ಬಂದಾರಿನ ಅಡಕೆ ವ್ಯಾಪಾರಿ ನಿಗೂಢ ನಾಪತ್ತೆ | ಆತಂಕದಲ್ಲಿ ಅಡಕೆ ಮಾರಿದ ಗ್ರಾಹಕರು

ಬೆಳ್ತಂಗಡಿ : ಮುಂಗಡ ಅಡಕೆ ಖರೀದಿಸಿ ನೂರಾರು ಗ್ರಾಹಕರಿಗೆ ಕೋಟ್ಯಂತರ ರೂಪಾಯಿ ಹಣ ಕೊಡಲು ಬಾಕಿ ಮಾಡಿದ್ದ ಅಡಕೆ ವ್ಯಾಪಾರಿಯೋರ್ವರು ಮನೆಗೆ ಬೀಗ ಹಾಕಿ ಒಂದು ವಾರದಿಂದ ನಿಗೂಢವಾಗಿ ನಾಪತ್ತೆಯಾದ ಘಟನೆ ಬಂದಾರು ಗ್ರಾಮದಿಂದ ವರದಿಯಾಗಿದ್ದು ಹಣ ಕಳೆದುಕೊಳ್ಳುವ ಭೀತಿಯಲ್ಲಿರುವ ಗ್ರಾಹಕರು ದಾರಿ ತೋಚದೆ ತೀವ್ರ ಆತಂಕ ಪಡುವಂತಾಗಿದೆ.

ಆದರೆ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.
ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ಬಟ್ಲಡ್ಕ ನಿವಾಸಿ ಪಾಣೆಕಲ್ಲು ಎಂಬಲ್ಲಿನ ಅಡಕೆ ಪ್ಯಾಪಾರದ ಅಂಗಡಿ ಮಾಲಕ ರಫೀಕ್ ಎಂಬವರು ಕಳೆದೊಂದು ವಾರದಿಂದ ನಾಪತ್ತೆಯಾಗಿದ್ದಾರೆ.
ತಾಲೂಕಿನ ಬಂದಾರು, ಮೊಗ್ರು, ಕೊಯ್ಯೂರು, ಬೆಳಾಲು ಗ್ರಾಮದ 100ಕ್ಕೂ ಆಧಿಕ ಗ್ರಾಹಕರ ಮನವೊಲಿಸಿ ವಿಶ್ವಾಸದ ನೆಲೆಯಲ್ಲಿ ಮುಂಗಡ ಅಡಕೆ ಖರೀದಿಸಿ ಸುಮಾರು 1.5 ಕೋಟಿ ರೂಪಾಯಿಗಳನ್ನು ಕೊಡಲು ಬಾಕಿ ಇಟ್ಟುಕೊಂಡಿದ್ದ ಅಡಕೆ ವ್ಯಾಪಾರಿ ರಫೀಕ್ ಅವರು ಇದೀಗ ಒಂದು ವಾರದಿಂದ ನಾಪತ್ತೆಯಾಗಿದ್ದು ಗ್ರಾಹಕರ ಆತಂಕಕ್ಕೆ ಕಾರಣವಾಗಿದೆ.
ಗುಜರಾತ್ ಮೂಲದ ಶೇಟ್ ಗಳೊಂದಿಗೆ ಅಡಕೆ ವ್ಯಾಪಾರ ವ್ಯವಹಾರ ಸಂಬಂಧ ಬೆಳೆಸಿಕೊಂಡಿದ್ದ ಇವರು ಗ್ರಾಹಕರ ಅಡಕೆಗೆ ಹೆಚ್ಚು ಬೆಲೆ ನಿಗದಿಗೊಳಿಸಿ ಅಡಕೆ ಖರೀದಿಸಿ ಶೇಟ್ ಗಳಿಗೆ ಅಡಕೆ ಮಾರಿದ್ದರು. ಮಾರಿದ ಅಡಕೆಯ ಬಾಬ್ತು ಹಣ ನೀಡಲು ಸಮಯವಕಾಶ ಕೇಳಿಕೊಂಡಿದ್ದು ಒಪ್ಪಂದದಂತೆ ನಿಗದಿಗೊಂಡ ಸಮಯಕ್ಕೆ ಶೇಟ್ ಗಳು ಕೊಡಬೇಕಾಗಿದ್ದ ಹಣವನ್ನು ಕೊಡದ ಪರಿಣಾಮ ವ್ಯಾಪಾರದಲ್ಲಿ ಶೇಟ್ ಗಳೊಂದಿಗೆ ಏನೋ ಎಡವಟ್ಟು ಮಾಡಿಕೊಂಡು ಗ್ರಾಹಕರಿಗೆ ಸಮಯಕ್ಕೆ ಸರಿಯಾಗಿ ಹಣ ಕೊಡಲು ಬಾಕಿ ಇಟ್ಟುಕೊಂಡು ನಾಪತ್ತೆಯಾಗಲು ಕಾರಣವಾಗಿದೆ ಎಂಬ ಅಭಿಪ್ರಾಯಗಳು ಸ್ಥಳೀಯವಾಗಿ ಕೇಳಿ ಬರುತ್ತಿದೆ.
ಇನ್ನೊಂದೆಡೆ ಗ್ರಾಹಕರಿಂದ ಮಿತಿ ಮೀರಿದ ಮುಂಗಡ ಅಡಕೆ ಖರೀದಿಯೇ ಅಡಕೆ ವ್ಯಾಪಾರಿಯ ವ್ಯಾಪಾರದ ಎಡವಟ್ಟುಗಳಿಗೆ ಕಾರಣವೆಂಬ ಮಾತುಗಳು ಕೇಳಿ ಬರುತ್ತಿದೆ.

