ಫ್ಯಾಶನ್ ಎಂಬ ಮಾಯೆಯಲ್ಲಿ ಬೀಳದಿರಿ…

ಫ್ಯಾಶನ್ ಅನ್ನೋದು ತಪ್ಪಲ್ಲ. ಅದು ನಮ್ಮ ಬದುಕಿಗೆ ಪೂರಕವಾಗಿ ಹುಟ್ಟಿಕೊಂಡಿರುವುದು. ಇಂದಿನದು ಫ್ಯಾಷನ್ ಯುಗ ಇದು ಎಲ್ಲರೂ ಹೇಳುವ ಸಾಮಾನ್ಯವಾದ ಮಾತು. ಫ್ಯಾಷನ್ ಪರೇಡ್, ಸೌಂದರ್ಯ ಸ್ಪರ್ಧೆ, ಇವೆಲ್ಲಾ ಭಾರತ ದೇಶಕ್ಕೆ ಪಾಶ್ಚಿಮಾತ್ಯ ಸಂಸ್ಕೃತಿಯಿಂದ ದೊರೆತ ಗಿಫ್ಟ್ ಎನ್ನಬೇಕು ಅಷ್ಟೇ.

ಆಧುನಿಕ ಯುಗದಲ್ಲಿ ಬದುಕಲು ಯುವಜನತೆ ನಮ್ಮ ಸಂಸ್ಕೃತಿಯನ್ನು ಬಿಟ್ಟು ಪಾಶ್ಚಿಮಾತ್ಯ ಸಂಸ್ಕೃತಿಯತ್ತ ಮುಖ ಮಾಡುತ್ತಿದ್ದಾರೆ.

ಇಲ್ಲಿ ಫ್ಯಾಶನ್ ಎಂಬುದು ಪ್ರದರ್ಶನಕ್ಕೆ, ತೋರಿಕೆಗೆ, ಆಡಂಬರಕ್ಕೆ ಸಂಬಂಧಿಸಿದ್ದು ಮಾತ್ರವಲ್ಲದೆ, ವಸ್ತು ಧಾರಣೆ, ಆಹಾರ ಪದ್ಧತಿಯಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿ ನಮ್ಮೆಲ್ಲರ ಮೇಲೆ ಅಗಾಧ ಪ್ರಭಾವ ಬೀರಿದೆ.

ಕೆಲವರಿಗಂತೂ ಅಲಂಕಾರದ ಹುಚ್ಚು ಹೆಚ್ಚಾಗಿ ಕೇಶವಿನ್ಯಾಸ, ಮುಖಕ್ಕೆ ನಾನಾಬಗೆಯ ಕ್ರೀಂ, ಪೌಡರ್, ತುಟಿಗೆ ಲಿಪ್ ಸ್ಟಿಕ್, ಸುಗಂಧದ್ರವ್ಯ ಇಂಥವುಗಳಿಗೆ ಹೆಚ್ಚು ಹೆಚ್ಚು ಆದ್ಯತೆ ಕೊಡುವುದು ಕಾಣುತ್ತಿದ್ದೇವೆ.

ಈಗಿನ ಕಾಲದಲ್ಲಂತೂ ಬುದ್ಧಿವಂತಿಕೆ ಗಿಂತ ಹೆಚ್ಚಿನ ಬೆಲೆ ಸೌಂದರ್ಯಕ್ಕೆ ಸಿಗುವುದರಿಂದ ಅದೆಷ್ಟೋ ಜನ ಸೌಂದರ್ಯವನ್ನು ದುರುಪಯೋಗ ಪಡಿಸಿಕೊಂಡದ್ದು ಇದೆ.ಈಗಂತೂ ಮಕ್ಕಳಿಗೆ ಟಿವಿಯಲ್ಲಿ ಬರುವ ಬಗೆ ಬಗೆಯ ತಿಂಡಿಗಳು, ಪಾನೀಯಗಳು, ವಿವಿಧ ಬಗ್ಗೆ ಗೊಂಬೆಗಳು ಇವುಗಳು ಫ್ಯಾಶನ್ ಗಳಾದರೆ ಯುವಕರಿಗೆ ಬೈಕು, ಕಾರು ಗಳ ಮೇಲೆ ಫ್ಯಾಶನ್.

