ವಿಟ್ಲ | ಮನೆ ನಿರ್ಮಾಣ ವಿಚಾರದಲ್ಲಿ ಎರಡು ಹಿಂದೂ ಸಂಘಟನೆಗಳ ನಡುವೆ ಪರಸ್ಪರ ಹಲ್ಲೆ, ದೂರು ದಾಖಲು

ಮನೆ ನಿರ್ಮಿಸಿ ಕೊಡುತ್ತಿರುವ ವಿಚಾರವಾಗಿ ವಿಟ್ಲದ ಪೆರುವಾಯಿಯಲ್ಲಿ ಹಿಂದು ಸಂಘಟನೆಗಳ ಕಾರ್ಯಕರ್ತರ ನಡುವೆ ವೈಮನಸ್ಸು ಉಂಟಾಗಿ ಪರಸ್ಪರ ಹಲ್ಲೆ ನಡೆದಿದೆ ಎಂದು ಆರೋಪಿಸಿ ಎರಡು ತಂಡಗಳ ಸದಸ್ಯರು ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಹಾಗೂ ಆಸ್ಪತ್ರೆಯಲ್ಲಿ ದಾಖಲಾದ ಘಟನೆ ಮೇ 31 ರಂದು ನಡೆದಿದೆ.

ಒಂದು ತಂಡದ ಪೆರುವಾಯಿಯ ಯತೀಶ್ ಮತ್ತು ಕಿರಣ್ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ದೂರು ನೀಡಿದರೆ, ಮತ್ತೊಂದು ತಂಡದ ಮುಳಿಯ ನಿವಾಸಿ ರಾಜೇಶ್ ಪುತ್ತೂರಿನ ಇನ್ನೊಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ ದೂರು ನೀಡಿದ್ದಾರೆ. ವಿಟ್ಲ ಠಾಣೆ ಪೊಲೀಸರು ಎರಡು ತಂಡಗಳು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಒಂದು ತಂಡದ ಪೆರುವಾಯಿ ಅಶ್ವಥನಗರ ನಿವಾಸಿ ಯತೀಶ್ ರವರು ನೀಡಿದ ದೂರಿನಲ್ಲಿ ” ಪೆರುವಾಯಿ ಗ್ರಾಮದ ಪೆರುವಾಯಿ ಜಂಕ್ಷನ್ ಬಳಿ ಯತೀಶ್ ಮತ್ತು ಕಿರಣ್ ಕುಮಾರ್ ರವರಿದ್ದಾಗ ಚೇತನ್ ರಾಜೇಶ್, ರಾಕೆಶ್, ನಿಶಾಂತ್, ಮೆಘನಾಥ ರವರಿದ್ದ ಮತ್ತೊಂದು ತಂಡವೂ ಅಲ್ಲಿಗೆ ಆಗಮಿಸಿದೆ. ಅದರಲ್ಲಿ ಚೇತನ್ ಎಂಬಾತ ಯತೀಶ ಮತ್ತು ಕಿರಣ್ ರವರನ್ನು ತಡೆದು ನಿಲ್ಲಿಸಿ ಯತೀಶ್ ಎಂಬಾತನ ಎಡ ಕಣ್ಣಿನ ಬಳಿ ಹೊಡೆದಿದ್ದಾನೆ ಎಂದು ದೂರಲಾಗಿದೆ. ಈ ಸಂದರ್ಭ ಗಲಾಟೆ ಬಿಡಿಸಲು ಬಂದ ಕಿರಣ್‌ಕುಮಾರ್ ರಿಗೂ ಮತ್ತು ಯತೀಶ್ ಗೆ ಆರೋಪಿಗಳಾದ ಮೋಹನ್ ,ರಾಜೇಶ್, ಚೇತನ್, ರಾಕೆಶ್, ನಿಶಾಂತ ಮತ್ತು ಮೇಘನಾಥರವರು ಕೈಯಿಂದ ಹಲ್ಲೆ ನಡೆಸಿದ್ದಾರೆ ” ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಗಲಾಟೆ ನಡೆಯುವುತ್ತಿರುವುದನ್ನು ನೋಡಿದ ಸ್ಥಳೀಯರು ಬಂದು ಗಲಾಟೆ ಬಿಡಿಸಿದಾಗ ಆರೋಪಿಗಳೆಲ್ಲರೂ ಯತೀಶ್ ಹಾಗೂ ಕಿರಣ್ ಅವರ ಬಳಿ “ನಾರಾಯಣ ಆಚಾರ್ಯ ರವರ ಮನೆ ನಿರ್ಮಾಣದ ವಿಚಾರಕ್ಕೆ ಬಂದರೆ ನಿಮ್ಮನ್ನು ಕೊಲ್ಲದೆ ಬಿಡುವುದಿಲ್ಲ” ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ.

