ನಿರ್ಧಾರ ತೆಗೆದದ್ದು ನಗರ ಪಂಚಾಯತ್ ಸಭೆಯಲ್ಲಿ ಕಾರ್ಯಗತಗೊಂಡದ್ದು ಕಾರ್ಮಿಕರ ಮುಖಂಡರ ಸಹಕಾರದಲ್ಲಿ – ಎಂಬಿ ಸದಾಶಿವ

ಕಳೆದ ಜುಲೈ 31ರಂದು ಇಡೀ ದೇಶವು ಕೋರೋಣ ವೈರಸ್ಸಿನ ಮಹಾಮಾರಿ ಯಿಂದ ಲಾಕ್ ಡೌನ್ ಕೊಂಡಾಗ ಇಡೀ ದೇಶವೇ ಸ್ತಬ್ಧಗೊಂಡಿತ್ತು. ರಾಜ್ಯ ಮಟ್ಟದಲ್ಲಿ ಜಿಲ್ಲಾ ಮಟ್ಟದಲ್ಲಿ ತಾಲೂಕು ಮಟ್ಟದಲ್ಲಿ ಬಡವರು ಕೂಲಿ ಕಾರ್ಮಿಕರು ಮುಂದೇನು ಎಂಬ ಆಲೋಚನೆಯಲ್ಲಿ ತೊಡಗಿಕೊಂಡಾಗ ರಾಜ್ಯದಾದ್ಯಂತ ಹಲವಾರು ದಾನಿಗಳು ರಾಜಕೀಯ ನೇತಾರರು ಸಂಘಸಂಸ್ಥೆಗಳು ಹಸಿದ ಕಾರ್ಮಿಕರಿಗೆ ಭೋಜನದ ವ್ಯವಸ್ಥೆಯನ್ನು ಕಲ್ಪಿಸುವ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಅವುಗಳೆಲ್ಲವೂ ಕೆಲವೇ ದಿನಗಳಿಗೆ ಕೆಲವೆ ಜನರಿಗೆ ಎಂಬಂತೆ ಕೊನೆಗೊಂಡಿತ್ತು. ಆದರೆ ಸುಳ್ಯದ ಮುಖಂಡರುಗಳು ತಮ್ಮ ನಿಲುವನ್ನು ಗಟ್ಟಿ ಪಡಿಸಿ ಸುಮಾರು 32 ದಿನಗಳ ಕಾಲ ನಿರಂತರವಾಗಿ ಭೋಜನ ವ್ಯವಸ್ಥೆಯನ್ನು ಕಲ್ಪಿಸುವ ತೀರ್ಮಾನವನ್ನು ಕೈಗೊಂಡು ಆ ದಿನದ ಪರಿಸಮಾಪ್ತಿ ಯನ್ನು ಇಂದು ಸುಳ್ಯ ಶಿವಕೃಪಾ ಕಲಾಮಂದಿರದ ಭೋಜನಶಾಲೆಯಲ್ಲಿ ವಿರಾಮವನ್ನು ಹಾಕಲಾಯಿತು. ಮೊದಲಿಗೆ ಕೇವಲ ಮೂರು ದಿನಗಳ ಪ್ರಯೋಜಿಕ ಕಾರ್ಯ ಕ್ರಮವಾಗಿ ತೆಗೆದುಕೊಂಡ ಎಂಬಿ ಫೌಂಡೇಶನ್ ವತಿಯಿಂದ ನಡೆದ ಕಾರ್ಯಕ್ರಮವು ಮುಂದುವರೆದಂತೆ ಕಾರ್ಮಿಕ ಸಂಘಟನೆಗಳ ಸಹಕಾರವನ್ನು ಪಡೆದು ದಾನಿಗಳ ಸಹಕಾರದಿಂದ ಅದನ್ನು ಹೆಚ್ಚಿಸಿಕೊಳ್ಳುತ್ತಾ 32ನೇ ದಿನದಲ್ಲಿ ಅಂತ್ಯಗೊಳಿಸಲಾಯಿತು.

