ಕೋವಿಡ್ ರೋಗಿ ಸಾಯುವ ಮುನ್ನ ಆಕೆಯ ಕಿವಿಯಲ್ಲಿ ‘ಇಸ್ಲಾಂ ಪ್ರಾರ್ಥನೆ’ ಪಠಿಸಿದ ಹಿಂದೂ ವೈದ್ಯೆ!

ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಮುಸ್ಲಿಂ ಯುವತಿಯೋರ್ವಳಿಗೆ ಹಿಂದೂ ವೈದ್ಯೆಯೊಬ್ಬರು ಶಹಾದತ್ ಪಠಿಸಿದ್ದು, ಆ ಪಠನೆಯನ್ನು ಕೇಳಿದ ನಂತರ ಯುವತಿ ಶಾಂತವಾಗಿ ಕಣ್ಣುಮುಚ್ಚಿರುವ ಘಟನೆ ಕೇರಳದಲ್ಲಿ ನಡೆದಿದೆ. 

ಇಸ್ಲಾಂ ಧರ್ಮದಲ್ಲಿ ವ್ಯಕ್ತಿ ಸಾಯುವ ಮುನ್ನ ಅವರ ಕಿವಿಯಲ್ಲಿ ಶಹಾದತ್ ಪಠಿಸಲಾಗುತ್ತದೆ. ಹಾಗೆ ಪಠಿಸಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ. ಈಗ ಕೊರೋನಾ ಮಾರ್ಗಸೂಚಿ ಕಾರಣ ರೋಗಿಯ ಚಿಕಿತ್ಸೆಯುದ್ಧಕ್ಕೂ ಮತ್ತು ಸಾವಿನ ಅಂಚಿನಲ್ಲಿರುವ ರೋಗಿಯ ಸಮೀಪ ಕೂಡ ಯಾರೂ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಮನಗಂಡ ಡಾಕ್ಟರ್ ರೇಖ ಕೃಷ್ಣನ್ ಎಂಬ  ವೈದ್ಯೆಯು ಯುವತಿಯ ಕಿವಿಯಲ್ಲಿ ಶಹಾದತ್ ಪಠಿಸುವ ಮೂಲಕ ‘ನೋವು ಮತ್ತು ಸಾವಿನ’ ಸಂದರ್ಭಗಳಲ್ಲಿ ಧರ್ಮಕ್ಕೆ ಬೇರೆಯದೇ ಅರ್ಥ ಎಂದು ತೋರಿಸಿದ್ದಾಳೆ.

ಆ ಯುವತಿ ಕಳೆದೆರಡು ವಾರಗಳಿಂದ ಕೋವಿಡ್ ನ್ಯುಮೋನಿಯಾದಿಂದ ಬಳಲುತ್ತಿದ್ದಳು. ಆಕೆ ಐಸಿಯೂನಲ್ಲಿ ವೆಂಟಿಲೇಟರ್‌ ಸಹಾಯದಿಂದ ಬದುಕು ತಳ್ಳುತ್ತಿದ್ದಳು. ಅಲ್ಲಿ ಸಹಜವಾಗಿ ನಿಯಮಾವಳಿಗಳ ಅನುಸಾರವಾಗಿ ಆರೋಗ್ಯ ಯಾವುದೇ ಸಂಬಂಧಿಕರು ಐಸಿಯುಗೆ ಪ್ರವೇಶಿಸಲು ಅನುಮತಿ ನೀಡಲಾಗಿರಲಿಲ್ಲ. ಮೊನ್ನೆ ಮೇ 17 ರಂದು ರೋಗಿಯ ಪರಿಸ್ಥಿತಿ ಬಿಗಡಾಯಿಸಿದ್ದು ಅನಿವಾರ್ಯವಾಗಿ ಆಕೆಯ  ವೆಂಟಿಲೇಟರ್‌ ತೆಗೆಯಬೇಕಾಯಿತು. ಇನ್ನು ಕೊನೆಗಳಿಯಲ್ಲಿ ಯುವತಿ ಯಾವುದಕ್ಕೋ ಚಡಪಡಿಸುತ್ತಿರುವುದನ್ನು ಆ ಯುವ ವೈದ್ಯೆ ಗಮನಿಸಿದ್ದಾಳೆ.
“ಆಗ ನಾನು ಆ ರೋಗಿಯ ಕಿವಿಯಲ್ಲಿ ನಿಧಾನವಾಗಿ ಕಲಿಮಾವನ್ನು (ಲಾ ಇಲಾಹ ಇಲ್ಲಲ್ಲಾ, ಮುಹಮ್ಮದೂರ್ ರಸುಲುಲ್ಲಾ) ಎಂದು ನನಗೆ ತಿಳಿದಷ್ಟು ಸುಶ್ರಾವ್ಯವಾಗಿ ಪಠಿಸಿದೆ. ಆಗ ಆ ಯುವತಿ ಅವಳು ಕೆಲ ಸೆಕೆಂಡ್ ಗಳ ಕಾಲ ಆಳವಾಗಿ ಉಸಿರೆಳೆದುಕೊಂಡು ನಂತರ ಜೀವ ಬಿಟ್ಟಳು” ಎಂದು ಆ ವೈದ್ಯೆ ಆ ನಂತರ ತಿಳಿಸಿದ್ದಾರೆ. 

