ಕಳೆದುಕೊಳ್ಳುವಾಗ ಪಡೆದುಕೊಂಡದ್ದು!!!

ಬಾಲ್ಯದ ದಿನಗಳಲ್ಲಿ ನಾವೇನಾದರು ಆಡಬಾರದ ಮಾತುಗಳನ್ನು ಹೇಳಿದಾಗ ಅಮ್ಮ ಗದರಿದ್ದುಂಟು. ”ಹಾಗೆ ಹೇಳ್ಬೇಡ ಆಕಾಶ ಮಾರ್ಗದಲ್ಲಿಓಡಾಡೊ ಅಸ್ತು ದೇವರು ಅಸ್ತು(ಹಾಗೆ ಆಗಲಿ) ಎಂದು ಹೇಳಿ ಬಿಟ್ಟರೆ ಹಾಗೆ ನಡೆಯುತ್ತದೆ” ಎಂದು. ಆಗ ಆ ಮಾತಿಗೆ ಹೆದರಿ ಇನ್ನೆಂದೂ ಅಂತಹ ಮಾತುಗಳನ್ನು ಆಡದೆ ಇದ್ದದ್ದು ಎಲ್ಲರಿಗೂ ನೆನಪಿದೆ.

ನಮ್ಮ ಬಾಯಿಯಿಂದ ಒಳ್ಳೆಯ ಮಾತುಗಳನ್ನೇ ಆಡಿಸಲು ಅಮ್ಮ ಕಂಡುಕೊಂಡ ಸೂತ್ರ ಇದಾಗಿತ್ತು ಎನ್ನುವ ಅರಿವು ಮೂಡಿದ್ದು ನಿಜವಾದರು ಇಂದ್ಯಾಕೋ ಅಮ್ಮ ಹೇಳಿದ ಅಸ್ತು ದೇವರು ಇದ್ದಾರೆನೋ ಅನ್ನೊ ಪ್ರಶ್ನೆ ಮತ್ತೆ ಮೂಡಿದ್ದಂತು ನಿಜ.
‘ಅಯ್ಯೋ ಭಾನುವಾರ ಯಾವಾಗ ಬರುತ್ತೋ,ಕೆಲ್ಸ ಮಾಡಿ ಮಾಡಿ ಸುಸ್ತಾಗಿದೆ,ಒಂದು ದಿನ ಆರಾಮಾಗಿ ಮನೆಲಿ ಇರ್ಬೇಕಪಾ’..; ‘ಕ್ಲಾಸ್ ಕೇಳಕ್ಕಾಗ್ತಿಲ್ಲ ನಾನು ಕ್ಲಾಸ್ ಬಂಕ್ ಮಾಡಿ ಮನೆಗೋಗ್ತೀನಿ..; ಜವಬ್ದಾರಿಗಳನ್ನೆಲ್ಲಾ ಹೆಗಲಿಗೇರಿಸಿಕೊಂಡು ಅವುಗಳನ್ನು ನಿಭಾಯಿಸಲು ಮನೆ ಬಿಟ್ಟು ಈ ದೂರದ ಊರಿಗೆ ಬಂದಿದ್ದೇನೆ, ಒಂದಷ್ಟು ದಿನ ಒಟ್ಟಿಗೆ ರಜೆ ಸಿಕ್ಕರೆ ಮನೆಗ್ಹೋಗ್ಬೇಕು, ಅಮ್ಮ ಮಾಡಿದ ಅಡುಗೆ ಊಟ ಮಾಡಿ ಕಣ್ಣು ತುಂಬ ಸುಖ ನಿದ್ರೆ ಮಾಡ್ಬೇಕು…’ಹೀಗೆ ನೂರು ಆಲೋಚನೆ ಕನಸುಗಳನ್ನು ಕಟ್ಟಿಕೊಂಡವರು ಒಬ್ಬಿಬ್ಬರಲ್ಲ.

