ಲಾಕ್ ಡೌನ್ ನ ಸಮಯದಲ್ಲಿ ವನ್ಯಲೋಕದಲ್ಲೊಂದು ಕಲಿಕೆ | ಸವಣೂರಿನ ಮೂರನೇ ಕ್ಲಾಸಿನ ಆರಾಧ್ಯಳ ಅರಣ್ಯ ಪಾಠ

ಆರಾಧ್ಯ ಪ್ರಸ್ತುತ ಕಾಣಿಯೂರಿನ ಪ್ರಗತಿ ಇಂಗ್ಲೀಷ್ ಮೀಡಿಯಂ ಸ್ಕೂಲಿನಲ್ಲಿ ಮೂರನೆಯ ತರಗತಿಯ ವಿದ್ಯಾರ್ಥಿನಿ. ಲಾಕ್ ಡೌನ್ ಸಮಯವನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬಹುದು ಎಂದು ಯೋಚಿಸುತ್ತಿರುವಾಗ, ನಮ್ಮ ಸುತ್ತಮುತ್ತಲಿನ ಪರಿಸರವನ್ನು ತಿಳಿದುಕೊಂಡರೆ ಹೇಗೆ ಎಂಬ ಯೋಚನೆ ಬಂತು.

ತಂದೆ ತಾಯಿಯಲ್ಲಿ ಈ ಬಗ್ಗೆ ವಿಮರ್ಶೆ. ಒಂದೇ ದಿನದಲ್ಲಿ ಬ್ಲೂಪ್ರಿಂಟ್ ರೆಡಿ. ಏನು ಮಾಡೋಣ? ಅದು ಮಾಡಬಹುದು, ಇದನ್ನು ಮಾಡಲೇಬೇಕು, ಇದು ಮಾಡಿದರೆ ಹೆಂಗೆ ? ಹೀಗೆ, ನಮ್ಮ ಸುತ್ತಮುತ್ತ ನೂರಾರು ರೀತಿಯ ಕೀಟಗಳು, ಪತಂಗಗಳು, ಜೀವಜಂತುಗಳು ವಾಸಿಸುತ್ತಿರುತ್ತವೆ. ಅವುಗಳ ಬಗ್ಗೆ ಅಧ್ಯಯನ ಮಾಡಿದರೆ ಏನು ಎಂದು ಯೋಚನೆ.

ಮರುದಿನ ನೇರ ಕಾಡಿಗೆ ಪ್ರವೇಶ. ಅಲ್ಲೊಂದು ಆಳೆತ್ತರದ ಮಣ್ಣಿನ ಹುತ್ತ. ಒಳಗೆ ಇಣುಕಿ ನೋಡಿದರೆ ಅದರಲ್ಲಿದೆ ಸಾವಿರಾರು ಗೆದ್ದಲುಗಳ ಕುಟುಂಬ. ಮತ್ತೆ ಮನೆಗೆ ಬಂದು ಪುಸ್ತಕ ಓದಿ ಗೆದ್ದಲಿನ ಬಗ್ಗೆ ಅಧ್ಯಯನ. ಕೂಡಲೇ ಪರಿಕರಗಳನ್ನು ಹೊಂದಿಸಿಕೊಂಡು ತಂದೆಯ ಮೊಬೈಲಿನಲ್ಲಿ ಚಿತ್ರೀಕರಣ ಪ್ರಾರಂಭ. ಅಷ್ಟರಲ್ಲಿ ಅಮ್ಮನಿಂದ ಸ್ಟೋರಿ ಬೋರ್ಡ್ ತಯಾರು. ಕೆಲವೊಂದು ಕ್ಲಿಷ್ಟಕರವಾದ ಶಬ್ದಗಳ, ಪದಗಳ ಕಲಿಕೆ. ನಂತರ ಶೂಟಿಂಗ್ ಆರಂಭ. ಸಂಪೂರ್ಣ ಮಾಹಿತಿಯನ್ನು ಕಲೆಹಾಕಿ ಎರಡು ಗಂಟೆಗಳ ಕಾಲ ಚಿತ್ರೀಕರಣ.
ಮೊಬೈಲ್ನಲ್ಲಿ ಎಡಿಟಿಂಗ್ ಮಾಡಿ 8 ನಿಮಿಷಗಳಿಗೆ ಸಾರಾಂಶದ ಇಳಿಕೆ. ಒಂದಷ್ಟು ಮ್ಯೂಸಿಕ್, ಟೈಟಲ್ ಇತ್ಯಾದಿ ಇತ್ಯಾದಿ.

