ಕಡಬ ತಾಲೂಕು | ಲಾಕ್ಡೌನ್ ನಿಯಮ ಪಾಲನೆ ನೋಡಿಕೊಳ್ಳುವ ಜವಾಬ್ದಾರಿ ಪೋಲಿಸರಿಗೆ ಮಾತ್ರ | ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರಾ ಪಿ.ಡಿ.ಒ., ವಿ.ಎ., ನೋಡೆಲ್ ಅಧಿಕಾರಿಗಳು ?
ಕಡಬ: ಹಲವಾರು ಕಾರಣಗಳಿಂದ ದಿನದಿಂದ ದಿನಕ್ಕೆ ಕಡಬ ತಾಲೂಕಿನಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವುದು ಒಂದೆಡೆಯಾದರೆ, ಸರಕಾರಿ ಅಧಿಕಾರಿಗಳ ಕರ್ತವ್ಯ ನಿರ್ವಹಣೆಯಲ್ಲಿ ಕೂಡ ಸಂಶಯ ಉಂಟಾಗುತ್ತಿದೆ.
ಕೊರೊನಾ ಸೋಂಕು ನಿಯಂತ್ರಣಕ್ಕೆ ಬರಲಿ ಎನ್ನುವ ಕಾರಣಕ್ಕಾಗಿ ಸರಕಾರ ಮತ್ತೆ ಲಾಕ್ಡೌನ್ ಮುಂದುವರಿಸಿ ಆದೇಶಿಸಿದೆ. ಸರಕಾರ ಯಾವುದೇ ಆದೇಶಗಳನ್ನು ಮಾಡಿದರೂ ಜನ ಅದನ್ನು ಯಥಾವತ್ತಾಗಿ ಪಾಲನೆ ಮಾಡುವುದಿಲ್ಲ, ಯಾಕೆಂದರೆ ಅಧಿಕಾರಿಗಳು ದಿನಂಪ್ರತಿ ಅದನ್ನು ಹೇಳುತ್ತಾ ಬರಬೇಕಾಗುತ್ತದೆ, ಆದರೆ ಇಲ್ಲಿ ಲಾಕ್ಡೌನ್ ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿ ಜನರು ಸುತ್ತಾಡುತ್ತಿದ್ದರೆ ಅದನ್ನು ನಿಯಂತ್ರಿಸುವುದು ಪೊಲೀಸರಿಗೆ ಮಾತ್ರ ಕೆಲಸವೇ ಅಥವಾ ಕೊರೋನಾ ಕಾರ್ಯಪಡೆಯಲ್ಲಿರುವ ಗ್ರಾ.ಪಂ. ಅಭಿವೃದ್ದಿ ಅಧಿಕಾರಿಗಳು, ಗ್ರಾಮಕರಣಿಕರು ಅಲ್ಲದೆ ನೋಡೆಲ್ ಅಧಿಕಾರಿಗಳಿಗೆ ಇಲ್ಲವೇ ಎಂಬ ಪ್ರಶ್ನೆ ಉದ್ಭವಿಸಿದೆ. ಕಳೆದ ಬಾರಿಯ ಲಾಕ್ಡೌನ್ ಗೆ ಹೋಲಿಸಿದರೆ ಈ ಬಾರಿ ಕೊರೋನಾ ನಿಯಂತ್ರಣದಲ್ಲಿ ಸರಕಾರಿ ಅಧಿಕಾರಿಗಳ ಕೆಲಸ ನಿಧಾನವಾಗಿ ಸಾಗಿದೆ ಎನ್ನುವುದರಲ್ಲಿ ಸಂಶಯ ಇಲ್ಲ.
ಗ್ರಾಮಗಳಿಗೆ ಒಂದು ಸುತ್ತು
ಕಾಣ ಸಿಗದ ಅಧಿಕಾರಿಗಳು!
