ಪಯಸ್ವಿನಿ ನದಿಯ ಪಾಲಾಗಿದ್ದ ಅಶ್ವಿತ್ ಮೃತ ದೇಹ ಇಂದು ಮುಂಜಾನೆ ಪತ್ತೆ
ಅಡ್ಕಾರು ಸಮೀಪದ ಕೋನಡ್ಕ ಪದವು ಎಂಬಲ್ಲಿ ಪಯಸ್ವಿನಿ ನದಿಗೆ ಗೆಳೆಯನೊಂದಿಗೆ ತೆರಳಿ ನೀರು ಪಾಲಾಗಿದ್ದ ಯುವಕನ ಮೃತದೇಹ ಇಂದು ಬೆಳಗ್ಗೆ ದೊರೆತಿದೆ.
ಅಶ್ವಿತ್ ರವರ ದೇಹವನ್ನು ನೀರಿನಿಂದ ತೆಗೆಯಲು ನಿನ್ನೆ ರಾತ್ರಿ ಪ್ರಯತ್ನ ನಡೆದಿತ್ತು. ಆದರೆ ಬೆಳಕಿನ ಕೊರತೆಯಿಂದ ಕಾರ್ಯಾಚರಣೆ ವಿಳಂಬವಾಗಿದೆ. ಕೊನೆಗೆ ಸ್ಥಗಿತಗೊಳಿಸಲಾಗಿತ್ತು. ಮತ್ತೆ ಇಂದು ಬೆಳಿಗ್ಗೆಯೇ ಮತ್ತೆ ಕಾರ್ಯಾಚರಣೆ ನಡೆಸಿದಾಗ ಘಟನೆ ನಡೆದ ಸ್ವಲ್ಪ ದೂರದಲ್ಲೆ ಮೃತದೇಹ ಪತ್ತೆಯಾಗಿದೆ.
ಕನಕ ಮಜಲಿನ ಅಶ್ವಿತ್ ಹಾಗೂ ಅಡ್ಕಾರಿನ ಪ್ರಸನ್ನ ಎಂಬ ಯುವಕರು ಪಯಸ್ವಿನಿ ನದಿಗೆ ತೆರಳಿದ್ದರು. ಆರಂಭದಲ್ಲಿ ಇಬ್ಬರೂ ತೆಪ್ಪದ ಮೂಲಕ ಸ್ವಲ್ಪ ದೂರ ಹೋಗಿ ದಡಕ್ಕೆ ಬಂದಿದ್ದರೆನ್ನಲಾಗಿದೆ. ಬಳಿಕ ಅಶ್ವಿತ್ ಒಬ್ಬರೇ ತೆಪ್ಪದಲ್ಲಿ ಹೋಗುತ್ತಿದ್ದಾಗ ಆಯತಪ್ಪಿದ ಪರಿಣಾಮ ಮಗುಚಿ ನೀರು ಪಾಲಾಗಿದ್ದರು.
ಇಂದು ಮುಂಜಾನೆ 6 ಗಂಟೆ ಸುಮಾರಿಗೆ ಮತ್ತೆ ಕಾರ್ಯಾಚರಣೆಗಿಳಿದ ಪೈಚಾರಿನ ಮುಳುಗು ತಜ್ಞರ ತಂಡ ನದಿಯ ಬಳಿ ತೆರಳಿ 20 ಅಡಿ ಅಂತರಕ್ಕೆ ಹೋಗಿ ಕಾರ್ಯಾಚರಣೆ ನಡೆಸಿದಾಗ ಸುಮಾರು 25 ರಿಂದ 30 ಅಡಿ ನೀರಿನ ಆಳದಲ್ಲಿ ಮರಕ್ಕೆ ಸಿಕ್ಕಿಹಾಕಿಕೊಂಡು ಯುವಕನ ಮೃತ ದೇಹ ಪತ್ತೆಯಾಯಿತು. ಬಶೀರ್ ಆರ್ ಬಿ, ಶರೀಫ್ ಟಿ ಎ, ಲತೀಫ್ ಬೊಳುಬೈಲ್, ಅಬ್ಬಾಸ್ ಶಾಂತಿನಗರ ಸೇರಿ ಮೃತದೇಹವನ್ನು ನೀರಿನಿಂದ ತೆಗೆದರು. ನಂತರ ಮೃತದೇಹವನ್ನು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ತರಲಾಗಿದೆ ಎಂದು ತಿಳಿದು ಬಂದಿದೆ.
ಪೈಚಾರಿನ ಈ ಸಾಹಸಿ ಯುವಕರನ್ನೊಳಗೊಂಡ ಈಜು ತಜ್ಞರ ತಂಡವು ಇಂತಹ ಹಲವು ಕಠಿಣ ಪರಿಸ್ಥಿತಿಗಳಲ್ಲಿ ಮೃತದೇಹ ಹೊರತೆಗೆಯುವಲ್ಲಿ ಯಶಸ್ವಿ ಎನಿಸಿಕೊಂಡಿದೆ.