ಅಡಕೆ ವ್ಯಾಪಾರಿ ರಫೀಕ್ ನಾಪತ್ತೆಯಾಗಿ ಒಂದು ವಾರವಾಗುತ್ತಾ ಬಂದಿದ್ದು ಕುಟುಂಬಸ್ಥರಲ್ಲಿ ವಿಚಾರಿಸಿದಾಗ ರಫೀಕ್ ಅವರ ಸ್ವಂತ ವ್ಯಾಪಾರ ವ್ಯವಹಾರಕ್ಕೆ ಅವರೇ ಹೊಣೆಯಾಗಿದ್ದು ಅವರ ನಾಪತ್ತೆಯಾದ ಬಳಿಕವೆ ಮುಂಗಡ ಅಡಕೆ ಖರೀದಿಸಿದ ಬಾಬ್ತು ರಫೀಕ್ ಅವರು ಇಷ್ಟೊಂದು ದೊಡ್ಡ ಮೊತ್ತವನ್ನು ಗ್ರಾಹಕರಿಗೆ ಬಾಕಿ ಇಟ್ಟಿದ್ದಾರೆ ಎಂಬ ನಮಗೆ ವಿಷಯ ತಿಳಿಯಿತು. ಒಂದು ವೇಳೆ ಗುಜರಾತ್ ಮೂಲದ ಶೇಟ್ ಗಳಿಂದ ಹಣ ಬರುವುದು ವಿಳಂಬವಾಗಿ ಎಡವಟ್ಟಾಗಿದ್ದಲ್ಲಿ ಅವರು ವಾಪಾಸು ಬಂದು ಎಲ್ಲಾ ಗ್ರಾಹಕರಿಗೆ ಕೊಡಲು ಬಾಕಿ ಇರುವ ಸಂಪೂರ್ಣ ಹಣವನ್ನು ಹಂತ ಹಂತವಾಗಿ ಕೊಡುವ ನಿರೀಕ್ಷೆಯಿದೆ.

ತಮಗೆ ಸಿಗಬೇಕಾದ ಹಣದ ವಿಚಾರದಲ್ಲಿ ಗ್ರಾಹಕರು ಯಾವುದೇ ಆತಂಕಕ್ಕೊಳಗಾಗುವುದು ಬೇಡ ಎಂದು ತಿಳಿಸಿದ್ದಾರೆ. ಅಡಕೆ ವ್ಯಾಪಾರಿಯ ನಿಗೂಢ ನಾಪತ್ತೆ ಪ್ರಕರಣ ಒಂದೆಡೆ ಸ್ಥಳೀಯವಾಗಿ ನಾನಾ ಚರ್ಚೆಗಳಿಗೂ ಕಾರಣವಾಗಿದ್ದು ಇನ್ನೊಂದೆಡೆ ಹಣ ಕಳೆದುಕೊಳ್ಳುವ ಆತಂಕದಲ್ಲಿರುವ ಗ್ರಾಹಕರು ಒಟ್ಟಾಗಿ ಪೊಲೀಸರಿಗೆ ದೂರು ನೀಡಲು ಸಿದ್ಧತೆಯಲ್ಲಿದ್ದಾರೆ.

Leave A Reply

Your email address will not be published.