‘ಶ್ರಮಿಕ್’ ರೈಲು ಸಿಗದ ಕಾರಣಕ್ಕೆ ಎದ್ದು ಹೋಗಿ ಸ್ವಂತ ಕಾರು ಖರೀದಿಸಿ ಊರಿಗೆ ತಲುಪಿದ ವಲಸೆ ಕಾರ್ಮಿಕ

ಘಾಜಿಯಾಬಾದ್​: ತನಗೆ ಊರಿಗೆ ಹೋಗಲು ಶ್ರಮಿಕ ಟ್ರೈನ್ ಸಿಗಲಿಲ್ಲವೆಂದು ಬೇಸರಗೊಂಡ ವಲಸೆ ನೌಕರನೊಬ್ಬ ಸೀದಾ ಹೋಗಿ ಕಾರು ಕೊಂಡು ತನ್ನೂರು ತಲುಪಿದ್ದಾನೆ.

ಸರಕಾರ ಸ್ವ ಗ್ರಾಮಗಳಿಗೆ ತೆರಳಲು ವಲಸೆ ಕಾರ್ಮಿಕರಿಗಾಗಿ ಶ್ರಮಿಕ್ ಹೆಸರಿನಲ್ಲಿ ರೈಲು ವ್ಯವಸ್ಥೆಯನ್ನು ಮಾಡಿದ್ದು, ಅದರಲ್ಲಿ ತನಗೆ ಸೀಟ್ ದೊರೆತಿಲ್ಲವೆಂದು ಸ್ವಂತ ಕಾರ್ ಒಂದನ್ನು ಖರೀದಿಸಿ ಊರಿಗೆ ತೆರಳಿದ ಆಶ್ಚರ್ಯಕರ ಘಟನೆಯೊಂದು ಉತ್ತರ ಪ್ರದೇಶದ ಘಾಜಿಯಾಬಾದ್​ನಲ್ಲಿ ನಡೆದಿದೆ.

ಈತ ಗೋರಖ್‌ಪುರದ ಪಿಪಿ ಗಂಜ್‌ನಲ್ಲಿರುವ ಕೈಥೋಲಿಯಾ ಗ್ರಾಮದ ನಿವಾಸಿಯಾದ ಲಾಲನ್ ವೃತ್ತಿಯಲ್ಲಿ ಪೈಂಟರ್. ತನ್ನೂರಿನಿಂದ ಸುಮಾರು 280 ಕಿ.ಮೀ ದೂರ ಇರುವ ಘಾಜಿಯಾಬಾದ್​ಗೆ ಪೇಂಟಿಂಗ್​ ಕೆಲಸದ ನಿಮಿತ್ತ ಹೋಗಿದ್ದ. ಆದರೆ ಅದೇ ವೇಳೆಗೆ ಲಾಕ್​ಡೌನ್​ ಘೋಷಣೆಯಾಯಿತು. ಈ ಹಿನ್ನೆಲೆಯಲ್ಲಿ ಆತ ತನ್ನೂರಿಗೆ ವಾಪಸಾಗಲು ಸಾಧ್ಯವಾಗಲಿಲ್ಲ.

ನಂತರ ಲಾಕ್​ಡೌನ್​ ಮುಗಿಯಿತು. ಸರಕಾರ ಶ್ರಮಿಕ್​ ರೈಲನ್ನು ಸರ್ಕಾರ ಪ್ರಾರಂಭಿಸಿತು. ಘಾಜಿಯಾಬಾದ್​ನಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ಇರುವ ಹಿನ್ನೆಲೆಯಲ್ಲಿ, ಲಾಲನ್​ಗೆ ಸೀಟು ಸಿಗಲೇ ಇಲ್ಲ. ಮೂರು ದಿನ ಕಾದರೂ ಸೀಟು ಸಿಗಲಿಲ್ಲ. ಇನ್ನು ತನ್ನೂರಿಗೆ ಹೋಗುವುದು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಲಾಲನ್​ ಬೇಸತ್ತು ಹೋದ.