ಹುಡುಗಿಯರಂತೂ ಮ್ಯಾಚಿಂಗ್ ಮ್ಯಾಚಿಂಗ್ ಡ್ರೆಸ್ ಗಳು, ವಿವಿಧ ವಿನ್ಯಾಸದ ಚಪ್ಪಲಿಗಳು, ನನ್ನ ಬಣ್ಣದ ನೇಲ್ ಪಾಲಿಶ್ ಗಳ ಮೇಲೆ ಫ್ಯಾಶನ್.ಫ್ಯಾಶನ್ ನಿಂದ ನಮ್ಮ ಹಿರಿಯರು ಕೂಡ ಹೊರತಾಗಿಲ್ಲ ನಮ್ಮ ಅಜ್ಜ ಅಜ್ಜಿಯಂದಿರು ತಮ್ಮ ತಲೆಗೆ ಡೈ ಹಾಕಿಕೊಂಡು ಯುವಕ-ಯುವತಿಯರಂತೆ ಕಾಣಲು ಪ್ರಯತ್ನಿಸುತ್ತಿರುವುದು ಸುಳ್ಳಲ್ಲ.

ಇನ್ನು ಕೆಲವರಿಗಂತೂ ಮನೆಯಲ್ಲಿ ಕೆಲಸ ಮಾಡಲು ಸಾದ್ಯ ಆಗದಿದ್ದರೂ ದೊಡ್ಡ ದೊಡ್ಡ ಮಾಲ್ ಗಳಲ್ಲಿ ಸುತ್ತಾಡುತ್ತಾ, ಶಾಪಿಂಗ್ ಮಾಡುತ್ತಾ, ವಿದೇಶಿ ಆಹಾರಗಳನ್ನು ಸೇವಿಸುತ್ತಾ ಕುಶಿ ಪಡುವುದು ಇನ್ನೊಂದು ರೀತಿಯ ಫ್ಯಾಷನ್ .ಫ್ಯಾಶನ್ ಗೆ ಮುಖ್ಯವಾಗಿ ಕ್ರೀಡಾ ತಾರೆಯರು, ಸಿನಿಮಾ ನಟ-ನಟಿಯರು, ಮಾಡಲಿಂಗ್ ತಾರೆಗಳು ಕೊಡುವ ಜಾಹಿರಾತುಗಳು ಬಹಳ ಪ್ರಭಾವ ಬೀರುತ್ತವೆ ದಿನಬೆಳಗಾಗುವುದರೊಳಗೆ ಅವರು ಉಪಯೋಗಿಸಿದ ಬ್ರಾಂಡ್ ನ ವಸ್ತುಗಳು ಫ್ಯಾಷನ್ ಆಗಿಬಿಡುತ್ತವೆ.ಫ್ಯಾಶನ್ ಎನ್ನುವಂತಹದ್ದು ದಿನದಿನಕ್ಕೆ ಝಣಝಣಿಸುತ್ತಾ ವೇಗವಾಗಿ ಬೆಳೆಯುತ್ತಿದೆ. ಈ ದೆಸೆಯಲ್ಲಿ ಮಾಧ್ಯಮಗಳು ಕೂಡ ಫ್ಯಾಷನ್ ಆಗಿಬಿಟ್ಟಿವೆ.

ಫ್ಯಾಶನ್ ಎಂಬುದು ಎಲ್ಲರೊಳಗೂ ಇರುತ್ತದೆ. ಇರಲೇಬೇಕು. ನಾವು ಉತ್ತಮವಾದ ಬಟ್ಟೆ ಹಾಕಲು ಕಾರಣ ನಾವು ಚಂದವಾಗಿ ಕಾಣಬೇಕು ಎಂಬ ಉದ್ದೇಶದಿಂದ. ಹಾಗಾಗಿ ಫ್ಯಾಶನ್ ಮಾಡುವುದು ತಪ್ಪಲ್ಲ.

ಅತಿಯಾದರೆ ಅಮೃತವೂ ವಿಷ ಎನ್ನುವ ಹಾಗೇ ಫ್ಯಾಶನ್ ಪ್ರಪಂಚದಲ್ಲಿ ಮುಳುಗಿ ಬದುಕನ್ನು ಹಾಳು ಮಾಡಿಕೊಳ್ಳಬಾರದು ಅಷ್ಟೇ.

-ಸಂದೀಪ್.ಎಸ್.ಮಂಚಿಕಟ್ಟೆ ,ಪ್ರಥಮ ಪತ್ರಿಕೋದ್ಯಮ ವಿಭಾಗ ವಿವೇಕಾನಂದ ಕಾಲೇಜು ಪುತ್ತೂರು.

Leave A Reply

Your email address will not be published.