ಮಧ್ಯಪ್ರದೇಶ ನಿವಾಸಿಗಳು ಸುಳ್ಯದಿಂದ ನಾಳೆ ಹುಟ್ಟೂರಿಗೆ ಪ್ರಯಾಣ
ವರದಿ : ಹಸೈನಾರ್ ಜಯನಗರ
ವಿವಿಧ ಉದ್ಯೋಗಗಳನ್ನು ಅರಸಿ ಮಧ್ಯಪ್ರದೇಶದಿಂದ ಬಂದು ಸುಳ್ಯ ಭಾಗದಲ್ಲಿ ನೆಲೆಸಿರುವ ಕಾರ್ಮಿಕರು ನಾಳೆ ಸುಳ್ಯದಿಂದ ತಮ್ಮ ಹುಟ್ಟೂರಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ತಿಳಿದುಬಂದಿದೆ.
ಸೇವಾಸಿಂಧು ಆಪ್ ನಲ್ಲಿ ಸುಮಾರು 19ಮಂದಿ ಮಧ್ಯಪ್ರದೇಶದ ಜನರು ಈಗಾಗಲೇ ತಮ್ಮ ತಮ್ಮ ಪಾಸುಗಳನ್ನು ಪಡೆದುಕೊಂಡಿದ್ದು, ಇವರನ್ನು ಇಂದು ತಾಲೂಕು ಆಡಳಿತದ ವತಿಯಿಂದ ಸುಳ್ಯ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣಕ್ಕೆ ಕರೆಸಿ ತಹಸಿಲ್ದಾರ್ ಅನಂತ ಶಂಕರ್ ರವರ ನೇತೃತ್ವದಲ್ಲಿ ಮಾಹಿತಿಯನ್ನು ನೀಡಲಾಯಿತು. ನಾಳೆ ಪ್ರಯಾಣಿಸಲು ಬೇಕಾದ ಅರ್ಜಿ ಫಾರಂಗಳನ್ನು ಭರ್ತಿ ಮಾಡುವ ಕಾರ್ಯ, ಪರಿಶೀಲನೆ,ತಪಾಸಣೆಗಳು, ನಡೆಸಿ ಪೂರ್ವಭಾವಿ ಸಿದ್ಧತೆಯನ್ನು ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ಪ್ರಯಾಣಿಕರು ನಾಳೆ ಸುಳ್ಯದಿಂದ ಬೆಂಗಳೂರಿಗೆ ತೆರಳಿ ಬೆಂಗಳೂರಿನಿಂದ ರೈಲಿನ ಮೂಲಕ ತಮ್ಮ ತಮ್ಮ ಊರುಗಳನ್ನು ಸೇರಲಿದ್ದಾರೆ ಎಂದು ತಿಳಿದುಬಂದಿದೆ.
ಇದರೊಂದಿಗೆ ಸುಳ್ಯ ತಾಲೂಕಿನಲ್ಲಿರುವ ಜಾರ್ಖಂಡ್ ಮೂಲದ ನಿವಾಸಿಗಳು ನಾಳೆ ಉಡುಪಿಗೆ ಬಸ್ಸಿನ ಮೂಲಕ ತೆರಳಿ ಅಲ್ಲಿಂದ ರೈಲಿನಲ್ಲಿ ಜಾರ್ಖಂಡ್ ಗೆ ಪ್ರಯಾಣಿಸಲಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂದರ್ಭದಲ್ಲಿ ಸುಳ್ಯ ಠಾಣೆ ಪೊಲೀಸ್ ಅಧಿಕಾರಿಗಳು , ಗ್ರಾಮಲೆಕ್ಕಾಧಿಕಾರಿಗಳು, ಪಂಜ ಕಂದಾಯ ನಿರೀಕ್ಷಕ ಶಂಕರ್, ಕೆ ಎಸ್ ಆರ್ ಟಿ ಸಿ ಅಧಿಕಾರಿ ವರ್ಗದವರು, ಮೊದಲಾದವರು ಉಪಸ್ಥಿತರಿದ್ದು ಸಹಕರಿಸಿದರು.