಾಗಿದ್ದು, ಅವರಿಗೂ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿತ್ತು.

ನಮ್ಮ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿಗಳು ಭಾರತ ಸರ್ಕಾರದ ಉಳಿತಾಯ ಮತ್ತು ಪರಿಹಾರ ಯೋಜನೆಯಡಿ ನೋಂದಾಯಿಸಿಕೊಂಡಿರುವ 18746 ಮೀನುಗಾರರಿಗೆ ತಲಾ 3000 ರೂ. ಪರಿಹಾರ ಘೋಷಣೆ ಮಾಡಿದ್ದು, ಅದಕ್ಕಾಗಿ 5.6 ಕೋಟಿ ರೂ. ವೆಚ್ಚವಾಗಲಿದೆ. ಒಟ್ಟು 7668 ಇನ್‍ಲ್ಯಾಂಡ್ ದೋಣಿ ಮಾಲಕರಿಗೂ ತಲಾ 3000 ರೂ. ಪರಿಹಾರ ನೀಡಲು ನಿರ್ಧರಿಸಿದ್ದು, ಅದಕ್ಕೆ 2.3 ಕೋಟಿ ರೂ. ವೆಚ್ಚವಾಗಲಿದೆ. ಹಾಗೆಯೇ ಮೀನುಗಾರರ ಸಂಘಗಳಿಂದ ಒಳನಾಡು ಮೀನುಗಾರಿಕೆಗೆ ಸರ್ಕಾರಕ್ಕೆ ನೀಡಬೇಕಾಗಿರುವ ಕಂಟ್ರಾಕ್ಟ್ ಫೀಸ್‍ನಲ್ಲಿ ಶೇ. 25 ರಿಯಾಯಿತಿಯನ್ನು ಕೂಡ ನೀಡಲು ನಿರ್ಧರಿಸಲಾಗಿದೆ.

ಬಡ ಮೀನುಗಾರರ ಸಂಕಷ್ಟಕ್ಕೆ ಸ್ಪಂದಿಸಿ ನೆರವು ನೀಡುತ್ತಿರುವ ಮುಖ್ಯಮಂತ್ರಿಗಳಿಗೆ ಮೀನುಗಾರರ ಪರವಾಗಿ ಕೃತಜ್ಞತೆ ಸಲ್ಲಿಸುತ್ತಿರುವುದಾಗಿ ಸಚಿವ ಅಂಗಾರ ಅವರು ತಿಳಿಸಿದರು.

Leave A Reply

Your email address will not be published.