ಭಾರತದ ಬ್ಯಾಂಕ್ ಗಳಿಗೆ ಸುಮಾರು 9000 ಕೋಟಿ ರೂ. ಪಂಗನಾಮ ಹಾಕಿದ ಉದ್ಯಮಿ ಮೆಹುಲ್ ಚೋಕ್ಸಿ ದಿಢೀರ್ ನಾಪತ್ತೆ..!

ಹೊಸದಿಲ್ಲಿ: ಭಾರತದ ಬ್ಯಾಂಕುಗಳಿಗೆ ಸುಮಾರು 9000 ಕೋಟಿ ರೂಪಾಯಿ ವಂಚಿಸಿ ಭಾರತದಿಂದ ಪರಾರಿಯಾಗಿರುವ ಉದ್ಯಮಿ ಮೆಹುಲ್ ಚೋಕ್ಸಿ ಇದೀಗ ಆ್ಯಂಟಿಗುವಾ ಮತ್ತು ಬಾರ್ಬೊಡಾದಿಂದಲೂ ನಾಪತ್ತೆಯಾಗಿದ್ದಾನೆ ಎಂದು ವರದಿಯಾಗಿದೆ. ಈ ಬಗ್ಗೆ ಮೆಹುಲ್ ಚೋಕ್ಸಿ ವಕೀಲ ವಿಜಯ್ ಅಗರ್ವಾಲ್ ಅವರೇ ಖಚಿತ ಪಡಿಸಿದ್ದಾರೆ.

ವಜ್ರದ ವ್ಯಾಪಾರಿಯಾಗಿದ್ದ ಮೆಹುಲ್ ಚೋಕ್ಸಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ವಂಚಿಸಿ ಪರಾರಿಯಾಗಿದ್ದಾನೆ. ಸಿಬಿಐ ಮತ್ತು ಜಾರಿ ನಿರ್ದೇಶನಾಲಯ( ಇ.ಡಿ) ಗಳೂ ಈತನಿಗಾಗಿ ಹುಡುಕಾಟ ನಡೆಸುತ್ತಿವೆ.

ಈ ಕುರಿತಂತೆ ಸ್ಥಳೀಯ ಪೊಲೀಸರು ಕೂಡ ಚೋಕ್ಸಿ ಕಾಣೆಯಾಗಿರುವ ಕುರಿತು ದೃಢಪಡಿಸಿದ್ದು, ಚೋಕ್ಸಿಯನ್ನು ಪತ್ತೆಹಚ್ಚಲು ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ ಎಂದು ಪೊಲೀಸ್ ಆಯುಕ್ತ ಅಟ್ಲೀ ರೊಡ್ನಿ ತಿಳಿಸಿದ್ದಾರೆ.

ಕೆರಿಬಿಯನ್ ರಾಷ್ಟ್ರ ಆ್ಯಂಟಿಗುವಾದ ಪೌರತ್ವ ಪಡೆದಿರುವ ಮೆಹುಲ್ ಚೋಕ್ಸಿ ಇದೀಗ ನಾಪತ್ತೆಯಾಗಿದ್ದಾರೆ. ಆತನ ಕುಟುಂಬ ಮತ್ತು ಸ್ಥಳೀಯ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ವಕೀಲ ವಿಜಯ್ ಅಗರ್ವಾಲ್ ಹೇಳಿದ್ದಾರೆ.

ಮೆಹುಲ್ ಚೋಕ್ಸಿ ಸೋಮವಾರ ಸಂಜೆ ದ್ವೀಪದ ದಕ್ಷಿಣ ಭಾಗದಲ್ಲಿರುವ ಪ್ರಸಿದ್ಧ ರೆಸ್ಟೋರೆಂಟ್‌ನಲ್ಲಿ ಊಟಕ್ಕೆ ಹೋಗಲು ತಮ್ಮ ಮನೆಯಿಂದ ಹೊರಟಿದ್ದ. ಆದರೆ ಮತ್ತೆ ಕಾಣಿಸಲಿಲ್ಲ. ಅವರ ವಾಹನವನ್ನು ಸಂಜೆ ಜಾಲಿ ಹಾರ್ಬರ್‌ನಲ್ಲಿ ಪತ್ತೆ ಮಾಡಲಾಗಿದೆ. ಆದರೆ ಚೋಕ್ಸಿ ಕುರಿತು ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಆಂಟಿಗುವಾನ್ ಸುದ್ದಿ ವಾಹಿನಿಗಳು ವರದಿ ಮಾಡಿವೆ.

Leave A Reply

Your email address will not be published.