ರಜೆ ಬೇಕು ಆರಾಮಾಗಿ ಮನೇಲೆ ಇರಬೇಕು ಎನ್ನುವುದು ನೂರಾರು ಮಂದಿಯ ಬಯಕೆ.ಬಹುಶಃ ಮನುಜನ ಈ ಎಲ್ಲಾ ಪ್ರಾರ್ಥನೆಗಳನ್ನು ಕೇಳಿ ಅಸ್ತು ದೇವನೆ ಅಸ್ತು ಹೇಳಿದನೇನೋ ಎಂದು ಈ ಪ್ರಸ್ತುತ ಸನ್ನಿವೇಶವನ್ನುನೋಡುವಾಗ ಅನಿಸುತ್ತದೆ. ಏನೇ ಆಗಲಿ ಇದೊಂದು ಒಳ್ಳೆಯ ವಿರಾಮ.ನಮ್ಮ ಮನೆಯಲ್ಲಿ ನಮ್ಮವರೊಂದಿಗೆ ಸಮಯ ಕಳೆಯಲು ಸಿಕ್ಕ ಸುವರ್ಣ ಅವಕಾಶ.
ಈ ಯಂತ್ರ ತಂತ್ರಗಳ ಭರಾಟೆಯ ಯುಗದಲ್ಲಿ ಮಾನವ ತಾನು ತನ್ನವರು ಎಂಬ ಸಂಬಂಧಗಳ ಬಗ್ಗೆಯೂ ಆಲೋಚನೆಯನ್ನು ಮಾಡದೆ ಓಟದ ಸ್ಪರ್ದೆಯಲ್ಲಿ ಎಲ್ಲರಿಗೂ ಅವರದೇ ಆದ ಚಿಂತೆ.

ನೆಮ್ಮದಿಯ ಮನೆ ನಮ್ಮೆಲ್ಲರ ಮನೆಗಿಂತಲೂ ಬಹಳ ದೂರ. ಇಲಾಸ್ಟಿಕ್ ಹೋದ ಚಡ್ಡಿಯನ್ನೋ ಸ್ಕಟರನ್ನೋ ನೂರು ಬಾರಿ ಮೇಲೆಳೆದುಕೊಂಡು ಸುತ್ತ-ಮುತ್ತಲಿನ ಮಕ್ಕಳೊಂದಿಗೆ ಆಡಿ ಬೆಳೆಯಬೇಕಿದ್ದ ಮಕ್ಕಳು, ಭವಿಷ್ಯದಲ್ಲಿ ಹಣ ಸಂಪಾದಿಸಲು ಅನುಕೂಲವಾಗುವ ಅದೆಷ್ಟೋ ಪರೀಕ್ಷೆಗಳನ್ನು ಬರೆಯುವುದಕ್ಕಾಗಿಯೇ ಅವರ ಅದ್ಭುತವಾದ ಬಾಲ್ಯವನ್ನು ವ್ಯಯಿಸುತ್ತಿದ್ದರೆ; ಇತ್ತ ತಂದೆ-ತಾಯಿ ಮಕ್ಕಳ ಭವಿಷ್ಯವನ್ನು’ಸೆಕ್ಯೂರ್’ ಮಾಡುವ ನೆಪದಲ್ಲಿಒಂದರೆಕ್ಷಣವೂ ವಿರಾಮವಿಲ್ಲದೆ ದುಡಿಯುತ್ತಿದ್ದಾರೆ. ಇದು ಒಬ್ಬಿಬ್ಬರ ಕಥೆಯೂ ಅಲ್ಲ, ಅತಿಶಯೋಕ್ತಿಯೂಅಲ್ಲ. ಇಂತಹ ಒಂದು ಒತ್ತಡದ ಬದುಕನ್ನು ಪ್ರೀತಿಸುವವರು ಬೆರಳೆಣಿಕೆಯ ಮಂದಿಯೂಇಲ್ಲ, ಹಾಗಾದರೆ ಯಾಕಿದು ಬೇಕು ಎಂದರೆ ಅನಿವಾರ್ಯ.

