ನೂರಕ್ಕೆ ನೂರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ರಿಚರ್ಡ್ ಬಳಿ ಇದೆ ಒಂದು ಹೊಸ ಐಡಿಯಾ !
ಕೊರೋನಾ ವೈರಸ್ ಬಾರದಂತಿರಲು ಇರುವ ಅತ್ಯಂತ ಪ್ರಬಲ ಮದ್ದು ಅಂದರೆ ಅದು ಸಾಮಾಜಿಕ ಅಂತರ. ಅದನ್ನು ಪರಿಪೂರ್ಣವಾಗಿ, ನೂರಕ್ಕೆ ನೂರರಷ್ಟು ಪಾಲಿಸಲು ಹೋದ ವ್ಯಕ್ತಿಯೊಬ್ಬ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಆತ ರಿಚರ್ಡ್ ಮೆಕ್ ಗೈರ್. ಸಾಮಾಜಿಕ ಅಂತರವನ್ನು ನೂರಕ್ಕೆ ನೂರು ಪಾಲಿಸಬೇಕಾದರೆ ಕುಟುಂಬದಿಂದ ದೂರ ಇರಬೇಕು. ಮನೆಗೆ ಹೋದರೆ ಅಪ್ಪ-ಅಮ್ಮ, ಹೆಂಡತಿ-ಮಕ್ಕಳು, ಸೋದರರು ಹೀಗೆ ಒಬ್ಬರಲ್ಲ ಒಬ್ಬರು ನಮ್ಮ ಸಂಪರ್ಕಕ್ಕೆ ಬರುತ್ತಾರೆ. ಯಾಕೆ ರಿಸ್ಕು ತಗೋಬೇಕು? ಹಾಗಂತ ಅಂದುಕೊಂಡು ರಿಚರ್ಡ್ ಸೀದಾ ಸಾರ್ವಜನಿಕರಿಗೆ ಪ್ರವೇಶ ಇಲ್ಲದ ದ್ವೀಪ ಒಂದಕ್ಕೆ ನುಗ್ಗಿದ್ದಾನೆ. ಅಲ್ಲಿ ಯಾರಿಗೂ ತಿಳಿಯದಂತೆ ಬಚ್ಚಿಟ್ಟುಕೊಂಡಿದ್ದಾನೆ.
ಅಂದ ಹಾಗೆ ಈತ ಕ್ವಾರಂಟೈನ್ ಆಗಲು ಆರಿಸಿಕೊಂಡ ದ್ವೀಪವು ಡಿಸ್ನಿ ಐಲ್ಯಾಂಡ್ ಆಗಿದ್ದು, ಅಲ್ಲಿ 1999 ರಿಂದ ಯಾವುದೇ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಆದರೆ ಅದ್ಯಾವುದರ ಮಾಹಿತಿಯೂ ಇಲ್ಲದ ಆತ ಅದರೊಳಗೆ ಹೇಗೋ ಪ್ರವೇಶ ಮಾಡಿದ್ದ.
ಆತ ಅಲ್ಲೆರಡು ಎರಡು ದಿನ ತಂಗಿದ್ದ. ಮತ್ತೆ 3 ವಾರ ಅಲ್ಲಿ ಇರಲು ಪ್ಲಾನ್ ಮಾಡಿದ್ದ. ಎರಡು ದಿನ ಈತನ ಪತ್ತೆ ಇಲ್ಲದ ಮನೆಯವರು ಕಂಪ್ಲೇಂಟು ಕೊಟ್ಟಿದ್ದರು. ಈತ ನಾಪತ್ತೆಯಾಗಿದ್ದಾನೆ ಎಂದು ಗೊತ್ತಾಗುತ್ತಲೇ ಪೊಲೀಸರು ಆತನಿಗಾಗಿ ಹುಡುಕಿದ್ದಾರೆ. ಪೊಲೀಸರು ಆತನನ್ನು ತಲುಪುವಾಗ ಆತ ರಿಲ್ಯಾಕ್ಸ್ ಮಾಡುತ್ತಿದ್ದನಂತೆ.