ಇನ್ನೊಂದು ತಂಡದ ಮುಳಿಯ ನಿವಾಸಿ ರಾಜೇಶ್ ನೀಡಿದ ದೂರಿನಲ್ಲಿ ಯತೀಶ್ ಮತ್ತು ಇತರರನ್ನು ಆರೋಪಿಗಳು ಎಂದು ಹೆಸರಿಸಲಾಗಿದೆ. ಪೆರುವಾಯಿ ಗ್ರಾಮದ ಪೆರುವಾಯಿ ಜಂಕ್ಷನ್‌ನಲ್ಲಿ ರಾಜೇಶ್ ಇದ್ದ ಸಮಯ ಇನ್ನೊಂದು ತಂಡದ ಮೋಕ್ಷಿತ್, ಯತೀಶ್, ವಿನಿ ಮತ್ತು ಕಿರಣ್ ಎಂಬವರು ಅಲ್ಲಿಗೆ ಆಗಮಿಸಿದ್ದಾರೆ. ಆ ತಂಡವೂ ರಾಜೇಶ್ ಅವರನ್ನು ತಡೆದು ನಿಲ್ಲಿಸಿ ಪರಿಶಿಷ್ಟ ಜಾತಿಯವರಿಗೆ ಮನೆಯನ್ನು ಮುಸ್ಲಿಮರು ಕಟ್ಟಿ ಕೊಟ್ಟದಕ್ಕೆ ನೀನು ಸಪೋರ್ಟ್ ಮಾಡುತ್ತಿಯಾ ಎಂದು ಹೇಳಿ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಬಳಿಕ ಅವರ ಪೈಕಿ ಮೋಕ್ಷಿತ್ ಎಂಬಾತ ಕೈಯಿಂದ ರಾಜೇಶ್ ಅವರ ಬೆನ್ನಿಗೆ ಹೊಡೆದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅಲ್ಲದೇ ಆ ತಂಡದ ಯತೀಶ್,ವಿನಿತ್, ಕಿರಣ್‌ರವರು ನಿನಗೆ ನಮ್ಮನ್ನು ಎದುರಿಸಲು ಸಾಧ್ಯವೇ ಎಂದು ರಾಜೇಶ್ ನನ್ನು ಪ್ರಶ್ನಿಸಿ ಬೆನ್ನಿಗೆ ಹೊಡೆದು, ಕಾಲಿನಿಂದ ಕಾಲಿಗೆ ತುಳಿದು, ದೂಡಿ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ . ಈ ಸಂದರ್ಭ ರಾಜೇಶ್ ಬೊಬ್ಬೆ ಹೊಡೆದಾಗ ಆಸುಪಾಸಿನವರು ಬಂದು ಜಗಳ ಬಿಡಿಸಿದ್ದಾರೆ. ಆಗ ಆರೋಪಿಗಳು ಮುಂದಕ್ಕೆ ನಮ್ಮ ವಿಷಯಕ್ಕೆ ಬಂದರೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪೆರುವಾಯಿ ಗ್ರಾಮದ ಅಶ್ವಥನಗರ ಎಂಬಲ್ಲಿ ನಾರಾಯಣ ಆಚಾರ್ಯ ಎಂಬವರಿಗೆ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದವರು ಹಣ ಸಂಗ್ರಹಿಸಿ ಆಶ್ರಯ ಕಾಲೋನಿಯಲ್ಲಿ ಮನೆ ನಿರ್ಮಿಸಿತ್ತಿದ್ದೂ ಇದರಿಂದ ಅವರ ಪಕ್ಕದ ಮನೆಯ ಮೋಹನ್‌ಎಂಬವರ ಮನೆಗೆ ಹೋಗುವ ರಸ್ತೆಯ ವಿಚಾರದಲ್ಲಿ ಸಮಸ್ಯೆ ಉದ್ಭವಿಸಿದ ಹಿನ್ನಲೆಯಲ್ಲಿ ಈ ಹಲ್ಲೆ ನಡೆದಿದೆ ಎಂದು ತಿಳಿದು ಬಂದಿದೆ.

ಸದ್ಯಕ್ಕೆ ಎರಡು ತಂಡಗಳು ಪರಸ್ಪರ ದೂರು ನೀಡಿದ್ದು, ಪೊಲೀಸರು ಈ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

Leave A Reply

Your email address will not be published.