ಇದರ ಅಂಗವಾಗಿ ಇಂದು ಶಿವಕೃಪ ಕಲಾಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಉದ್ದೇಶ ಮತ್ತು ನಡೆದು ಬಂದ ಹಾದಿಯ ಬಗ್ಗೆ ವಿವರಿಸಿದ ಕಾರ್ಯಕ್ರಮದ ಸಂಯೋಜಕ ಎಂಬಿ ಫೌಂಡೇಶನ್ ಅಧ್ಯಕ್ಷ ಎಂಬಿ ಸದಾಶಿವ ಮಾತನಾಡಿ, ಈ ಒಂದು ಕಾರ್ಯಕ್ರಮವು ಇಷ್ಟು ನಿರಾಳವಾಗಿ ನಡೆದು ಬರಲು ಕಟ್ಟಡ ಕಾರ್ಮಿಕ ಸಂಘದ ಐಕ್ಯತೆ ಮತ್ತು ಬಡವರ ಬಗ್ಗೆ ಅವರಲ್ಲಿರುವ ಕಾಳಜಿಯಿಂದ ಸಾಧ್ಯವಾಗಿದೆ. ಕಾರ್ಯಕ್ರಮಕ್ಕೆ ಸುಳ್ಯದ ದಾನಿಗಳು ಮತ್ತು ಪೊಲೀಸ್ ಇಲಾಖೆಯಿಂದ ಸಂಪೂರ್ಣವಾದ ಸಹಕಾರವನ್ನು ನೀಡಿರುತ್ತಾರೆ. ಸರಕಾರದಿಂದ ಯಾವ ನೆರವು ನಮಗೆ ಸಿಗಲಿಲ್ಲ ಆದರೆ ಅದರ ಬಗ್ಗೆ ನಮಗೆ ಬೇಸರವೂ ಇಲ್ಲ ಕಾರಣ ಅಧಿಕಾರಿಗಳಿಗೆ ತಮ್ಮದೇ ಆದ ನಿಯಮಗಳು ಮತ್ತು ಅದರ ವ್ಯಾಪ್ತಿಗಳು ಇರುವ ಕಾರಣ ಅವರ ಸಹಕಾರ ಇಲ್ಲಿ ನಮಗೆ ಲಭಿಸಲು ಸಾಧ್ಯವಾಗಲಿಲ್ಲ ಎಂದು ನಾವು ತಿಳಿದಿರುತ್ತೇವೆ ಎಂದರು. ಕೆಲವರಂತೂ ಈ ಕಾರ್ಯಕ್ರಮದ ಬಗ್ಗೆ ಪ್ರಶ್ನೆ ಮಾಡಿದ್ದು ಇದೆ. ಆದರೆ ಇಲ್ಲಿ ಬೇರೆ ಬೇರೆ ಊರಿನ ಬೇರೆ ಬೇರೆ ರಾಜ್ಯಗಳ ಕಾರ್ಮಿಕರು ನಿರಾಶ್ರಿತರು ಜೀವನೋಪಾಯಕ್ಕೆ ಯಾವುದೇ ದಾರಿಕಾಣದೆ ಸಂಕಷ್ಟ ಪರಿಸ್ಥಿತಿಯಲ್ಲಿ ಇದ್ದಾಗ ಅಂತಹ ಸಂದರ್ಭದಲ್ಲಿ ನಮ್ಮ ಸಂಘಟನೆಯ ವತಿಯಿಂದ ಅವರಿಗೆ ಸಹಕಾರವನ್ನು ನೀಡುವಲ್ಲಿ ಯಶಸ್ವಿಯಾಗಿದೆ.

ಕನಿಷ್ಠ 380 ರಿಂದ ಆರಂಭಗೊಂಡ ಭೋಜನ ವ್ಯವಸ್ಥೆಯು ಗರಿಷ್ಠ 800 ಕ್ಕೂ ಹೆಚ್ಚು ಫಲಾನುಭವಿಗಳು ಇದರ ಪ್ರಯೋಜನವನ್ನು ಪಡೆದಿರುತ್ತಾರೆ. ಪ್ರಾರಂಭದಿಂದ ಇಂದಿನವರೆಗೆ ಸುಮಾರು 50ಸಾವಿರ ಕ್ಕೂ ಹೆಚ್ಚು ಭೋಜನ ವ್ಯವಸ್ಥೆಯನ್ನು ನೀಡುವಲ್ಲಿ ನಾವು ಯಶಸ್ವಿಯನ್ನು ಕಂಡಿದ್ದೇವೆ. ಉತ್ತಮವಾದ ಗುಣಮಟ್ಟದ ಮತ್ತು ಪೌಷ್ಟಿಕಾಂಶವಿರುವ ಆಹಾರ ಪದಾರ್ಥಗಳನ್ನು ನಾವು ನೀಡಿರುತ್ತೇವೆ. ಎಲ್ಲಾ ಕಾರ್ಯಕ್ರಮಕ್ಕೆ ಸುಳ್ಯದ ವಿವಿಧ ಸಂಘಟನೆಯ ನೇತಾರರು ದಾನಿಗಳ ನೆರವಿನಿಂದ ಮಾಡಲು ಸಾಧ್ಯವಾಗಿದೆ. ಹಾಗೂ ಮುಂದಿನ ದಿನಗಳಲ್ಲಿ ಆಡಳಿತ ವರ್ಗದವರಿಗೆ ಇಚ್ಛಾಶಕ್ತಿ ಇದ್ದರೆ ಇದನ್ನು ಮುಂದುವರಿಸಲು ಅವಕಾಶವಿದೆ ಎಂದು ಅವರು ಹೇಳಿದರು.