ಕೊನೆಗೆ ಸಾಕಷ್ಟು ವಿಚಾರ ಮಾಡಿದ ನಂತರ ಬ್ಯಾಂಕ್​ಗೆ ಹೋಗಿ ಅಲ್ಲಿಂದ ತಾನು ಸಂಪಾದನೆ ಮಾಡಿಟ್ಟಿದ್ದ 1.9 ಲಕ್ಷ ರೂಪಾಯಿಗಳನ್ನು ತೆಗೆದುಕೊಂಡು ಸೀದಾ ಕಾರು ಷೋರೂಂನತ್ತ ಹೆಜ್ಜೆ ಹಾಕಿದ್ದಾನೆ ಲಾಲನ್.

ಅಷ್ಟಕ್ಕೂ ಈತ ಕಾರು ಷೋರೂಂಗೆ ಹೋದದ್ದು ಸೆಕೆಂಡ್​ ಹ್ಯಾಂಡ್​ ಕಾರು ಖರೀದಿಗೆ. ರೈಲಿನಲ್ಲಿ ಸೀಟು ಸಿಗದ ಕಾರಣ, ಕಾರಿನಲ್ಲಿಯೇ ಊರಿಗೆ ಹೋಗುವ ನಿರ್ಧಾರ ಮಾಡಿದ ಲಾಲನ್​, ಅಲ್ಲಿ ಒಂದೂವರೆ ಲಕ್ಷ ರೂಪಾಯಿಗೆ ಸೆಕೆಂಡ್​ ಹ್ಯಾಂಡ್​ ಕಾರು ಖರೀದಿಸಿ ಅದರಲ್ಲಿ ಕೇವಲ 14 ಗಂಟೆಗಳಲ್ಲಿ ಊರು ತಲುಪಿದ್ದಾನೆ.

ನಂತರ ಮಾಧ್ಯಮದವರ ಜತೆ ಮಾತನಾಡಿದ ಆತ, ನಾನು ನನ್ನ ದುಡಿತದ ಬಹುಪಾಲನ್ನು ಕಾರಿಗಾಗಿ ಖರ್ಚು ಮಾಡಿದೆ. ಅದಕ್ಕಾಗಿ ನನಗೆ ಬೇಜಾರಿದೆ. ಆದರೆ ನನ್ನ ಕುಟುಂಬವನ್ನು ಸೇರಲು ಇದಕ್ಕಿಂತ ಬೇರೆ ದಾರಿ ಇರಲಿಲ್ಲ. ಬಸ್ಸುಗಳನ್ನು ಬಿಟ್ಟಿದ್ದರೂ ಅಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟವಾಗಬಹುದು ಮತ್ತು ಅದು ಅಷ್ಟು ಸೇಫ್ ಅಲ್ಲ ಎಂದು ಕಾರನ್ನು ಖರೀದಿಸುವ ನಿರ್ಧಾರಕ್ಕೆ ಬಂದೆ. ಆದ್ದರಿಂದ ಸುರಕ್ಷಿತವಾಗಿ ಕುಟುಂಬವನ್ನು ಸೇರಿರುವ ತೃಪ್ತಿ ನನಗಿದೆ. ಇಲ್ಲಿಯೇ ಕೆಲಸ ಹುಡುಕುತ್ತೇನೆ. ಮತ್ತೆಂದೂ ಕುಟುಂಬದಿಂದ ದೂರವಾಗಿ ಘಾಜಿಯಾಬಾದ್​ಗೆ ಹೋಗಲಾರೆ. ಗೋರಖ್​ಪುರದಲ್ಲಿಯೇ ಕೆಲಸ ಸಿಗುವ ಭರವಸೆ ಇದೆ. ಇಲ್ಲೇ ನಾನು ಬದುಕು ಕಂಡುಕೊಳ್ಳಬೇಕು ಎಂದಿದ್ದಾನೆ ಲಾಲನ್.

ಒಟ್ಟಿನಲ್ಲಿ ಆಗದು ಎಂದು ಸುಮ್ಮನೆ ಕುಳಿತಿದ್ದರೆ ಲಾಲನ್ ಇಂದಿಗೂ ಘಾಜಿಯಾಬಾದ್ ನಲ್ಲೇ ಅತಂತ್ರ ವಾಗೇ ಇರಬೇಕಾಗಿತ್ತು. ಆದರೆ ಈತನ ನಿರ್ಧಾರದಿಂದ ಇಂದು ಕುಟುಂಬದೊಂದಿಗೆ ನೆಮ್ಮದಿಯಾಗಿ ಕ್ಷೇಮವಾಗಿ ಇದೆ ಲಾಲನ್ ಕುಟುಂಬ.

Leave A Reply

Your email address will not be published.