ಪ್ರಸ್ತುತ ಸಮಾಜದಲ್ಲಿ ಗೌರವದಿಂದ ಬದುಕಬೇಕೆಂದರೆ ಈ ಪೈಪೋಟಿ ಅನಿವಾರ್ಯವಾಗಿಬಿಟ್ಟಿದೆ.
ಹೀಗೆ ಕಾಲಿಗೆ ಚಕ್ರಕಟ್ಟಿ ಬ್ರೇಕಿಲ್ಲದೆ ಓಡುತ್ತಿದ್ದ ಭರಾಟೆಯ ಬದುಕಿಗೊಂದು ಸಣ್ಣ ವಿರಾಮ ಸಿಕ್ಕಿದಂತಾಗಿದೆ.ಎಲ್ಲರೂ ಬಯಸಿದ ಬದುಕನ್ನು ಅನುಭವಿಸಲು ಇದು ಸರಿಯಾದ ಸಮಯ. ಹೌದು ನಾವು ಬಯಸಿದಂತೆ ಹೊರಗೆ ಹೋಗಲು ಸಾಧ್ಯವಿಲ್ಲ, ಆದರೆ ನಮ್ಮ ನೋವು ನಲಿವಲ್ಲಿ ಜೊತೆಯಾಗಿ ನಮ್ಮ ಏಳ್ಗೆಗಾಗೆ ಪರಿತಪಿಸುವ ಮತ್ತು ಪರಿಶ್ರಮಿಸುವ ನಮ್ಮವರಿಗಾಗಿ ಅದೆಷ್ಟೋ ಕಾಲದಿಂದ ನೀಡಲಾಗದಿದ್ದ ಸಮಯವನ್ನುಇಂದು ನೀಡಬಹುದಾಗಿದೆ.
ಅಂದು ಬಯಲಿನ ಅಥವಾ ಒಂದು ವಠಾರದ ಮಕ್ಕಳೆಲ್ಲಾ ಜೊತೆಯಾಗಿ ಸೇರಿ, ಗಲ್ಲಿಗಳಲ್ಲಿ ಕ್ರಿಕೆಟ್, ಲಗೋರಿ ಮೊದಲ್ಗೊಂಡು ಅದೆಷ್ಟೋ ಆಟಗಳನ್ನು ಆಡುತ್ತಿದ್ದರು.ಅವೆಲ್ಲ ಅವರ ಬಾಲ್ಯವನ್ನು ಪರಿಪೂರ್ಣಗೊಳಿಸುತ್ತಿದ್ದವು. ಈ ಎಲ್ಲಾ ಆಟಗಳು ಮಕ್ಕಳಿಗೆ ಸಹಬಾಳ್ವೆ ಹೊಂದಾಣಿಕೆಯಂತಹ ಅದೆಷ್ಟೋ ಜೀವನ ಪಾಠಗಳನ್ನು ಕಲಿಸಿದ್ದುಂಟು.ಆದರೆ ಇಂದು ಮಕ್ಕಳಿಗೆ ಆಟ ಎಂದರೆ ಕೇವಲ ಮೊಬೈಲ್ ಕಂಪ್ಯೂಟರ್ ಗಳಲ್ಲಿ ಸಿಗುವ ಗೇಮ್ಗಳಿಗೆ ಸೀಮಿತವಾಗಿದೆ.