ಈ ಬಗ್ಗೆ ಮಾಧ್ಯಮ ಮಂದಿ ಗ್ರಾಮಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದಾಗ, ಎಲ್ಲೆಲ್ಲಿ ನೋಡಿದರೂ ಕೊರೋನಾದ ಭಯವೇ ಇಲ್ಲದೆ ಜನ ಗುಂಪು ಗುಂಪಾಗಿ ಅಂಗಡಿಗಳಲ್ಲಿ ಸೇರುತ್ತಿದ್ದಾರೆ. ಕೆಲವರಲ್ಲಿ ಮಾಸ್ಕ್ ಇಲ್ಲ, ಇನ್ನು ಕೆಲವರ ಮಾಸ್ಕ್ ಬಾಯಿಯಿಂದ ಕೆಳಗೆ ಗದ್ದಕ್ಕೆ ಮಾತ್ರ ಸೀಮಿತವಾಗಿದೆ. ಅಲ್ಲದೆ ಕೆಲವು ಅಗತ್ಯ ವಸ್ತುಗಳ ಅಂಗಡಿಗಳನ್ನು ಸಮಯಕ್ಕೆ ಸರಿಯಾಗಿ ಮುಚ್ಚದೆ, ಪೋಲಿಸರು ಬಂದು ಬಂದ್ ಮಾಡಲು ಹೇಳುವ ತನಕ ವ್ಯಾಪಾರದಲ್ಲಿ ನಿರತರಾಗಿರುವುದು ಕಂಡು ಬಂದಿದೆ. ಲಾಕ್ಡೌನ್ ನೆಪದಲ್ಲಿ ಅಧಿಕಾರಿಗಳು ಕೂಡ ತಮ್ಮ ಕಛೇರಿಗಳಿಗೆ ತಡವಾಗಿ ಆಗಮಿಸುವುದು ಕಂಡು ಬರುತ್ತಿದೆ, ಪಂಚಾಯತ್ಗಳ ಬಾಗಿಲು ತೆರೆಯುವುದು 10 ಗಂಟೆಯ ಬಳಿಕ, ಈ ರೀತಿಯಾದರೇ ಜನರನ್ನು ನಿಯಂತ್ರಿಸುವವರು ಯಾರು ಎಂಬ ಪ್ರಶ್ನೆ ಉದ್ಬವಿಸಿದೆ.
ನೋಡೆಲ್ ಅಧಿಕಾರಿಗಳು ಕಾರ್ಯಪಡೆ
ಸಭೆಗೆ ಮಾತ್ರ ಸೀಮಿತವೇ
ಈಗಾಗಲೇ ಸರಕಾರ ನೋಡೆಲ್ ಅಧಿಕಾರಿಗಳನ್ನು ನೇಮಕಗೊಳಿಸಿ ಕಾರ್ಯಪಡೆಯ ಮೇಲುಸ್ತುವಾರಿಯನ್ನು ನೋಡಿಕೊಳ್ಳಲು ನೇಮಿಸಿದೆ. ಆದರೇ ಈ ಬಾರಿ ನೋಡೆಲ್ ಅಧಿಕಾರಿಗಳು ಗ್ರಾಮದಲ್ಲಿ ಗಸ್ತು ತಿರುಗುವುದು ಕಂಡು ಬರುತ್ತಿಲ್ಲ, ನೋಡೆಲ್ ಅಧಿಕಾರಿಗಳು ಗಸ್ತು ತಿರುಗಿದರೆ ಜನ ಅನಗತ್ಯ ಓಡಾಟ ಮಾಡುವುದಿಲ್ಲ ಎನ್ನುವುದಕ್ಕೆ ಕಡಬದಲ್ಲಿ ಕಳೆದ ಲಾಕ್ಡೌನ್ ಸಮಯದಲ್ಲಿ ಕಾರ್ಯನಿರ್ವಹಿಸಿದ ಅಧಿಕಾರಿಯೊಬ್ಬರ ಕಾರ್ಯವೈಖರಿಯೇ ಸಾಕ್ಷಿ, ಇಲ್ಲಿ ಅಧಿಕಾರಿಗಳು ಪ್ರತಿ ವಾರ ನಡೆಯುವ ಕೊರೋನಾ ಕಾರ್ಯಪಡೆಯ ಸಭೆಯಲ್ಲಿ ಮಾತ್ರ ಉತ್ತಮ ಸಲಹೆ ಸೂಚನೆಗಳನ್ನು ನೀಡುತ್ತಾರೆ, ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿ ಒಳ್ಳೆಯ ನಿರ್ಣಯಗಳನ್ನು ಮಾಡುತ್ತಾರೆ. ಆದರೆ ಈ ನಿರ್ಣಯ, ಸಲಹೆ, ಸೂಚನೆಗಳನ್ನು ಪಾಲನೆ ಮಾಡುವಲ್ಲಿ ಕೆಲಸ ನಿರ್ವಹಿಸಬೇಕಾದವರೂ ಯಾರು ಎಂಬ ಪ್ರಶ್ನೆ ಉದ್ಭವಿಸಿದೆ, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು ಮಾತ್ರವೇ, ಈಗಾಗಲೇ ಆಶಾ ಕಾರ್ಯಕರ್ತೆ ಯರು ಮನೆ ಭೇಟಿ ಮಾಡಿ ವರದಿ ಕೊಡುವುದು ಬಿಟ್ಟರೆ ಇತರ ಸದಸ್ಯರು ಮನೆ ಭೇಟಿ ಮಾಡುವುದು ಕಂಡು ಬರುತ್ತಿಲ್ಲ. ಒಟ್ಟಿನಲ್ಲಿ ಕೊರೋನಾ ಕಾರ್ಯಪಡೆಯ ಕೆಲಸ ದಾಖಲೆಗೆ ಮಾತ್ರ ಸೀಮಿತವೇ ಎಂಬ ಪ್ರಶ್ನೆ ಉದ್ಬವಿಸಿದೆ.
