ಫಲ್ಗುಣಿ ನದಿಯಲ್ಲಿ ಸತ್ತು ತೇಲಿವೆ ಮೀನುಗಳು | ನದಿಗೆ ಪದೇ ಪದೇ ವಿಷ ಹಾಕುವವರು ಯಾರು?

ಬೆಳ್ತಂಗಡಿ: ಕಿಡಿಗೇಡಿಗಳು ಫಲ್ಗುಣಿ ನದಿಗೆ ತಾಲೂಕಿನ ವೇಣೂರು ಸಮೀಪದ ಮೂಡುಕೋಡಿ ಗ್ರಾಮ ನಡ್ತಿಕಲ್ಲಿನ ದಾಡೇಲು ಎಂಬಲ್ಲಿ ವಿಷ ಹಾಕಿರುವ ಕಾರಣ ಸಾವಿರಾರು ಮೀನುಗಳು ನೀರಲ್ಲಿ ಸತ್ತು ತೇಲಿ ಕೊಂಡಿವೆ.

ನದಿಯ ತಟದಲ್ಲಿ ಸಾವಿರಾರು ಮೀನುಗಳು ಸತ್ತು ಬಿದ್ದಿದ್ದು ಮತ್ತೊಂದಷ್ಟು ತೇಲಿಕೊಂಡು ನಿಂತಿವೆ. ಸುತ್ತಮುತ್ತಲ ಪರಿಸರ ದುರ್ನಾತ ಬೀರುತ್ತಿದೆ. ಈ ವಿಷಯುಕ್ತ ನದಿಯ ನೀರನ್ನು ಪ್ರಾಣಿ, ಪಕ್ಷಿಗಳಂತಹ ಅನೇಕ ಜೀವಿಗಳು ಸೇವಿಸುವುದರಿಂದ ಅವುಗಳಿಗೂ ಪ್ರಾಣಸಂಕಟ ಸಿಲುಕುವ ಸಾಧ್ಯತೆ ಇದೆ. ಅದೇ ರೀತಿ ಕೆಲವು ಹಕ್ಕಿಗಳು ಸತ್ತು ಹೋಗಿರುವ ವಿಷಯುಕ್ತ ಮೀನುಗಳನ್ನು ತಿನ್ನುವುದರಿಂದ ಆ ಪಕ್ಷಿಗಳು ಸಾವನ್ನಪ್ಪಬಹುದು.

ಕಿಡಿಗೇಡಿಗಳ ಈ ಕೃತ್ಯಕ್ಕೆ ಸ್ಥಳೀಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸ್ಥಳೀಯ ಕೆಲವು ವ್ಯಕ್ತಿಗಳ ಮೇಲೆ ಅನುಮಾನ ಇದೆ. ನದಿಯಲ್ಲಿ ನೀರು ಕಡಿಮೆ ಇರುವ ಕಾರಣ ಮೀನು ಹಿಡಿಯಲು ಮೈಲ್ ತುತ್ತನ್ನು ನೀರಿನಲ್ಲಿ ಬೆರೆಸಿರಬಹುದೆಂದು ಸ್ಥಳೀಯರು ತಿಳಿಸಿದ್ದಾರೆ .ಅದೇ ರೀತಿ ನಿನ್ನೆ ಈ ಘಟನೆ ಬಗ್ಗೆ ವೇಣೂರು ಪೊಲೀಸ್ ಠಾಣೆಯ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಪೊಲೀಸರು ಇದನ್ನು ನಿರ್ಲಕ್ಷಿಸಿದ್ದು ಸ್ಥಳೀಯರನ್ನು ಮತ್ತಷ್ಟು ಆಕ್ರೋಶಭರಿತರನ್ನಾಗಿಸಿದೆ.

ಈ ಬಗ್ಗೆ ಶಾಸಕ ಹರೀಶ್ ಪೂಂಜ ಗಮನಕ್ಕೆ ತಂದ ಸ್ಥಳೀಯರಿಗೆ ಸೂಕ್ತ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸುವುದಾಗಿ ಶಾಸಕರು ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.