ಒಂದೇ ಸ್ಥಳದಲ್ಲಿ ಕುಳಿತು ಮಾತು ಇಲ್ಲ ಕಥೆಯೂ ಇಲ್ಲದೆ ಆಡುವ ಆಟಗಳು ಯಾವ ಜೀವನ ಮೌಲ್ಯಗಳನ್ನು ಹೇಳಿ ಕೊಡಲು ಸಾಧ್ಯ. ಅದೆಷ್ಟೋ ಬಾರಿ ಪಾಲಕರೆ ವ್ಯಥೆಪಟ್ಟುಕೊಳ್ಳುತ್ತಾರೆ, “ನಮ್ಮ ಬಾಲ್ಯಅದೆಷ್ಟು ಸೊಗಸಾಗಿತ್ತು.ಆದರೆ ನಮ್ಮ ಮಕ್ಕಳಿಗೆ ಅದರ ಪರಿಕಲ್ಪನೆಯೂಇಲ್ಲವಲ್ಲ”ಎಂದು. ಹಾಗೆಂದು ಅಂತಹ ವಾತಾವರಣವನ್ನು ಸೃಷ್ಟಿಸಿಕೊಡುವುದು ಅವರಿಗೆಅಸಾಧ್ಯದ ಮಾತೇ ಆಗಿತ್ತು. ಆದರೆ ಇದೀಗ ‘ಲಾಕ್ಡೌನ್’ ನೆಪದಿಂದ ಅದೆಷ್ಟೋ ಮಂದಿ ಪಟ್ಟಣ ತೊರೆದು ತಮ್ಮ ಮೂಲ ಮನೆಗಳಿಗೆ ಹೋಗಿದ್ದಾರೆ.ಪ್ರಕೃತಿಯ ಮಧ್ಯೆ, ಪಟ್ಟಣದ ಜಂಜಾಟದಿಂದ ದೂರ ಇರುವ ಈ ಊರುಗಳು ಮತ್ತೆ ಮಕ್ಕಳಿಗೆ ಬದುಕಿನ ಪಾಠವನ್ನು ಕಲಿಸುವ ಅದೆಷ್ಟೋ ಆಟಗಳನ್ನು ಪರಿಚಯಿಸುತ್ತಿದೆ.ಕೂಡು ಕುಟುಂಬದ ಸವಿಯನ್ನು ಉಣ ಬಡಿಸುತ್ತಿದೆ. ಸಂಬಂಧ ಅನುಬಂಧಗಳ ಅರಿವನ್ನು ಮೂಡಿಸುತ್ತಿದೆ,ಜೊತೆಗೆ ದೊಡ್ಡವರಿಗೂ ಅವರ ಬಾಲ್ಯದ ಆ ಎಲ್ಲಾ ಮಧುರ ಕ್ಷಣಗಳನ್ನು ಮೆಲುಕು ಹಾಕುವ ಸುಯೋಗವನ್ನು ಕಲ್ಪಿಸುತ್ತಿದೆ.ಧೂಳು ಹಿಡಿದು ಹೋಗಿದ್ದ ಅವೆಷ್ಟೋ ಪುಸ್ತಕಗಳ ಪುಟಗಳನ್ನು ತಿರುವಿ ನಮ್ಮಜ್ಞಾನ ಭಂಡಾರವನ್ನು ಹೆಚ್ಚಿಸಿಕೊಳ್ಳಲು ಅವಕಾಶ ಸೃಷ್ಟಿಯಾಗಿದೆ.

ಅಲ್ಲದೆ ಇಂದು ಬೆಳೆದು ನಿಂತಿರುವ ತಂತ್ರಜ್ಞಾನಗಳು ಕುಳಿತಲ್ಲೇ ಅದೆಷ್ಟೋ ವಿದ್ಯೆಗಳನ್ನು ಕರಗತ ಮಾಡಿಕೊಳ್ಳಲು ಅನುಕೂಲವಾಗಿವೆ. ಹೀಗಿರುವಾಗ ನಾವು ಹೊಸತೇನನ್ನೋ ಈ ಸಂದರ್ಭದಲ್ಲಿ ಕಲಿಯಬಹುದು. ಎಲ್ಲಾ ಬಿಟ್ಟು ಮೂರು ಹೊತ್ತು ಚೆನ್ನಾಗಿ ಉಂಡು ಹಾಯಾಗಿ ಮಲಗಬೇಕು ಎಂದು ಬಯಸಿದವರಿಗೂ ಇದೊಂದು ಸದಾವಕಾಶ.

ವಿಧಿಯ ಬರಹವನ್ನು ಹಳಿಯುತ್ತಾ ಕಾಲ ಹರಣ ಮಾಡುವ ಬದಲು ನಮ್ಮೆಲ್ಲರ ಆಶೋತ್ತರಗಳನ್ನು ಈಡೇರಿಸುವಲ್ಲಿ ದೊರಕಿದ ಈ ಸಮಯವನ್ನು ವಿನಿಯೋಗಿಸಿಕೊಳ್ಳೋಣ.ಜೊತೆಗೆ ಜನಹಿತಕ್ಕಾಗಿ ಸರಕಾರ ನೀಡುವ ಆದೇಶಗಳನ್ನು ಪಾಲಿಸೋಣ. ನಮ್ಮರಕ್ಷಣೆಗೆ ಬೇಕಾದ ಕ್ರಮಗಳನ್ನು ಸೂಕ್ತವಾಗಿ ಕೈಗೊಳ್ಳುತ್ತಾ ಜವಾಬ್ದಾರಿಯುತ ಪ್ರಜೆಯಾಗಿ ನೆಮ್ಮದಿಯಿಂದ ಬಾಳೋಣ.
ಸವೇಜನಾಃ ಸುಖಿನೋ ಭವಂತು.

?✒ಸಾಯಿ ಶ್ರೀಪದ್ಮ.ಡಿ.ಎಸ್

Leave A Reply

Your email address will not be published.