ಲವ್ ಜಿಹಾದ್ ವಿರುದ್ಧ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿದ್ದ ಉತ್ತರ ಪ್ರದೇಶದಲ್ಲಿ ಮುಸ್ಲಿಂ ಯುವತಿಯೋರ್ವಳು ಹಿಂದೂ ಧರ್ಮಕ್ಕೆ ಮತಾಂತರವಾಗಿ ಹಿಂದೂ ಯುವಕನನ್ನು ವಿವಾಹವಾಗಿದ್ದು, ರಕ್ಷಣೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾಳೆ.
19 ವರ್ಷದ ಮುಸ್ಲಿಂ ಯುವತಿ ಮತ್ತು ಆಕೆಯ ಹಿಂದೂ ಪ್ರಿಯಕರ ಇತ್ತೀಚೆಗೆ ಹಿಂದೂ ಸಂಪ್ರದಾಯದಂತೆ ಮೀರತ್‌ನ ಮಾಲಿಯಾನ ಆರ್ಯ ಸಮಾಜ ಮಂದಿರದಲ್ಲಿ ವಿವಾಹವಾಗಿದ್ದರು. ಇದಕ್ಕೆ ಯುವತಿಯ ಕುಟುಂಬಸ್ಥರಿಂದ ವ್ಯಾಪಕವಾದ ವಿರೋಧವಿತ್ತು. ಇದರಿಂದ ರಕ್ಷಣೆ ಕೋರಿ ನವ ದಂಪತಿಗಳಿಬ್ಬರು ಕೋರ್ಟ್ ಮೆಟ್ಟಿಲೇರಿದ್ದಾರೆ. ಇಬ್ಬರಿಗೂ ರಕ್ಷಣೆ ನೀಡುವಂತೆ ಅಲಹಬಾದ್ ಹೈಕೋರ್ಟ್ ಮೊರೆಹೋಗಿದ್ದಾರೆ ಹಾಗೂ ಇದಕ್ಕೆ ಕೋರ್ಟ್ ಒಪ್ಪಿಗೆ ಸೂಚಿಸಿದೆ.
ಇವರಿಬ್ಬರ ವಿವಾಹ ಇನ್ನೂ ಕೂಡಾ ನೋಂದಾವಣೆ ಮಾಡಿಲ್ಲ. ಈ ನಡುವೆ ಆಕೆಯ ತಂದೆ ಸೇರಿದಂತೆ, ಕುಟುಂಬಸ್ಥರು, ಸ್ಥಳೀಯರು ಜೀವ ಬೆದರಿಕೆ ಹಾಕಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತರಲಾಗಿತ್ತು.
ಅಲಹಬಾದ್ ಹೈಕೋರ್ಟ್ ನ ನ್ಯಾಯಮೂರ್ತಿ ಜೆ.ಜೆ.ಮುನೀರ್ ಅವರ ಪೀಠ, ಇಬ್ಬರಿಗೆ ಅಗತ್ಯವಾದ ರಕ್ಷಣೆ ಒದಗಿಸಬೇಕು. ಹಾಗೆಯೇ ಆಕೆಗೆ ಮತ್ತು ಆಕೆಯ ಪತಿಗೆ ಪೊಲೀಸರಿಂದ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಮೀರತ್‌ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.