ವೆನ್ಲಾಕ್ ಆಸ್ಪತ್ರೆಗೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ
ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಕೈಗೆತ್ತಿಕೊಂಡಿರುವ ಮೂಲ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳನ್ನು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಗುರುವಾರ ವೀಕ್ಷಿಸಿದರು.
ಬಳಿಕ ಮಾತನಾಡಿದ ಅವರು ಈಗಾಗಲೇ ಜಿಲ್ಲೆಯಲ್ಲಿ ಕೊರೋನ ಸೋಂಕು ತಡೆಗೆ ಎಲ್ಲಾ ರೀತಿಯ ಕ್ರಮವನ್ನು ವಹಿಸಲಾಗಿದೆ. ಮೂರನೇ ಅಲೆ ಬಂದರೂ ಸಮಸ್ಯೆಯಾಗದಂತೆ ಎಲ್ಲಾ ಕೋವಿಡ್ ಸೋಂಕಿತರ ಆರೈಕೆಗಾಗಿ ಜಿಲ್ಲೆಯಲ್ಲಿನ ಆರೋಗ್ಯ ಮೂಲ ಸೌಕರ್ಯವನ್ನು ಹೆಚ್ಚಿಸಿ, ಉತ್ತಮ ಗುಣ ಮಟ್ಟದ ಚಿಕಿತ್ಸೆಯನ್ನು ಒದಗಿಸಲು ಜಿಲ್ಲಾಡಳಿತವು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.
ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಹೆಚ್ಚಿನ ಜನರು ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ನಿರೀಕ್ಷಿಸಿ ಬರುತ್ತಿರುವ ಕಾರಣ ವೆನ್ಲಾಕ್ ಆಸ್ಪತ್ರೆಯಲ್ಲಿ ಕೋವಿಡ್-19 ಚಿಕಿತ್ಸೆಗಾಗಿ ಗುರುತಿಸಲಾದ ನ್ಯೂ ಮೆಡಿಸಿನ್ ಬ್ಲಾಕ್ನಲ್ಲಿ ಈಗಾಗಲೇ 30 ಬೆಡ್ ಹಾಗೂ 50 ಬೆಡ್ಗಳ ಎಚ್ಡಿಯು ಕಾರ್ಯನಿರ್ವಹಿಸುತ್ತಿದೆ. ಹೆಚ್ಚುವರಿಯಾಗಿ ಕೋವಿಡ್ ಸೋಂಕಿತರಿಗೆ ಉತ್ತಮ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ಕಲ್ಪಿಸಲು ಐಸಿಯು ಬೆಡ್ ಹಾಗೂ ವೆಂಟಿಲೇಟರ್ಗಳ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಸುಸಜ್ಜಿತವಾದ 32 ವೆಂಟಿಲೇಟರ್ ಸಹಿತ 40 ಐಸಿಯು ಸೌಲಭ್ಯವುಳ್ಳ ಬೆಡ್ಗಳನ್ನು ಅಳವಡಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಮುಂದಿನ 10 ದಿನಗಳಲ್ಲಿ ಅವು ಪೂರ್ಣಗೊಳ್ಳಲಿದೆ ಎಂದರು.
ಈ ಸಂದರ್ಭ ಜಿಲ್ಲಾ ಸರ್ಜನ್ ಸದಾಶಿವ ಶಾನ್ಭೋಗ್, ಆರೋಗ್ಯ ಇಲಾಖೆಯ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರ ಪುಟ್ಟವೀರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.