ಸಿಬ್ಬಂದಿ ಕೊರತೆ ನಡುವೆ ಪೋಲಿಸರ ಕಾರ್ಯನಿರ್ವಹಣೆ
ಈಗಾಗಲೇ ಕಡಬ ಪೋಲಿಸ್ ಠಾಣೆಗೆ 19 ಗ್ರಾಮಗಳ ಸರಹದ್ದು ಇದ್ದು ಕೇವಲ 23 ಪೋಲಿಸ್ ಸಿಬ್ಬಂದಿಗಳಿದ್ದಾರೆ, ಇವರಲ್ಲಿ ಚೆಕ್ ಪೋಸ್ಟ್, ಚೆಕ್ ಪಾಯಿಂಟ್, ಕೋರ್ಟ್ ಕೆಲಸಕ್ಕೆ, ಠಾಣಾ ಬರಹಗಾರ, ಠಾಣಾ ಪಹರೆ ಬಿಟ್ಟು ರಾತ್ರಿ/ಹಗಲು ಡ್ಯೂಟಿಗೆ ನೇಮಕ ಮಾಡಬೇಕಾಗುತ್ತದೆ, ಈ ಮಧ್ಯೆ ಸಿಬ್ಬಂದಿಗೆ ರಜೆಯನ್ನು ನೀಡಬೇಕಾಗುವುದರಿಂದ ಕಡಬ ಠಾಣೆಯಲ್ಲಿ ಸಿಬ್ಬಂದಿ ಕೊರತೆಯ ನಡುವೆ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ್ ಕಾರ್ಯಪಡೆಯೇ ಸಕ್ರಿಯವಾಗಿದ್ದರೆ ಲಾಕ್ ಡೌನ್ ಸರಿಯಾಗಿ ಪಾಲನೆಯಾಗಿ ಕೊರೋನಾ ಮುಕ್ತವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಕೊರೋನಾ ಸೋಂಕಿತರನ್ನು ಕೋವಿಡ್
ಸೆಂಟರ್ ಗೆ ಸೇರಿಸುವ ಕೆಲಸ ಆಗುತ್ತಿಲ್ಲ
ಕಳೆದ ವಾರ ಸಚಿವ ಎಸ್. ಅಂಗಾರ ಅವರು ಅಧಿಕಾರಿಗೆ ಸ್ಪಷ್ಟ ನಿರ್ದೇಶನ ನೀಡಿ, ಇನ್ನು ಮುಂದೆ ಕೊರೋನಾ ಸೋಂಕಿತರು ಮನೆಯಲ್ಲಿ ಇರದೆ, ಕೋವಿಡ್ ಸೆಂಟರ್ ನಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ಕಡಬ ತಹಶೀಲ್ದಾರ್ ಮೂಲಕ ಸೂಚನೆ ನೀಡಿದ್ದರು. ಆ ಸಭೆಯಲ್ಲಿ ಎಲ್ಲ ಅಧಿಕಾರಿಗಳು ಸರ್ವಾನುಮತದಿಂದ ಒಪ್ಪಿಕೊಂಡರೂ ಇದುವರೆಗೆ ಕೊರೋನಾ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್ ಗೆ ಸೇರಿಸಲು ಯಾರಿಂದಲೂ ಸಾಧ್ಯವಾಗಿಲ್ಲ, ಈ ಬಗ್ಗೆ ಸೂಚನೆ ನೀಡಿದ ಸಚಿವರೂ ಕೂಡ ಮೌನವಾಗಿದ್ದಾರೆ.
