ಮಂಗಳೂರು ಬಂದರಿನಿಂದ 20 ನಾಟಿಕಲ್ ಮೈಲಿ ದೂರ ಅರಬ್ಬಿ ಸಮುದ್ರದಲ್ಲಿ ಇಂಜಿನ್ ಕೆಟ್ಟು ಅಪಾಯಕ್ಕೆ ಸಿಲುಕಿದ್ದ ತಮಿಳುನಾಡು ಮೂಲದ ಯಾಂತ್ರೀಕೃತ ದೋಣಿ ಹಾಗೂ ಅದರಲ್ಲಿದ್ದ 10 ಮೀನುಗಾರರನ್ನು ಕರಾವಳಿ ರಕ್ಷಣಾ ಪಡೆಯಿಂದ ರಕ್ಷಿಸಲಾಗಿದೆ.
ರಕ್ಷಿಸಲ್ಪಟ್ಟ ಮೀನುಗಾರರಲ್ಲಿ 7 ಮಂದಿ ತಮಿಳುನಾಡಿನವರಾಗಿದ್ದು, 3 ಮಂದಿ ಕೇರಳ ಮೂಲದವರು. ಮೀನುಗಾರರನ್ನು ಸ್ಟೀಫನ್ (45), ನಪೋಲಿಯನ್ (60), ಪ್ರಭು (38), ಸಾಜಿ (41), ರಾಜಿ (38), ಸಗರಾಜಿ (50), ಜಾರ್ಜ್ ಬುಶ್ (50), ಕ್ರಿಸ್ಪಿನ್ (38), ಸಾಜನ್ (26), ಡೊನಿಯೊ (38) ಎಂದು ಗುರುತಿಸಲಾಗಿದೆ.
ನವ ಮಂಗಳೂರು ಬಂದರಿನಿಂದ 20 ನಾಟಿಕಲ್ ಮೈಲು ದೂರದ ಅರಬ್ಬಿ ಸಮುದ್ರದಲ್ಲಿ ‘ಲಾರ್ಡ್ ಆಫ್ ದಿ ಓಷನ್’ ಎಂಬ ಮೀನುಗಾರಿಕಾ ದೋಣಿಯು ಅಪಾಯಕ್ಕೆ ಸಿಲುಕಿದ್ದು ರಕ್ಷಣೆ ಕೋರಿ ಸಂದೇಶವನ್ನು ವಿಎಚ್‌ಎಫ್ ಸಂವಹನ ಉಪಕರಣ ಮೂಲಕ ರವಾನಿಸಿತ್ತು. ಮಂಗಳೂರಿನ ಮೆರಿಟೈಂ ರೆಸ್ಕ್ಯೂ ಕೋಆರ್ಡಿನೇಶನ್ ಸೆಂಟರ್‌ನಲ್ಲಿ ಈ ಸಂದೇಶವನ್ನು ಪಡೆಯಲಾಗಿದ್ದು, ಗಸ್ತು ನಿರತ ನೌಕೆ ಸಿ448ನ್ನು ತಕ್ಷಣವೇ ನೆರವಿಗಾಗಿ ಕಳುಹಿಸಲಾಯಿತು. ಅಲ್ಲದೆ ಮಂಗಳೂರಿನಿಂದ ಐಸಿಜಿಎಸ್ ರಾಜ್‌ದೂತ್ ನೌಕೆಯನ್ನೂ ಕಳುಹಿಸಲಾಯಿತು.
ಯಾಂತ್ರೀಕೃತ ಮೀನುಗಾರಿಕಾ ದೋಣಿಯು ಮೇ 14ರಂದು ತೌಕ್ತೆ ಚಂಡಮಾರುತದಿಂದಾಗಿ ಪೋರ್‌ಬಂದರಿನಲ್ಲಿ ಲಂಗರು ಹಾಕಿತ್ತು. ಮೇ 19ರಂದು ಪೋರಬಂದರಿನಿಂದ ಹೊರಡಲು ಸಿದ್ಧವಾಗಿದ್ದಾಗ ಇಂಜಿನ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಇಂಜಿನ್ ಸ್ಟಾರ್ಟ್ ಆಗದೆ, ಕೋಸ್ಟ್‌ಗಾರ್ಡ್‌ನ ರಾಜ್‌ದೂತ್ ನೌಕೆ ಅಲ್ಲಿಗೆ ತಲುಪುವವರೆಗೆ ಸಂಕಷ್ಟಕ್ಕೆ ಸಿಲುಕಿದ್ದ ದೋಣಿಯ ಸಹಾಯಕ್ಕೆ ತುರ್ತಾಗಿ ಸಹಕರಿಸುವಂತೆ ಆ ಜಾಗದಲ್ಲಿದ್ದ ಇನ್ನೊಂದು ಮೀನುಗಾರಿಕಾ ದೋಣಿ ಎಂಎಸ್‌ವಿ ಅಲ್ ಬದ್ರಿಯಾ ಎಂಎನ್‌ಜಿ- 471 ಗೆ ಕೋಸ್ಟ್‌ಗಾರ್ಡ್‌ನಿಂದ ಮನವಿ ಮಾಡಲಾಗಿತ್ತು.
ಆ ಬಳಿಕ ಐಸಿಜಿಎಸ್ ರಾಜ್‌ದೂತ್ ಸ್ಥಳಕ್ಕೆ ತೆರಳಿ ದೋಣಿ ಹಾಗೂ ಅದರಲ್ಲಿದ್ದ ಮೀನುಗಾರರನ್ನು ಸುರಕ್ಷಿತವಾಗಿ ಮಂಗಳೂರು ಹಳೇ ಬಂದರಿಗೆ ಕರೆ ತಂದಿದೆ. ಆ ಬಳಿಕ ಮುಂದಿನ ಕ್ರಮಕ್ಕಾಗಿ ಮೀನುಗಾರಿಕಾ ಇಲಾಖೆಗೆ ಹಸ್ತಾಂತರಿಸಲಾಗಿದೆ.