ಈವರೆಗೂ ಶೂನ್ಯ ಕೋವಿಡ್ ಪ್ರಕರಣ ದಾಖಲಾಗಿ ರಾಜ್ಯಕ್ಕೇ ಆದರ್ಶ ಗ್ರಾಮವಾಗಿ ಮೆರೆಯುತ್ತಿದೆ ಬಾಂಜಾರು ಮಲೆ..ಕಾಡಿನ ಮಧ್ಯೆ ಇರುವ ಮಲೆಕುಡಿಯ ಕುಟುಂಬಗಳ ಒಗ್ಗಟ್ಟಿಗೆ ಹತ್ತೂರಿನಿಂದಲೂ ವ್ಯಕ್ತವಾಗಿದೆ ಪ್ರಶಂಸೆ
ಕೊರೋನ ಮಹಾಮಾರಿ ಇಡೀ ರಾಜ್ಯವನ್ನೇ ಅಟ್ಟಾಡಿಸಿ ಸುತ್ತುವರಿದು ಮನುಕುಲವನ್ನೇ ನಾಶಗೈಯುವ ಪ್ರಯತ್ನದಲ್ಲಿದೆ ಎಂಬುವುದು ನಿಜಾಂಶ. ಆದರೆ ಇಲ್ಲೊಂದು ಮಾದರಿ ಗ್ರಾಮ, ಈ ವರೆಗೂ ಇಲ್ಲಿಗೆ ಯಾವುದೇ ಸೋಂಕು ತನ್ನ ಹಾಜರಿಯನ್ನು ತೋರ್ಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಯಾಕೆ ಹೀಗೆ? ಸೋಂಕು ತನ್ನ ದರ್ಶನ ನೀಡಲು ಅವಕಾಶವಿರದ ಆ ಮಾದರಿ ಗ್ರಾಮವಾದರೂ ಯಾವುದು ಗೊತ್ತಾ ?!
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಾಂಜಾರು ಮಲೆ. ದಟ್ಟ ಕಾನನದೊಳೊಂದು ಆದಿವಾಸಿ ಮಲೆಕುಡಿಯ ಜನಾಂಗ.ಆ ಜನಾಂಗ ಸುಮಾರು ತಲೆಮಾರುಗಳಿಂದಲೂ ಅಲ್ಲಿಯೇ ನೆಲೆಸಿದೆ. ಸದ್ಯ ಮಹಾಮಾರಿ ಕೊರೋನ ರಣಕೇಕೆ ಹಾಕುತ್ತಿರುವ ಈ ಸಂದರ್ಭದಲ್ಲಿ ಆ ಪ್ರದೇಶಕ್ಕೆ ಮಾತ್ರ ಈ ವರೆಗೂ ಒಂದೇ ಒಂದು ಸೋಂಕು ಕಾಲಿಡಲಿಲ್ಲ ಎಂಬ ಸತ್ಯ ಬೆಳಕಿಗೆ ಬಂದಿದೆ. ಕೊರೊನ ಎರಡು ಅಲೆಗಳಲ್ಲಿ ಕೂಡಾ ಪಾಸಿಟಿವ್ ಕೇಸ್ ಪತ್ತೆಯಾಗದೆ ಇರಲು ಕಾರಣವಾದರೂ ಏನು ಎಂದು ಹುಡುಕುತ್ತಾ ಹೊರಟ ಅಧಿಕಾರಿ ವರ್ಗಕ್ಕೆ ನಂಬಲು ಅಸಾಧ್ಯವಾದ ಕೆಲವು ನಿಜಾಂಶಗಳು ಬೆಳಕಿಗೆ ಬಂದಿದೆ.
ಬಾಂಜಾರು ಮಲೆ ಹೆಸರಾಂತ ದಟ್ಟ ಕಾಡು.ಇಲ್ಲಿ ಆದಿವಾಸಿ ಬುಡಕಟ್ಟು ಮಲೆಕುಡಿಯ ಜನಾಂಗದ ಸುಮಾರು 43 ಮನೆಗಳಿದ್ದು ಸುಮಾರು 170 ಕ್ಕೂ ಅಧಿಕ ಜನಸಂಖ್ಯೆಯೂ ಇದೆ. ಎಲ್ಲರೂ ಒಂದೇ ಕುಟುಂಬದವರಾಗಿದ್ದುದರಿಂದ ಅವರೊಳಗೇ ಮದುವೆಗಳು ನಡೆಯುತ್ತದೆ. ಈ ನಡುವೆ ಅವರು ತಮ್ಮ ಕುಲ ಕಸುಬಿನ ಜೊತೆಗೆ ಕೃಷಿಯನ್ನು ಅವಲಂಬಿಸಿದ್ದು, ತೆಂಗು, ಅಡಿಕೆ, ಬಾಳೆ,ಮುಂತಾದ ಬೆಳೆಗಳನ್ನು ಬೆಳೆಯುವುದರಿಂದ ಹೊರಗೆ ಕೆಲಸಕ್ಕೆ ತೆರಳುವುದು ತುಂಬಾ ವಿರಳ.ಮೊದಮೊದಲು ಅವಿದ್ಯಾವಂತರು ಇದ್ದು, ಈಗಿನ ಜನಾಂಗ ಎಲ್ಲರೂ ವಿದ್ಯಾವಂತರು, ಜೊತೆಗೆ ಕೆಲ ಕಡೆ ಕೆಲಸದಲ್ಲಿಯೂ ಇದ್ದಾರೆ.
