ಕುಡಿದ ಮತ್ತಿನಲ್ಲಿ ಬರ್ಬರ ಕೊಲೆ

ಕುಡಿದ ಮತ್ತಿನಲ್ಲಿ ಇಬ್ಬರು ಜಗಳಕ್ಕಿಳಿದು ಓರ್ವ ಹತ್ಯೆಯಾದ ಘಟನೆ ಕಾರ್ಕಳದ ಮಾಳ ಗ್ರಾಮದ ಮುಕ್ಕಾಯಿ ಎಂಬಲ್ಲಿ ರವಿವಾರ ರಾತ್ರಿ ನಡೆದಿದೆ.

 

ಮಿಯ್ಯಾರು ಗ್ರಾಮದ ಬೋರ್ಕಟ್ಟೆ ನಿವಾಸಿ ಹರೀಶ್‌ ಪೂಜಾರಿ (42) ಮೃತರು ಎಂದು ಗುರುತಿಸಲಾಗಿದ್ದು, ಗುರುವ ಎಂಬಾತ ಕೊಲೆ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ 7 ತಿಂಗಳಿನಿಂದ ಮಾಳದ ರೀತಾ ಎಂಬಾಕೆಯ ಮನೆಯಲ್ಲಿ ಹರೀಶ್‌ ಪೂಜಾರಿ ಹಾಗೂ ಗುರುವ ಒಟ್ಟಿಗೆ ಇದ್ದರು. ಇಬ್ಬರೂ ವಿವಾಹಿತರಾಗಿದ್ದರೂ ವಿವಾಹಿತ ಮಹಿಳೆ ರೀತಾಳೊಂದಿಗೆ ಜೀವನ ನಡೆಸುತ್ತಿದ್ದರು. ಹರೀಶ್‌ ವಿದ್ಯುತ್‌ ಕಂಬ ಹಾಕುವ ಕೆಲಸ ಮಾಡಿ ಕೊಂಡಿದ್ದರೆ, ರೀತಾ ಹಾಗೂ ಗುರುವ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ರವಿವಾರ ಕುಡಿದ ಮತ್ತಿನಲ್ಲಿ ಮಾತಿಗೆ ಮಾತು ಬೆಳೆದು ಗುರುವ ಮಾರಕಾಯುಧದಿಂದ ಹರೀಶ್‌ ಅವರಿಗೆ ಚುಚ್ಚಿ ಕೊಲೆ ಮಾಡಿರುವುದಾಗಿ ದೂರಲಾಗಿದೆ.

ಘಟನಾ ಸ್ಥಳಕ್ಕೆ ಕಾರ್ಕಳ ಡಿವೈಎಸ್‌ಪಿ ಭರತ್‌ ರೆಡ್ಡಿ, ವೃತ್ತ ನಿರೀಕ್ಷಕ ಸಂಪತ್‌ ಕುಮಾರ್‌, ಗ್ರಾಮಾಂತರ ಪೊಲೀಸ್‌ ಠಾಣೆ ಎಸ್‌ಐ ತೇಜಸ್ವಿ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

ಇಲ್ಲಿನ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Leave A Reply

Your email address will not be published.