ಒಟ್ಟಾರೆ ಕೆಲಸ ಮುಗಿದಾಗ ಮಧ್ಯರಾತ್ರಿ 12 ಗಂಟೆ. ಗೂಗಲ್ ನ ಯೂಟ್ಯೂಬ್ ಗೆ ಅಪ್ ಲೋಡ್ ಮುಂದಿನ ಮುಂಜಾನೆ 40 ಜನರ ವೀಕ್ಷಣೆ. ಒಂದೊಂದಾಗಿ ಹರಿದು ಬಂದ ಹಲವಾರು ಶುಭಹಾರೈಕೆಗಳು. ಇವೆಲ್ಲವನ್ನೂ ನೋಡಿ ಖುಷಿಯೋ ಖುಷಿ.
ಶೂಟಿಂಗ್ ಆ ದಿನಕ್ಕೆ ನಿಲ್ಲಲಿಲ್ಲ !!

ಪ್ರತಿ ದಿನವೂ ಒಂದೊಂದು ಪ್ರಾಣಿ, ಕೀಟ ಎಂಬಂತೆ ಬಸವನ ಹುಳು, ಜೇನು ಕುಟುಂಬ, ಬುಲ್ಲೆಟ್ ಆಂಟ್, ಗ್ರಾಸ್ ಹೊಪ್ಪರ್, ಸೊಳ್ಳೆ ಗಳು, ಮಿಲ್ಲಿ ಪೆಡ್, ಡಿಕೇಯಿಂಗ್ ಆರ್ಗನಿಸಂಸ್, ಅಂತಿಲ್ ಆಂಟ್ಸ್, ಡ್ರಾಗನ್ ಫ್ಲೈ, ಶ್ರಿಲ್ಲಿಂಗ್ ಸೌಂಡ್ ಇನ್ ಸೆಕ್ಟ್ , ಪೊಳಿಲೋ ಫಾರೆಸ್ಟ್ ಫ್ರಾಗ್ ಇತ್ಯಾದಿ ಇತ್ಯಾದಿ.
ಒಂದೊಂದು ಚಿತ್ರೀಕರಣದಲ್ಲೂ ಒಂದೊಂದು ಅನುಭವ. ಹಲವಾರು ವಿಷಯಗಳ ಕಡ್ಡಾಯ ಅಧ್ಯಯನ. ಕ್ಯಾಮೆರಾ ಎದುರಿಸುವುದು ಹೇಗೆ. ಸ್ಪಷ್ಟವಾಗಿ ವಾಕ್ಯಗಳನ್ನು ಹೇಗೆ ಹೇಳಬೇಕು? ಜೀವಜಂತುಗಳನ್ನು ಯಾವ ರೀತಿ ಸೆರೆಹಿಡಿಯಬೇಕು. ಅವು ಯಾವ ರೀತಿ ಬದುಕುತ್ತವೆ. ಅವುಗಳ ಗೂಡು, ಆಹಾರಕ್ರಮ… ಒಳಕ್ಕೆ ಹೊಕ್ಕಷ್ಟೂ ಮತ್ತಷ್ಟು ತೆರೆದುಕೊಳ್ಳುವ ಜೀವ ಜಾಲ. ಅನಾವರಣ ಗೊಳಿಸಿದಶ್ಟೂ ನಿಗೂಢತೆಯನ್ನು ಹಾಗೆಯೇ ಉಳಿಸಿಕೊಳ್ಳುವ ಪ್ರಕೃತಿ.