ಕಡಬ ತಾಲೂಕಿನ ಕೋವಿಡ್ ಕಾರ್ಯಪಡೆ ಅಧಿಕಾರಿಗಳು:
ಕಡಬ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಅರುಣ್ ಕೆ. ಹಾಗೂ ಹರೀಶ್ ಬೆದ್ರಾಜೆ (ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಗೆ), ಸುಬ್ರಹ್ಮಣ್ಯ ವಿಶೇಷ ಲೋಕೋಪಯೋಗಿ ಉಪ ವಿಭಾಗದ ಎ.ಇ.ಇ ಜೈ ಪ್ರಕಾಶ್ (ಬಳ್ಪ, ಸುಬ್ರಹ್ಮಣ್ಯ ಹಾಗೂ ಬಿಳಿನೆಲೆ ಗ್ರಾ.ಪಂ. ವ್ಯಾಪ್ತಿ), ಕಡಬ ಮೆಸ್ಕಾಂ ಎಇಇ ಸಜಿಕುಮಾರ್, (ಕುಟ್ರುಪ್ಪಾಡಿ, ಕೊಣಾಜೆ, ಪೆರಾಬೆ ಹಾಗೂ ಎಡಮಂಗಲ ಗ್ರಾ.ಪಂ. ವ್ಯಾಪ್ತಿ),
ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ರಾಘವೇಂದ್ರ (ಐತ್ತೂರು, ಕೊಂಬಾರು, ಮರ್ದಾಳ ಹಾಗೂ ನೂಜಿಬಾಳ್ತಿಲ ಗ್ರಾ.ಪಂ. ವ್ಯಾಪ್ತಿ), ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಮಧುಸೂಧನ್ (ಗೋಳಿತೊಟ್ಟು, ನೆಲ್ಯಾಡಿ, ಕೌಕ್ರಾಡಿ ಹಾಗೂ ಶಿರಾಡಿ ಗ್ರಾ.ಪಂ.ವ್ಯಾಪ್ತಿ), ಕೊಲ ಪಶುಸಂಗೋಪನಾ ಕ್ಷೇತ್ರದ ಸಹಾಯಕ ನಿರ್ದೇಶಕಿ ಡಾ|ಅರ್ಪಾಣ ಹೆಬ್ಬಾರ್ (ಕೊಲ, ರಾಮಕುಂಜ ಹಾಗೂ ಆಲಂಕಾರು ಗ್ರಾ.ಪಂ.ವ್ಯಾಪ್ತಿ), ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ (ಸವಣೂರು, ಬೆಳಂದೂರು ಹಾಗೂ ಕಾಣಿಯೂರು ಗ್ರಾ.ಪಂ.ವ್ಯಾಪ್ತಿ) ಕಡಬ ತಾಲೂಕಿನ ವ್ಯಾಪ್ತಿಯಲ್ಲಿ ಕೋವಿಡ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಸಲುವಾಗಿ ರಚಿಸಲಾದ ಫ್ಲೈಯಿಂಗ್ ಸ್ಕಾ ್ವಡ್ ನೋಡಲ್ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕ್ರಮಕ್ಕೆ ತಹಸೀಲ್ದಾರ್ ಅವರಿಗೆ ಸೂಚನೆ -ಸಹಾಯಕ ಆಯುಕ್ತ ಡಾ.ಯತೀಶ್ ಉಳ್ಳಾಲ್
ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಪುತ್ತೂರು ಸಹಾಯಕ ಆಯುಕ್ತ ಯತೀಶ್ ಉಳ್ಳಾಲ್ ಅವರ ಗಮನಕ್ಕೆ ತಂದಾಗ ಪ್ರತಿಕ್ರಿಯೆ ನೀಡಿದ ಅವರು ನಾನು ಕೂಡಲೇ ಕಡಬ ತಹಸೀಲ್ದಾರ್ ಹಾಗೂ ಕಂದಾಯ ನಿರೀಕ್ಷಕರಿಗೆ ಸೂಚನೆ ನೀಡುತ್ತೇನೆ, ಅವರು ಜೂ.5ರಿಂದಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರಿಗೆ ಸೂಚಿಸುತ್ತೇನೆ ಎಂದು ತಿಳಿಸಿದ್ದಾರೆ.