” ನಾನು ಹುಟ್ಟಿ ಬೆಳೆದದ್ದು ದುಬೈನಲ್ಲಿ. ಅಲ್ಲಿ ಮುಸ್ಲಿಂರು ಅನುಸರಿಸುವ ಪದ್ಧತಿಗಳು ಮತ್ತು ಆಚರಣೆಗಳು ನನಗೆ ತಿಳಿದಿವೆ. ನಾನು ಕೊಲ್ಲಿಯಲ್ಲಿದ್ದಾಗ (ಮುಸ್ಲಿಂ ರಾಷ್ಟ್ರ) ಮುಸ್ಲಿಮರ ಅಭ್ಯಾಸಗಳ ಬಗ್ಗೆ ನನಗೆ ಸ್ವಲ್ಪ ಅರಿತಿದ್ದೆ. ನನ್ನ ನಂಬಿಕೆ ಬೇರೆ, ಆಕೆಯ ನಂಬಿಕೆ ಬೇರೆ. ಆದರೆ ನಾನು ಪಠ್ಯ ಪಡಿಸಿದ್ದು ನಂಬಿಕೆಯ ಆಧಾರದ ಮೇಲೆ ಅಲ್ಲ. ಅದನ್ನು ನಾನು ಧಾರ್ಮಿಕ ಸೂಚಕ ಎಂದು  ಭಾವಿಸುವುದಿಲ್ಲ; ಇದು ಮಾನವೀಯ ಕ್ರಿಯೆ ಅಷ್ಟೇ ” ಎಂದು ರೇಖಾ ಹೇಳಿದ್ದಾರೆ.  

ನಾವು ರೋಗಿಗಳಿಗೆ ಸಹಾಯ ಮಾಡಲು ಎಲ್ಲವನ್ನು ಮಾಡಬೇಕು ಎಂದು ಹೇಳುವ ಮೂಲಕ ವೈದ್ಯೆ ದೇಶಕ್ಕೆ ಹೊಸ ಸಂದೇಶವನ್ನು ನೀಡಿದ್ದಾರೆ. 

ಕೋವಿಡ್ -19 ರ ಸಮಯದಲ್ಲಿನ ಈ ಅಸಾಧಾರಣ ಅನುಭವಗಳನ್ನು ತಮ್ಮ ಸಹೋದ್ಯೋಗಿಗಳೊಂದಿಗೆ ಮೊದಲು ರೇಖಾ ಅವರು ಹಂಚಿಕೊಂಡಿದ್ದರು. ಇದರ ನಂತರ ಈ ಸುದ್ದಿ ಸಾಮಾಜಿಕ ಮಾಧ್ಯಮ ಡೆಸ್ಕುಗಳಿಗೆ ಸಾಗಿ ಇದೀಗ ವೈರಲ್ ಆಗಿದೆ. ಇನ್ನು ವೈದ್ಯೆಯ ಅಸಾಧಾರಣ ಕೆಲಸವನ್ನು ಮುಸ್ಲಿಂ ಮೌಲ್ವಿಗಳು ಅಭಿನಂದಿಸಿದ್ದಾರೆ. ಇದನ್ನು ಸಾಮಾನ್ಯವಾಗಿ ಸಂಬಂಧಿಕರು ಮಾಡುವ ಪದ್ಧತಿ. ಆದರೆ ಇದನ್ನು ಇನ್ನೊಂದು ಧರ್ಮದವರು ಮಾಡಿರುವುದು ಹೃದಯಸ್ಪರ್ಶಿಯಾಗಿದೆ. ಈ ಮೂಲಕ ವೈದ್ಯರು ದೇಶಕ್ಕೆ ಹೊಸ ಉದಾಹರಣೆ ನೀಡಿದ್ದಾರೆ ಎಂದು ಸುನ್ನಿ ವಿದ್ವಾಂಸ ಅಬ್ದುಲ್ ಹಮೀದ್ ಫೈಜಿ ಅಂಬಲಕ್ಕದವು ಬರೆದಿದ್ದಾರೆ.

Leave A Reply

Your email address will not be published.