ಹಿರೇಬಂಡಾಡಿ | ತೋಟಕ್ಕೆ ನುಗ್ಗಿದ ಕಾಡೆಮ್ಮೆ!
ನಿನ್ನೆ ಬೆಳಿಗ್ಗೆ ಹಿರೇಬಂಡಾಡಿ ಗ್ರಾಮದಲ್ಲಿ ತೋಟಕ್ಕೆ ಕಾಟಿಗಳು ನುಗ್ಗಿವೆ. ಹಿರೇಬಂಡಾಡಿ ಗ್ರಾಮದ ವ್ಯಾಪ್ತಿಯ ಪಡ್ಯೋಟ್ಟು ಅಡೆಕ್ಕಲ್, ಪೆರಾಬೆ ಮುಂತಾದ ಕಡೆಗಳಲ್ಲಿ ಕಾಟಿ ಗಳು ಕಾಣ ಸಿಕ್ಕಿವೆ.
ಬೆಳಕು ಹರಿದ ಮೇಲೆ ಬೆಳಿಗ್ಗೆ 7 ಗಂಟೆಗೆ ಕಾಡೆಮ್ಮೆ ಅಡಿಕೆ ತೋಟಕ್ಕೆ ಇಳಿದದ್ದು ಆಶ್ಚರ್ಯ ಉಂಟು ಮಾಡಿದೆ. ಒಟ್ಟು ಮೂರು ಕಾಟಿಗಳು ಹಿರೇಬಂಡಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಹಮ್ಮಬ್ಬ ಶೌಕತ್ ಅಲಿಯವರ ತೋಟಕ್ಕೆ ಇಳಿದಿದ್ದವು.
ಆವಾಗಲೇ ಅವರು ತೋಟಕ್ಕೆ ಸ್ಪ್ರಿಂಕ್ಲರ್ ನಲ್ಲಿ ನೀರು ಬಿಡುತ್ತಿದ್ದರು. ಆ ಹನಿಯುವ ನೀರಿನಲ್ಲಿ ಸ್ವಲ್ಪ ಸಮಯ ಬೆನ್ನು ಚಂಡಿ ಮಾಡಿಕೊಂಡ ಕಾಟಿಗಳಲ್ಲಿ ಒಂದು ಕಾಟಿ ಸ್ಪ್ರಿಂಕ್ಲರ್ ಪಾಯಿಂಟ್ ಒಂದರಲ್ಲಿ ನೀರು ಕುಡಿಯಲು ಪ್ರಯತ್ನಿಸಿ ವಿಫಲವಾಗಿ ಮುಂದೆ ಸಾಗಿದ ದೃಶ್ಯ ಕಂಡುಬಂತು.
ಇತ್ತೀಚಿನ ವರ್ಷಗಳಲ್ಲಿ ಯಾವತ್ತೂ ಯಾರೂ ಗ್ರಾಮದಲ್ಲಿ, ತೋಟಗಳಲ್ಲಿ ಬೆಳಗಿನ ಹೊತ್ತು ಕಾಟಿಯನ್ನು ಕಂಡಿಲ್ಲ. ಕೋರೋನಾ ಕಾಲೇನ ಮನುಷ್ಯನ ಸಂಚಾರ ಎಲ್ಲೆಡೆ ವಿರಳವಾದ ಕಾರಣ ಕಾಟಿಗಳು ಬೆಳಗಿನ ಹೊತ್ತು ನಾಡಿಗೆ ಇಳಿದವಾ ? ಕೋರೋನಾ ಲಾಕ್ ಡೌನ್ ಸಂದರ್ಭಗಳಲ್ಲಿ ಹಲವು ಕಡೆ ಕಾಡು ಪ್ರಾಣಿಗಳು ಹೆದ್ದಾರಿ ರಸ್ತೆಗೆ ಇಳಿಯುತ್ತಿರುವ ಸುದ್ದಿಯನ್ನು ನಾವು ಕೇಳುತ್ತಲೇ ಇದ್ದೇವೆ. ಇದೀಗ ನಮ್ಮ ಊರಿನಲ್ಲಿಯೂ ಕಾಟಿಗಳು ರಿಯಾಲಿಟಿ ಚೆಕ್ ಗೆ ಇಳಿದಿವೆ. ಪ್ರಾಣಿಗಳು ಮನುಷ್ಯರನ್ನು ಹುಡುಕುತ್ತಿವೆ. ಬೇಗ ಕೊರೋನಾ ತೊಲಗಿಸಿ ಮತ್ತೆ ರಸ್ತೆಗೆ ಇಳಿಯೋಣ.