ಈ ಪ್ರದೇಶಕ್ಕೆ ಹಿಂದಿನ ಕಾಲದಲ್ಲಿ ಕಾಲುದಾರಿಯಲ್ಲಿ ಸಂಚರಿಸುತ್ತಿದ್ದ ಈ ಜನಾಂಗ ನಂತರದ ಕಾಲಘಟ್ಟದಲ್ಲಿ ಸರ್ಕಾರದ ವತಿಯಿಂದ ರಸ್ತೆ ನಿರ್ಮಾಣವಾಯಿತು, ಜೊತೆಗೆ ಅವರ ಆ ಪ್ರದೇಶದಲ್ಲಿ ಒಂದು ಸಮುದಾಯ ಭವನವೂ ತಲೆ ಎತ್ತಿ ನಿಂತಿತು. ಈ ಸಮುದಾಯ ಭವನವು ಇವರಿಗೆ ಪಡಿತರ ವಿತರಿಸಲು, ಮತದಾನ ಮಾಡಲು ಮುಂತಾದವುಗಳಿಗೆಲ್ಲ ಉಪಯುಕ್ತವಾಗಿ ಪೇಟೆಯ ಸಂಪರ್ಕವು ಅಷ್ಟಕ್ಕಷ್ಟೇ. ತಾವು ಬೆಳೆದ ಬೆಳೆಗಳನ್ನು ಕಕ್ಕಿಂಜೆ ಪೇಟೆಯಲ್ಲಿ ಮಾರಾಟ ನಡೆಸುತ್ತಾರೆ.
ಅವರ ಜನಾಂಗದಲ್ಲೇ ಒಂದೆರಡು ಜೀಪ್, ಕೆಲವು ಬೈಕ್ ಗಳಿರುವುದರಿಂದ ಪೇಟೆಗೆ ಬರಲು ಹೋಗಲು ಅವುಗಳನ್ನೇ ಅವಲಂಬಿಸಿದ್ದು, ಒಂದಿಷ್ಟು ಜನ ಮಾತ್ರ ಬಂದು, ಯಾರ ಸಂಪರ್ಕಕ್ಕೂ ಹೆಚ್ಚಾಗಿ ಸಿಗದೇ ಕೆಲಸ ಮುಗಿಸಿಕೊಂಡು ಮರಳುತ್ತಾರೆ ಎಂಬುವುದು ಆ ಆದಿವಾಸಿಗಳು ಹಾಗೂ ಅಲ್ಲಿನ ಅಧಿಕಾರಿಗಳು ಹೇಳುವ ಮಾತು. ತುರ್ತಾಗಿ ಆಸ್ಪತ್ರೆಯ ಅವಶ್ಯಕತೆ ಇದ್ದರೆ ನೆರಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡುತ್ತಾರೆ. ಪೂರ್ವಜರ ಕಾಲದಲ್ಲಿ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದ ಈ ಜನಾಂಗ ನಂತರದಲ್ಲಿ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳಾದ ವಿದ್ಯುತ್, ನೀರು, ರಸ್ತೆ, ಪಡಿತರ ಪಡೆದುಕೊಳ್ಳುವ ಮಟ್ಟಿಗೆ ಇಂದು ಬೆಳೆದಿದ್ದಾರೆ, ಆದರೂ ಇವರ್ಯಾರೂ ಪೇಟೆಯ ಜನರ ಸಂಪರ್ಕಕ್ಕೆ ಹೆಚ್ಚಾಗಿ ಸಿಗುವುದು ಕಡಿಮೆ.ಇವರಿದ್ದ ಪ್ರದೇಶಕ್ಕೆ ಎಲ್ಲವೂ ತಲುಪುವಾಗ ಅನಾವಶ್ಯಕ ಪೇಟೆಯ ಸಂಪರ್ಕದಿಂದ ದೂರ ಉಳಿದಿರುವುದು ಗಮನಾರ್ಹ ಸಂಗತಿ.
ಇದೆಲ್ಲಾ ಕಾರಣದಿಂದಾಗಿ ಮೊದಲನೇ ಅಲೆಯಲ್ಲಿ ವಿಶ್ವವನ್ನೇ ನಡುಗಿಸಿದ, ಹಾಗೂ ಎರಡನೇ ಅಲೆಯಲ್ಲಿ ರಾಜ್ಯದ ಜನತೆಯನ್ನು ಮನೆಯಲ್ಲೇ ಲಾಕ್ ಮಾಡಿದ ಮಹಾಮಾರಿ ಕೊರೋನ ಇವರಿರುವ ಈ ಪ್ರದೇಶಕ್ಕೆ ಕಾಲಿಡಲು ಅವಕಾಶವಂಚಿತವಾಗಿ, ಚಡಪಡಿಸುತ್ತಿದೆ.
ರಾಜ್ಯಕ್ಕೇ ಮಾದರಿಯಾದ ಈ ಗ್ರಾಮ ಇನ್ನು ಮುಂದೆಯೂ ಯಾವುದೇ ಸೋಂಕುಗಳ ಕಣ್ಣಿಗೆ ಬೀಳದಿರಲಿ,ಆದಿವಾಸಿಗಳ ಪ್ರದೇಶ ಇನ್ನೂ ಹೆಚ್ಚಿನ ಅಭಿವೃದ್ಧಿಯತ್ತ ಸಾಗಲಿ ಎಂಬುವುದೇ ಆಶಯ.