ಇದೇ ಸಂದರ್ಭದಲ್ಲಿ ಮಾತನಾಡಿದ ಈ ಕಾರ್ಯಕ್ರಮದ ಆಯೋಜಕರಲ್ಲಿ ಓರ್ವರಾದ ಸುಳ್ಯ ತಾಲೂಕು ಸಿಐಟಿಯು ಇದರ ಅಧ್ಯಕ್ಷ ಜೋನಿ ಕಲ್ಲುಗುಂಡಿ ಅವರು ಮಾತನಾಡಿ ಈ ಒಂದು ಕಾರ್ಯಕ್ರಮವನ್ನು ಮಾಡಲು ನಾವು ಮಾತನಾಡುತ್ತಿರುವ ಸಂದರ್ಭದಲ್ಲಿ ಸುಮಾರು 250ಕ್ಕೂ ಹೆಚ್ಚು ಕಾರ್ಮಿಕರು ನನ್ನ ಫೋನಿನಲ್ಲಿ ಮೆಸೇಜುಗಳನ್ನು ಮಾಡಲು ಪ್ರಾರಂಭಿಸಿದರು. ಭಾರತ ಲಾಕ್ ಡೌನ್ ಹಿನ್ನೆಲೆಯಲ್ಲಿ ಜೀವನಕ್ಕೆ ಕಷ್ಟವಾಗಿದೆ. ನಮ್ಮ ಮನೆಯಲ್ಲಿ ಮಕ್ಕಳಿಗೆ ಆಹಾರವನ್ನು ಒದಗಿಸುವುದು ಕೂಡ ಕಷ್ಟದ ವಿಷಯ .ತಾವುಗಳು ಇದಕ್ಕೆ ಪರ್ಯಾಯ ಮಾರ್ಗವಾಗಿ ಏನಾದರೊಂದು ಕಲ್ಪಿಸಿಕೊಡಬೇಕೆಂದು ವಿನಂತಿಸಿಕೊಂಡ ಹಿನ್ನೆಲೆಯಲ್ಲಿ ಈ ಒಂದು ಕಾರ್ಯಕ್ರಮವನ್ನು ಮಾಡಲು ನಮಗೆ ಸ್ಫೂರ್ತಿ ತುಂಬಲು ಸಾಧ್ಯವಾಯಿತು. ಇದೇ ಸಂದರ್ಭದಲ್ಲಿ ನಮ್ಮ ಎಲ್ಲಾ ಕಾರ್ಮಿಕ ಮುಖಂಡರೊಂದಿಗೆ ಚರ್ಚಿಸಿ ಎಂಬಿ ಫೌಂಡೇಶನ್ ನೊಂದಿಗೆ ಕೈಜೋಡಿಸಲು ತೀರ್ಮಾನ ತೆಗೆದುಕೊಂಡೆವು. ಇದಕ್ಕೆಲ್ಲ ಮೂಲ ಕಾರಣ ಸುಳ್ಯದ ಜನತೆಯು ಹೃದಯವಂತರು ತಾವಾಗಿ ಬಂದು ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಕಾರಣ ಇಷ್ಟು ಯಶಸ್ವಿಯಾಗಿ ಇಲ್ಲಿಯವರೆಗೆ ಮುಂದುವರೆಯಲು ಸಾಧ್ಯವಾಗಿದೆ .ಆದರೆ ನಮ್ಮ ಸ್ಥಳೀಯ ಶಾಸಕರು ಒಮ್ಮೆ ಯೂ ಬಾರದೇ ಇದ್ದದ್ದು ಬೇಸರವನ್ನು ತಂದಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.

