ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಬರುವವರಿಗೆ ವೆಂಟಿಲೇಟರ್ ನೀಡಲ್ಲ | ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಹೇಳಿಕೆ
ಉಡುಪಿ. ಕೊರೋನಾ ರೋಗಲಕ್ಷಣಗಳು ಕಂಡು ಬಂದ ಕೂಡಲೇ ಚಿಕಿತ್ಸೆ ಪಡೆದುಕೊಳ್ಳಬೇಕು. ಜಿಲ್ಲೆಯಲ್ಲಿ ಆಕ್ಸಿಜನ್ ಬೆಡ್ ಗಳು ಸಾಕಷ್ಟು ಖಾಲಿ ಇವೆ. ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಬರುವವರಿಗೆ ವೆಂಟಿಲೇಟರ್ ನೀಡುವುದಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಅವರು ಹೇಳಿಕೆ ನೀಡಿದ್ದಾರೆ.
ಜನರು ರೋಗಲಕ್ಷಣ ಕಂಡುಬಂದರು ಅದನ್ನು ನಿರ್ಲಕ್ಷಿಸುತ್ತಿದ್ದಾರೆ. ಅವರ ನಿರ್ಲಕ್ಷಕ್ಕೆ ನಾವು ಜವಾಬ್ದಾರರಾಗಿರುವುದಿಲ್ಲ. ಕೊರೋನಾ ಆರಂಭದ ಹಂತದಲ್ಲಿ ಆಕ್ಸಿಜನ್ ಕೊಟ್ಟು ಜೀವ ಉಳಿಸಬಹುದು. ರೋಗಿಯ ಸ್ಥಿತಿ ಗಂಭೀರ ಆದರೆ ಐಸಿಯು ವೆಂಟಿಲೆಟರ್ ಗೆ ಶಿಫ್ಟ್ ಮಾಡುತ್ತೇವೆ.
ರೋಗಿಯ ಸ್ಥಿತಿ ಗಂಭೀರವಾದಾಗ ವೆಂಟಿಲೇಟರ್ ಇದೆಯಾ ಎಂದು ಫೋನ್ ಮಾಡಿ ಕೇಳಲು ಹೋಗಬೇಡಿ. ರೋಗ ಲಕ್ಷಣ ಕಂಡು ಬಂದ ಕೂಡಲೇ ಚಿಕಿತ್ಸೆ ಪಡೆದು ನಿಮ್ಮ ಆರೋಗ್ಯ ನೀವೇ ನೋಡಿಕೊಳ್ಳಿ.
ಆಕ್ಸಿಜನ್ ಬೆಡ್ ಖಾಲಿ ಇಲ್ಲ ಎಂದು ಯಾವುದೇ ಭಯ ಬೇಡ. ಉಡುಪಿಯಲ್ಲಿ ಒಟ್ಟು 950 ಬೆಡ್ ಖಾಲಿ ಇದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದರು.
ಅಂದರೆ ಕೋವಿಡ್ ಸೋಂಕು ತಗುಲಿದ ಎಲ್ಲಾ ರೋಗಿಗಳು ಮನೆಯಲ್ಲಿ ಕ್ವಾರಂತೈನ್ ಆಗದೆ, ಎಲ್ಲರೂ ಆಸ್ಪತ್ರೆಗೆ ದಾಖಲಾಗಬೇಕಾ ? ‘ ರೋಗಿಗಳು ಪಾಸಿಟಿವ್ ಬಂದ ತಕ್ಷಣ ಗಾಬರಿಯಾಗದೆ ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳಬೇಕು’ ಎಂದು ಕರ್ನಾಟಕದ ಮುಖ್ಯಮಂತ್ರಿಯವರೇ ಹೇಳಿಕೆ ನೀಡಿದ್ದರು. ಹೀಗೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದು ಒಂದು ವೇಳೆ ರೋಗಿಯ ಪರಿಸ್ಥಿತಿ ಉಲ್ಬಣಗೊಂಡರೆ ರೋಗಿಗೆ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಕೊಡುವುದಿಲ್ಲವೇ ?! ಆರೋಗ್ಯ ಸ್ಥಿತಿ ಯಾವಾಗ ಗಂಭೀರ ಆಗುತ್ತದೆ ಎಂಬುದು ಯಾರಿಗೆ ಮುಂಚಿತವಾಗಿ ಗೊತ್ತಾಗುತ್ತದೆ ?
ಸರಕಾರದ ಈ ಹಿಂದೆ ಹೇಳಿದ ನಿಲುವಿಗೂ ಉಡುಪಿ ಜಿಲ್ಲಾಧಿಕಾರಿಯ ಇವತ್ತಿನ ಹೇಳಿಕೆ ಜನರನ್ನು ಗೊಂದಲಕ್ಕೀಡು ಮಾಡುವಂತೆ ಇದೆ.ಈ ಬಗ್ಗೆ ಜಿಲ್ಲಾಧಿಕಾರಿಯವರು ಸ್ಪಷ್ಟಪಡಿಸಬೇಕು.