ಈ ಒಂದೊಂದೇ ವಿಷಯಗಳ ಕಲಿಯುವುದು ತುಂಬಾನೇ ಇಷ್ಟವಾಗುತ್ತದೆ ಎನ್ನುತ್ತಾಳೆ ಆರಾಧ್ಯ. ಆದರೆ ಒಂದು ಕಲಿತಾಗ ಅದರ ಮುಂದೆ ಇನ್ನೊಂದು ಕಾಣಿಸುತ್ತದೆ. ಎಲ್ಲಾ ಕಲಿಯೋದು ಹೇಗೆ ? ಎಂಬ ಅವಳ ಮುಗ್ಧ ಪ್ರಶ್ನೆಗೆ ನಾವು ನಿರುತ್ತರ. ನಿಧಾನವಾಗಿ ಅವಳಿಗೆ ಈ ಪ್ರಕೃತಿಯ ವೈವಿಧ್ಯತೆ, ಅಗಾಧತೆ ಅರ್ಥವಾಗುತ್ತದೆ. ಇದು ಬಗೆದಷ್ಟೂ ಬಗೆಹರಿಯದ, ಬಾಚಿಕೊಂಡಷ್ಟೂ ತುಂಬಿಕೊಳ್ಳುವ ಅಕ್ಷಯ ಪಾತ್ರೆ. ಎಂಬುದು ಅವಳಿಗೆ ಅರ್ಥವಾಗುವವರೆಗೆ ಆಕೆ ಅವಳಷ್ಟಕ್ಕೆ ಅವಳೇ ಕಲಿಯಲಿ. ನಾವು ಅವಳಿಗೆ ಪ್ರೇರಣೆ ಕೊಡುತ್ತಾ ನಿಲ್ಲಬೇಕು ಎನ್ನುವುದು ಅವಳ ಅಪ್ಪ ವಿವೇಕ್ ಆಳ್ವಾ ಅವರ ನಿಲುವು.

ಶೂಟಿಂಗ್ ನಡೆಯುತ್ತಿದೆ. ಸುತ್ತಮುತ್ತಲ ಜೀವ ಜಂತುಗಳ ಜೀವನ ಕ್ರಮ ಅನಾವರಣಗೊಳ್ಳುತ್ತಿದೆ. ಹಲವಾರು ಶುಭಹಾರೈಕೆಗಳು ಬರುತ್ತಿವೆ. ಪ್ರಕೃತಿ ಜೀವಗಳ ಪಾಠ ನಮಗೂ ಹಲವಾರು ಜೀವನ ಪಾಠಗಳನ್ನು ಕಲಿಸುತ್ತದೆ ಎನ್ನುವುದು ಆರಾಧ್ಯಳ ಅನಿಸಿಕೆ.

ಮನೆಯಲ್ಲಿ ಪುಟ್ಟ ಮಕ್ಕಳು ಕೇವಲ ಮೊಬೈಲ್ ವಿಡಿಯೋ ಗೇಮ್ ಟಿವಿ ಎಂದು ಸಮಯವನ್ನು ವ್ಯರ್ಥ ಮಾಡಿಕೊಳ್ಳುವ ಬದಲು ಲಿಸನ್ ಫಾರೆಸ್ಟ್, ಐ ಆಮ್ ಆರಾಧ್ಯ, # ಮೈ ವಾಕ್ ಥ್ರೂ ಫಾರೆಸ್ಟ್ ಎಂಬ ಕಾರ್ಯಕ್ರಮವನ್ನು ಮಾಡಿ ಪ್ರಪಂಚಕ್ಕೆ ಯೂ ಟ್ಯೂಬ್ ಮೂಲಕ ತಿಳಿಸಿರುವುದು ನಿಜಕ್ಕೂ ಆದರ್ಶನೀಯ. ಇದರಲ್ಲಿ ಆಕೆಯ ಅಪ್ಪ ವಿವೇಕ್ ಆಳ್ವ ಮತ್ತವಳ ಅಮ್ಮ ಸ್ಮಿತಾ ವಿವೇಕ್ ಆಳ್ವಾ ಅವರ ಉತ್ಸಾಹ ಮತ್ತು ಶ್ರಮ ಎದ್ದು ಕಾಣಿಸುತ್ತದೆ. ಅದಕ್ಕವರು ಅಭಿನಂದನಾರ್ಹರು.

ನೀವು ಕೂಡಾ ಈ ಯು ಟ್ಯೂಬ್ ನೋಡಿ ಅವಳನ್ನು ಪ್ರೋತ್ಸಾಹಿಸಿ.

Leave A Reply

Your email address will not be published.