ಬೆಳ್ತಂಗಡಿ | ಕೊರೋನಾ ಗೆದ್ದು ಬೀಗಿದ 13 ಮಂದಿಯ ಕೂಡು ಕುಟುಂಬ

ಕೊರೋನಾವನ್ನು ಗೆಲ್ಲುವುದು ಸದ್ಯದ ಕಾಲಘಟ್ಟದಲ್ಲಿ ಸಾವಿನ ಜೊತೆ ಹೋರಾಡಿ ಗೆದ್ದ ರೀತಿ ಅಂತ ಬಣ್ಣಿಸಲಾಗಿದೆ. ಸಾವು- ನೋವು, ದುಃಖ ದುಮ್ಮಾನ ಗಳು ಜಗತ್ತಿನಾದ್ಯಂತ ಆವರಿಸಿ, ಜನರನ್ನು ಸಾಕಷ್ಟು ಹೆದರಿಸಿದೆ. ಇಂತಹಾ ಕೊರೋನಾವನ್ನು ಕೂಡಾ ನಮ್ಮಲ್ಲಿರುವ ಆತ್ಮವಿಶ್ವಾಸ ಎಂಬ ಏಕಮಾತ್ರ ಅಸ್ತ್ರದಿಂದ ಮಣಿಸಬಹುದೆಂಬುವುದನ್ನು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುಟುಂಬವೊಂದು ಮಾಡಿ ತೋರಿಸಿದೆ.

 

ಬಹುಶಃ ಒಬ್ಬೊಬ್ಬರಿಗೆ ಸೋಂಕು ತಗುಲಿದ್ದರೆ ಅವರು ಭಯ ಪಡುತ್ತಿದ್ದರೇನೋ. ಆದರೆ ಅದೃಷ್ಟಕ್ಕ ದುರದೃಷ್ಟಕ್ಕ ಗೊತ್ತಿಲ್ಲ, ಮನೆಯ ಎಲ್ಲಾ 13 ಸದಸ್ಯರಿಗೆ, ಹಿರಿ ಕಿರಿಯರೆನ್ನದೆ
ಸೋಂಕು ಹರಡಿದೆ. ಬಹುಶಃ ಕುಟುಂಬದ ಎಲ್ಲರಿಗೂ ಸೋಂಕು ಬಂದಾಗ, ಅದೇ ಒಂದು ಥರಾ ಆತ್ಮವಿಶ್ವಾಸ ಮೂಡಿಸಿದೆ. ನಾನೊಬ್ಬನೆ ಅಲ್ಲವಲ್ಲ, ಎಲ್ಲರೂ ಇದ್ದೇವಲ್ಲ ಎಂಬ ಫ್ಯಾಕ್ಟರ್ ಆತ್ಮವಿಶ್ವಾಸವನ್ನು ನೂರ್ಮಡಿ ಹೆಚ್ಚಿಸಿದೆ. ಸೋಂಕಿಗೆ ಈಡಾದ ಒಟ್ಟು13 ಮಂದಿಯಿದ್ದ ಕೂಡು ಕುಟುಂಬ ಆತ್ಮವಿಶ್ವಾಸದಿಂದಲೇ ಕೊರೋನಾವನ್ನು ಗೆದ್ದಿದ್ದಾರೆ. ಇದೀಗ ಗುಂಪಲ್ಲಿ ಕೊರೋನ ಗೆದ್ದ ನಂತರ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ !!

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಂಗಾಡಿಯ 13 ಮಂದಿಯ ಕೂಡು ಕುಟುಂಬ ಮಾರಕ ಕೊರೋನ ಸೋಂಕಿಗೆ ತುತ್ತಾಗಿದ್ದರು. ಬಂಗಾಡಿಯ ಶಿವಪ್ಪ ಪೈ ಯವರ 13 ಮಂದಿ ಇದ್ದ ಕುಟುಂಬ ಕೊರೋನಾ ಸೋಂಕಿಗೆ ಅಕ್ಷರಶಃ ತತ್ತರಿಸಿ ಹೋಗಿದ್ದರು. ಮೊದಲಿಗೆ ಮನೆಯ ಎಲ್ಲಾ ಸದಸ್ಯರಿಗೆ ಕೊರೋನಾ ಬಂದಾಗ ಏನು ಮಾಡೋದು ಎಂಬ ಭಯ ಎಲ್ಲರಲ್ಲೂ ಇತ್ತು.

ಆದರೆ 13 ಮಂದಿಯ ಒಗ್ಗಟ್ಟು ಮತ್ತು ಆತ್ಮವಿಶ್ವಾಸದಿಂದ ಪೈ ಕುಟುಂಬ ಸೋಂಕು ಮುಕ್ತವಾಗಿದೆ. ಶಿವಪ್ಪ ಪೈ ಯವರ ಕುಟುಂಬ ಹಸುಗೂಸಿನಿಂದ ವೃದ್ಧರ ತನಕ ಇದ್ದು ಸೋಂಕಿನ ವಿರುದ್ಧ ಎಲ್ಲರೂ ಜೊತೆಯಾಗಿ ಮಣಿಸಿದ್ದಾರೆ.

