ಹೋಂ ಕ್ವಾರಂಟೈನ್ ಉಲ್ಲಂಘಿಸಿದವರು ಸರಕಾರಿ ಸಾಂಸ್ಥಿಕ ಕ್ವಾರಂಟೈನ್ ಗೆ
ಹೋಂ ಕ್ವಾರಂಟೈನ್ ಉಲ್ಲಂಘಿಸಿ ಹೊರಗಡೆ ತಿರುಗಾಟ ನಡೆಸಿದ್ದ ಐವರನ್ನು ಸರ್ಕಾರಿ ಸಾಂಸ್ಥಿಕ ಕ್ವಾರಂಟೈನ್ಗೆ ಒಳಪಡಿಸಲಾಗಿದೆ.
ಕೋವಿಡ್ ಸೋಂಕಿತರೊಂದಿಗೆ ಎರಡನೇ ಹಂತದ ಸಂಪರ್ಕ ಹೊಂದಿದ್ದ ಜನರನ್ನು ಗುರುತಿಸಿ ಧಾರವಾಡ ಜಿಲ್ಲೆಯಾದ್ಯಂತ ಹಲವಾರು ಜನರನ್ನು ಹೋಂ ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಆಧುನಿಕ ತಂತ್ರಜ್ಞಾನ ಬಳಸಿ ಜಿಯೋ ಫೆನ್ಸಿಂಗ್ ಅಳವಡಿಸಿ ಇವರೆಲ್ಲರ ಮೇಲೆ ನಿಗಾವಹಿಸಲಾಗಿತ್ತು.
ಜಿಯೊ ಫೆನ್ಸಿಂಗ್ ವಲಯದಿಂದ ಹೊರಬಂದ ಕೂಡಲೇ ಕಂಟ್ರೋಲ್ ರೂಮಿಗೆ ಮಾಹಿತಿ ಲಭ್ಯವಾಗುತ್ತಿದೆ. ಈ ಮಾಹಿತಿ ಆಧರಿಸಿ ಈ ಹಿಂದೆಯೇ ನವಲೂರ ಪ್ರದೇಶದಲ್ಲಿ ಹೋಂ ಕ್ವಾರಂಟೈನ್ನಲ್ಲಿರುವವರ ಮನೆಗಳಿಗೆ ಮಹಾನಗರಪಾಲಿಕೆ ಅಧಿಕಾರಿಗಳು ಭೇಟಿ ನೀಡಿ ನಿಯಮ ಉಲ್ಲಂಘಿಸದಿರಲು ಎಚ್ಚರಿಕೆ ನೀಡಿದರು.
ಹಲವು ಎಚ್ಚರಿಕೆಗಳ ನಂತರವೂ ನಿರಂತರವಾಗಿ ಹೊರಗಡೆ ಸಂಚಾರ ನಡೆಸಿದ್ದ ಐವರನ್ನು ಧಾರವಾಡ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಸುಜಾತಾ ಹಸವಿಮಠ, ತಾಲೂಕು ಆರೋಗ್ಯಾಧಿಕಾರಿ ಡಾ. ಅಯ್ಯನಗೌಡ ಪಾಟೀಲ ಅವರ ನೇತೃತ್ವದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರ ತಂಡ ಅವರನ್ನು ಸರ್ಕಾರಿ ಸಾಂಸ್ಥಿಕ ಕ್ವಾರಂಟೈನ್ಗೆ ಒಳಪಡಿಸಿದರು.