ಸಾಲ ಮಾಡಿ ಕೊಂಡು ಕೊಂಡ ಲಾಟರಿಗೆ ಒಂದು ಕೋಟಿ ಬಹುಮಾನ | ಸೆಕ್ಯೂರಿಟಿ ಗಾರ್ಡ್ ಗೆ ಒಲಿದ ಭಾಗ್ಯಲಕ್ಷ್ಮಿ !
ಇವತ್ತು ಮಂಗಳೂರಿನ ತೊಕ್ಕೊಟ್ಟಿನಲ್ಲೆಲ್ಲಾ ಈ ಒಂದು ಕೋಟಿ ರೂಪಾಯಿಯದ್ದೇ ಸುದ್ದಿ!!
ಅದೃಷ್ಟ ಅಂದರೆ ಇದು !
ಇಲ್ಲಿನ ಖಾಸಗಿ ಕಟ್ಟಡದಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿರೋ 65 ವರ್ಷದ ಮೊಯ್ದಿನ್ ಕುಟ್ಟಿಗೆ ಬರೋಬ್ಬರಿ 1 ಕೋಟಿ ರೂಪಾಯಿಯ ಲಾಟರಿ ಒಲಿದಿದೆ. ಈತನ ಅದೃಷ್ಟ ನೋಡಿ ಊರವರೆಲ್ಲಾ ಬೆರಗಾಗಿದ್ದಾರೆ.
ಕೇರಳ ಮೂಲದ ಮೊಯ್ದಿನ್ ಕುಟ್ಟಿ ಕೆಲಸ ಅರಸಿ ಕೆಲ ವರ್ಷಗಳ ಹಿಂದೆ ಪತ್ನಿ, ಮೂವರು ಮಕ್ಕಳ ಜೊತೆ ಮಂಗಳೂರಿಗೆ ವಲಸೆ ಬಂದಿದ್ದರು. ಅವರು ತೊಕ್ಕೊಟ್ಟಿನ ಖಾಸಗಿ ಕಟ್ಟಡದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಆವಾಗಾವಾಗ ಲಾಟರಿ ಖರೀದಿಸುವ ಅಭ್ಯಾಸ ಹೊಂದಿರುವ ಮೊಯ್ದಿನ್ ಕುಟ್ಟಿ ತನ್ನ ಅದೃಷ್ಟದ ಬಾಗಿಲು ಯಾವಾಗ ತೆರೆಯುವುದೋ ಎಂದು ಕಾಯುತ್ತಲೇ ಇದ್ದರು. ಆದರೆ ಇಷ್ಟರವರೆಗೆ ಲಕ್ ಕುದುರಿರಲಿಲ್ಲ.
ಮೊನ್ನೆ ಭಾಗ್ಯಮಿತ್ರ ಲಾಟರಿಗೆ ನಡೆದ ಒಟ್ಟು ಡ್ರಾ ದಲ್ಲಿ 5 ಜನರಿಗೆ ತಲಾ 1 ಕೋಟಿ ರೂಪಾಯಿ ಬಹುಮಾನ ಲಭಿಸಿದೆ. ಈ ಐವರು ಅದೃಷ್ಟವಂತರಲ್ಲಿ ಮೊಯ್ದಿನ್ ಕೂಡಾ ಒಬ್ಬರಾಗಿದ್ದಾರೆ.
ತಮಗೆ ಬರೋ ಹತ್ತು ಸಾವಿರದ ಸಂಬಳದಲ್ಲಿ ಆ ತಿಂಗಳು ದುಡ್ಡು ಇಲ್ಲ ಅಂತ ತಮ್ಮ ಗೆಳೆಯ ಟೈಲರ್ ರವಿ ಎಂಬವರಿಂದ ಆತ ಸಾಲ ಮಾಡಿ ಲಾಟರಿ ಟಿಕೆಟ್ ಕೊಂಡಿದ್ದರು ಮೊಯ್ದಿನ್. ಹಾಗೆ ತಂದ ಲಾಟರಿ ಹೀಗೆ ತಮ್ಮ ಹಣೆಬರಹವನ್ನೇ ಬದಲಿಸಬಹುದು ಎನ್ನುವ ಸಣ್ಣ ಅಂದಾಜು ಕೂಡಾ ಇವರಿಗೆ ಇರಲಿಲ್ಲ. ಈಗ ಮೊಯ್ದಿನ್ ಕುಟ್ಟಿ ಮುಖದಲ್ಲಿ ಸಂತಸ ಮೂಡಿದೆ. ತಾವು ಗೆದ್ದ ಲಾಟರಿ ಹಣ ಕೈ ಸೇರಿದ ನಂತರ ಕುಟುಂಬ ಸಮೇತ ಮರಳಿ ತಮ್ಮ ಊರು ಸೇರಿ ಆಲ್ಲಿ ನೆಮ್ಮದಿಯಾಗಿ ನೆಲೆಸುವ ಆಲೋಚನೆ ಇವರದ್ದು.
ತಾನು ಸಾಲ ಕೊಟ್ಟ ಹಣದಿಂದ ಪಡೆದ ಲಾಟರಿ ಟಿಕೆಟ್ ಗೆ ಬಹುಮಾನ ಬಂದಿರೋದು ಟೈಲರ್ ರವಿ ಅವರಿಗೂ ಖುಷಿ ತಂದಿದೆ.