ಕಳೆದ ಎಪ್ರಿಲ್ 28 ರಂದು ಶಿವಪ್ಪ ಪೈಯವರ ಮನೆಯಲ್ಲಿ ದೈವಾರಾಧನೆಯ ಕಾರ್ಯಕ್ರಮ ನಡೆದಿದ್ದು, ಈ ಕಾರ್ಯಕ್ರಮಕ್ಕೆ ಮುಂಬೈ ನಿಂದಲೂ ಬಂಧುಗಳು ಆಗಮಿಸಿದ್ದರು. ಮುಂಬೈ ನಿಂದ ಬಂದ ಸಂಬಂಧಿಕರೋರ್ವ ಮಹಿಳೆಯಲ್ಲಿ ಸೋಂಕು ಲಕ್ಷಣಗಳು ಕಾಣಿಸಿಕೊಂಡಿತ್ತು. ಆನಂತರ ಒಬ್ಬೊಬ್ಬರಂತೆ ಹದಿಮೂರು ಮಂದಿಗೂ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಕುಟುಂಬದ ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರು ಮಂಗಳೂರಿನ ಖಾಸಗಿ ಆಸ್ಪತ್ರೆ ಮತ್ತು ಬೆಳ್ತಂಗಡಿಯ ಸರ್ಕಾರಿ ಆಸ್ಪತ್ರೆಗೆ ದಾಖಲಾದರೆ ಉಳಿದ 9 ಮಂದಿ ಮನೆಯಲ್ಲೇ ಐಸೋಲೇಷನ್ ಗೆ ಒಳಗಾಗಿದ್ದಾರೆ.

ಮನೆಯಲ್ಲಿ ಸಣ್ಣ ಮಕ್ಕಳು ಕೂಡಾ ಇರೋದ್ರಿಂದ ಆರಂಭದಲ್ಲಿ ಕುಟುಂಬ ಸದಸ್ಯರಿಗೆ ಭಯವಾದರೂ ಆನಂತರ ಎಲ್ಲರೂ ಒಂದು ನಿರ್ಧಾರ ಕೈಗೊಂಡರು. ಎಲ್ಲರೂ ಪ್ರತ್ಯೇಕ ಪ್ರತ್ಯೇಕ ವಾಗಿ ಇದ್ದು ಅಂತರ ಕಾಯ್ದುಕೊಂಡರು. ಮನೆಯಲ್ಲಿ ದಿನಸಿ ವಸ್ತುಗಳು ಮೊದಲೇ ಶೇಖರಣೆಯಾಗಿದ್ದರಿಂದ, ದಿನಕ್ಕೊಬ್ಬರಂತೆ ಆಹಾರ ತಯಾರಿಸುವ ಕಾರ್ಯ ಕೈಗೊಂಡಿದ್ದಾರೆ. ಕುಟುಂಬ ಸದಸ್ಯರೆಲ್ಲರೂ ವೈದ್ಯರ ಸಲಹೆಯನ್ನು ಚಾಚೂ ತಪ್ಪದೆ ಪಾಲಿಸಿದ್ದಾರೆ. ಮನೆಮದ್ದು ಕಷಾಯವನ್ನು ಆಗಾಗ್ಗೆ ತೆಗೆದುಕೊಂಡಿದ್ದಾರೆ. ಬೆಳಗ್ಗೆ ಬಿಸಿಲಿಗೆ ಸ್ವಲ್ಪ ಹೊತ್ತು ಮನೆಯಂಗಳದಲ್ಲೇ ಮೈ ಯೊಡ್ಡಿ ಆರೋಗ್ಯ ಸಮತೋಲನವನ್ನು ಕಾಪಾಡಿಕೊಂಡಿದ್ದಾರೆ.

ಈದೀಗ 13 ಮಂದಿಯ ನೆಗೆಟಿವ್ ಹೋಮ್ ಐಸೋಲೇಷನ್ ಕೂಡಾ ಮುಗಿದಿದ್ದು, ಕೊರೋನಾ ಸೋಂಕಿನ ವಿರುದ್ಧ ಜಯಿಸಿದ ಸಾರ್ಥಕ ಭಾವ ಮನೆಯವರಲ್ಲಿ ಮೂಡಿದೆ. ಈ ಸಂತಸವನ್ನು ಮನೆಮಂದಿ ಕೇಕ್ ಕಟ್ ಮಾಡುವ ಮೂಲಕ ಆಚರಿಸಿಕೊಂಡಿದ್ದಾರೆ. ಕೊರೋನಾ ಸೋಂಕಿನ ಬಗ್ಗೆ ಭಯ ಬೇಡ ಆದರೆ ಜಾಗೃತವಿರಲಿ. ಕೊರೋನಾ ವಿರುದ್ಧದ ಹೋರಾಟಕ್ಕೆ ಆತ್ಮ ವಿಶ್ವಾಸವೇ ಪ್ರಬಲ ಅಸ್ತ್ರ ಅಂತಾ ಜನರಿಗೆ ಕಿವಿಮಾತು ಹೇಳಿದ್ದಾರೆ.

Leave A Reply

Your email address will not be published.