ಆರೋಗ್ಯ ಸಮಸ್ಯೆ ಕಂಡುಬಂದರೆ ಮುಕ್ತವಾಗಿ ಹೇಳಿ, ಭಯ ಬೇಡ | 1077ಕ್ಕೆ ಕರೆ ಮಾಡಿ| ದ.ಕ ಜಿಲ್ಲಾಧಿಕಾರಿ ಮನವಿ

ಮಂಗಳೂರು:ತಮ್ಮ ಆರೊಗ್ಯ ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ತಮ್ಮ ಮಾಹಿತಿಯನ್ನು ಮುಕ್ತವಾಗಿ ಹಂಚಿಕೊಳ್ಳಿ. ಯಾವುದೇ ಭಯ, ಆತಂಕ ಬೇಡ. ಕೆಮ್ಮು, ಜ್ವರದ ಲಕ್ಷಣ ಕಂಡು ಬಂದರೆ ಆರೋಗ್ಯ ಇಲಾಖೆಯ ಗಮನಕ್ಕೆ ತನ್ನಿ. ಇದು ನಿಮ್ಮ ಕುಟುಂಬದ ಹಾಗೂ ಇತರರ ರಕ್ಷಣೆಗಾಗಿ ನೀವು ತೆಗೆದುಕೊಳ್ಳಬೇಕಾದ ಅತ್ಯವಶ್ಯಕ ಕ್ರಮ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಯಾರೇ ಆಗಲಿ ತಾವು ವಿದೇಶ ಪ್ರಯಾಣ ಮಾಡಿದ್ದಲ್ಲಿ ಅಥವಾ ತಮಗೆ ಜ್ವರ, ಕೆಮ್ಮು, ಉಸಿರಾಟದ ತೊಂದರೆ ಇದ್ದಲ್ಲಿ ನೇರವಾಗಿ ಹತ್ತಿರದ ಫಿವರ್ ಕ್ಲಿನಿಕ್ ಸಂಪರ್ಕಿಸಲು ಕೋರಲಾಗಿರುತ್ತದೆ. ಕೋವಿಡ್ ಪರೀಕ್ಷೆಗೊಳಪಡಿಸುವ ಅಥವಾ ಗೃಹ ಅಥವಾ ಸರಕಾರಿ ನಿಗಾವಣೆಯಲ್ಲಿರುವ ಭಯದಿಂದ ಅಥವಾ ಸಂಕೋಚದಿಂದ ತಮ್ಮ ಆರೋಗ್ಯದ ವಿಷಯದ ಬಗ್ಗೆ ಸಾರ್ವಜನಿಕರು ಮುಕ್ತವಾಗಿ ತಮ್ಮ ಆರೊಗ್ಯ ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ತಮ್ಮ ಮಾಹಿತಿಯನ್ನು ಹಂಚಿಕೊಳ್ಳದಿರುವುದು ತೀರಾ ವಿಷಾದನೀಯ.

ಖಾಸಗೀ ಆಸ್ಪತ್ರೆಯ ವೈದ್ಯಾಧಿಕಾರಿಗಳಲ್ಲಿಯೂ ಸಹ ಜ್ವರ, ಉಸಿರಾಟದ ತೊಂದರೆ ಇರುವಂತಹ ರೋಗಿಗಳ ಬಗ್ಗೆ ಮಾಹಿತಿ ನೀಡಲು ಕೋರಲಾಗಿರುತ್ತದೆ. ಆದಾಗ್ಯೂ ಸಹ, ಕೆಲವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದಂತೆ ಕಂಡುಬರುವುದಿಲ್ಲ. ಈವರೆಗೆ ಪರೀಕ್ಷೆಗೊಳಪಟ್ಟಿರುವಂತಹ ಯಾವೊಬ್ಬ ವ್ಯಕ್ತಿಯ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸಿರುವುದಿಲ್ಲ.

ಸೋಂಕಿತ ಕೋವಿಡ್ ರೋಗಿಗಳ ಸಂಖ್ಯೆಗಳ ಮಾಹಿತಿಯನ್ನು ಮಾತ್ರ ಸಾರ್ವಜನಿಕರ ಮಾಹಿತಿಗಾಗಿ ನೀಡಲಾಗುತ್ತಿದೆ. ಇದು ಸಹ ಸಾರ್ವಜನಿಕರು ವಹಿಸಬೇಕಾದ ಮುಂಜಾಗರೂಕತಾ ಕ್ರಮಕ್ಕಾಗಿ ನೀಡುವ ಮಾಹಿತಿ ಆಗಿರುತ್ತದೆ.

ಆದ್ದರಿಂದ ಸಾರ್ವಜನಿಕರು ಯಾವುದೇ ಸಂಕೋಚಪಡದೆ, ತಮ್ಮ ಕುಟುಂಬದ ಹಾಗೂ ಇತರರ ರಕ್ಷಣೆಗಾಗಿ ಜನವರಿ ತಿಂಗಳಿನಿಂದ ವಿದೇಶದಿಂದ ಜಿಲ್ಲೆಗೆ ಆಗಮಿಸಿರುವ ಮಾಹಿತಿಯನ್ನು ನೀಡುವುದು ಸೂಕ್ತವಾಗಿರುತ್ತದೆ. ತಮ್ಮ ಕುಟುಂಬದಲ್ಲಿ ಯಾರಿಗಾದರೂ, ಜ್ವರ, ಕೆಮ್ಮು, ಉಸಿರಾಟದ ತೊಂದರೆ ಇದ್ದಲ್ಲಿ ಕೂಡಲೇ ಸರಕಾರಿ ವೈದ್ಯಾಧಿಕಾರಿಗಳ ಗಮನಕ್ಕೆ ತರಲು ಅಥವಾ 1077 ಸಂಖ್ಯೆಗೆ ಕಾಲ್ ಮಾಡಿ ಮಾಹಿತಿ ನೀಡಲು ವಿನಂತಿಸುತ್ತೇವೆ ಎಂದು ದ.ಕ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಮನವಿ ಮಾಡಿದ್ದಾರೆ.

Leave A Reply

Your email address will not be published.