ಸಂಸದ ನಳಿನ್ ಕುಮಾರ್ ಕಟೀಲ್, ದ ಕ ಜಿಲ್ಲಾ ಮಾಜಿ ಉಸ್ತುವಾರಿ ಸಚಿವ ಯುಟಿ ಖಾದರ್, ವಿಧಾನಪರಿಷತ್ ಸದಸ್ಯರಾದ ಐವನ್ ಡಿಸೋಜ , ಹರೀಶ್ ಕುಮಾರ್, ಕಾಂಗ್ರೆಸ್ ನ ಹಿರಿಯ ಮುಖಂಡ ಲೋಬೋ, ಮೊದಲಾದ ಜನಪ್ರತಿನಿಧಿಗಳು ಭೋಜನ ಗ್ರಹಕ್ಕೆ ಸಂದರ್ಶನ ನೀಡಿ ಸಹಕಾರವನ್ನು ನೀಡಿದ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

ಈ ಒಂದು ಕಾರ್ಯಕ್ರಮವು ಕೇವಲ ಭೋಜನ ವ್ಯವಸ್ಥೆಗೆ ಸೀಮಿತಗೊಳಿಸದೆ ಹಲವಾರು ರೋಗಿಗಳಿಗೆ ಮತ್ತು ಬಡವರಿಗೆ ಸಹಕಾರ ನೀಡುವಲ್ಲಿ ಕೂಡ ಸಂಘಟನೆಯು ಉತ್ತಮ ಕಾರ್ಯನಿರ್ವಹಿಸಿದೆ ಎಂದು ಈ ಸಂದರ್ಭದಲ್ಲಿ ಸಂಘಟಕರು ತಿಳಿಸಿದರು.


ಕಾರ್ಯಕ್ರಮಕ್ಕೆ ಹಗಲಿರುಳೆನ್ನದೆ ಸೇವೆಯನ್ನು ಸಲ್ಲಿಸಿ ಆಹಾರ ಪದಾರ್ಥಗಳನ್ನು ತಯಾರಿಸಲು ಶ್ರಮಿಸಿದ ವೆಂಕಟೇಶ ಭಟ್ಟ್, ಸ್ಥಳ ದಾನವನ್ನು ನೀಡಿದ ಹರೀಶ್ ಭಟ್, ಭೋಜನ ವ್ಯವಸ್ಥೆಯ ಲೆಕ್ಕಪತ್ರವನ್ನು ವಹಿಸಿಕೊಂಡಿದ್ದ ಸುಳ್ಯ ತಾಲೂಕು ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಬಿಜು ಅಗಸ್ಟೀನ್, ಸುಳ್ಯ ತಾಲೂಕು ಕಟ್ಟಡ ಕಾರ್ಮಿಕ ಸಂಘಟನೆ ಅಧ್ಯಕ್ಷ ನಾಗರಾಜ ಮೇಸ್ತ್ರಿ ಜಯನಗರ, ಸುಳ್ಯ ತಾಲೂಕು ಕೋವಿಡ್ ವಾರಿಯರ್ ಪಡೆಯಲ್ಲಿ ಸೇವೆಸಲ್ಲಿಸಿದ ವೈದ್ಯಾಧಿಕಾರಿ ಡಾಕ್ಟರ್ ಭಾನುಮತಿ ರವರನ್ನು ಫಲಪುಷ್ಪ ನೀಡಿ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕಾರ್ಮಿಕ ಸಂಘಟನೆಯಲ್ಲಿ ದುಡಿಯುತ್ತಿರುವ ಹಾಗೂ ಈ ಕಾರ್ಯಕ್ರಮಕ್ಕೆ ಒಂದೊಂದು ದಿನದ ಭೋಜನ ವ್ಯವಸ್ಥೆಯನ್ನು ನೀಡಿದ ಮಂಜುನಾಥ್ ಬಳ್ಳಾರಿ ಕನ್ಸ್ಟ್ರಕ್ಷನ್ಸ್, ವೆಂಕಟೇಶ ನಾವಿ, ನೆಲ್ಸನ್ ಹಳೆಗೇಟು, ಶಿಲ್ಪ ಆಚಾರ್ಯ, ಸಹಕರಿಸಿದ ನ ಪಂ ಸದಸ್ಯರಾದ ಶರೀಫ್ ಕಂಠಿ, ವೆಂಕಪ್ಪ ಗೌಡ, ಸುಳ್ಯ ಪೊಲೀಸ್ ಠಾಣಾ ಮುಖ್ಯ ಅಧಿಕಾರಿ ಹರೀಶ್ ಎಂ ಆರ್, ವಿವೇಕ ಜಾಗೃತ ಬಳಗದ ಸದಸ್ಯರು, ಹಾಗೂ ಈ ಕಾರ್ಯಕ್ರಮಕ್ಕೆ ಸಂಪೂರ್ಣವಾಗಿ ಸಹಕರಿಸಿದ ಕಟ್ಟಡ ಕಾರ್ಮಿಕ ಸಂಘದ ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು.

ವರದಿ : ಹಸೈನಾರ್ ಜಯನಗರ

Leave A Reply

Your email address will not be published.